ಭಾರತಕ್ಕೆ ಸ್ವಾತಂತ್ರ್ಯ ಎನ್ನುವುದು ಸುಲಭವಾಗಿ ದಕ್ಕಿದ್ದಲ್ಲ. ಅದಕ್ಕೆ ಪಟ್ಟ ಶ್ರಮ, ಸಮಯ ಮತ್ತು ಬಲಿದಾನಗಳು ಅಪಾರ. ನಾವೆಲ್ಲರೂ ಇಂದು ಸ್ವಾತಂತ್ರ್ಯ ಎಂದರೆ ನಮ್ಮಿಚ್ಚೆಯಂತೆ ಬದುಕುವುದು ಎಂದು ತಿಳಿದಿದ್ದೇವೆ. ಆದರೆ ನಾವು ನಮ್ಮ ಕರ್ತವ್ಯಗಳನ್ನು ಮರೆತಂತೆ ಕಾಣುತ್ತಿದೆ. ಇಂದಿನ ಈ ವಿಶೇಷ ಸಂದರ್ಭದಲ್ಲಿ ಚಿಕ್ಕದಾಗಿ ಸ್ವಾತಂತ್ರ್ಯ ಪಡೆದ ಇತಿಹಾಸ, ರಾಷ್ಟ್ರ ದ್ವಜದ ಮಹತ್ವ, ಅದಕ್ಕೆ ನಾವೆಲ್ಲಾ ನೀಡಬೇಕಾದ ಗೌರವ ಮತ್ತು ನಿಯಮಗಳ ಕುರಿತು ತಿಳಿಸುವ ಸಣ್ಣ ಪ್ರಯತ್ನ ನಮ್ಮ ಕಡೆಯಿಂದ..
ಜೂನ್ 3,1947 ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ 1947 ರ ಅನ್ವಯ ಆಗಸ್ಟ್ 15, 1947 ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ, (12.15 ರ ನಂತರ ) ಜವಾಹರ್ ಲಾಲ್ ನೆಹರು ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( ‘ಭಾಗ್ಯದೊಡನೆ ಒಪ್ಪಂದ’ ಭಾಷಣ) ಮಾಡಿದರು.
ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರಿಯಬೇಕೆಂದು ಕೇಳಿಕೊಂಡರು. ಜೂನ್ 1948 ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರನ್ನು ನೇಮಕ ಮಾಡಲಾಯಿತು. ಸರ್ದಾರ್ ಪಟೇಲರು 565 ರಾಜಸಂಸ್ಥಾನಗಳನ್ನು ಭಾರತ ಸರಕಾರದ ಜೊತೆಗೆ ಏಕೀಕರಣಗೊಳಿಸುವ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಂಡರು. ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ “ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ” ತಂತ್ರವನ್ನು ಉಪಯೋಗಿಸಿದರು.
ಸಂವಿಧಾನ ರಚನಾಸಭೆಯು ಸಂವಿಧಾನದ ಕರಡ ರಚನೆಯ ತನ್ನ ಕಾರ್ಯವನ್ನು 26 ನವೆಂಬರ್ 1949 ರಂದು ಸಂಪೂರ್ಣಗೊಳಿಸಿತು . ಜನವರಿ 26, 1950 ರಂದು ಭಾರತೀಯ ಗಣರಾಜ್ಯವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಆಯ್ಕೆ ಮಾಡಲಾಯಿತು. 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು 1954 ರಲ್ಲಿ ಒಪ್ಪಿಸಿದ ಪಾಂಡಿಚೇರಿ ಇವುಗಳನ್ನು ಸ್ವತಂತ್ರ ಭಾರತದ ಒಳಗೆ ಸೇರಿಸಿಕೊಳ್ಳಲಾಯಿತು. 1952 ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. 62 ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಈ ಮೂಲಕ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿಕೊಂಡಿತು.
ಏಕೆ ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ಕೊಟ್ಟರು
ಹೌದು. ಆಗಸ್ಟ್ 15 ಯಾಕಾಗಬೇಕಿತ್ತು? ಹೇಳಿ ಕೇಳಿ ಆ ತನಕ ಸ್ವಾತಂತ್ರ್ಯ ಚಳವಳಿಗಾರರು ಸಾಂಕೇತಿಕವಾಗಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದದ್ದು ಜನವರಿ 26ರಂದು. ಅದೂ1930 ರಿಂದಲೂ ಇದು ನಡೆದುಬಂದಿತ್ತು. ಮತ್ಯಾಕೆ ಆಗಸ್ಟ್ 15 ರಂದು ಸ್ವಾತಂತ್ರ್ಯ ಘೋಷಣೆ ಮಾಡಲಾಯಿತು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ‘ಆ ಕ್ಷಣಕ್ಕೆ ನನ್ನ ಇಚ್ಛೆಯ ಪ್ರಕಾರವೇ ಎಲ್ಲವೂ ನಡೆಯಬೇಕು ಎಂದು ನಿರ್ಧರಿಸಿ ಡಿಢೀರ್ ಆಗಿ ದಿನಾಂಕ ಪ್ರಕಟಿಸಿದೆ’ ಅಂತ ನಂತರ ಮೌಂಟ್‌ಬ್ಯಾಟನ್ ಹೇಳಿಕೊಂಡಿದ್ದಾರೆ.
ಆಗಸ್ಟ್15 ಕ್ಕೆ ಸ್ವಾತಂತ್ರ್ಯ ಕೊಟ್ಟ ಹಿನ್ನಲೆ
ಅಗಸ್ಟ್ 15 ಕ್ಕೆ ಸ್ವಾತಂತ್ರ್ಯ ಸಿಗುವ ವಿಚಾರ ತಿಳಿದು ದೇಶದ ಜನ ಸಂತೋಷಪಟ್ಟರು. ಆದರೆ ದೇಶದ ಜ್ಯೋತಿಷಿಗಳು ಆತಂಕಕ್ಕೊಳಗಾಗಿದ್ದರು. ಎಷ್ಟೇ ಗ್ರಹಗತಿ ಲೆಕ್ಕಾಚಾರ ಹಾಕಿದರೂ ಅವರ ಆತಂಕ, ದಿಗಿಲು ಕಡಿಮೆಯಾಗಲಿಲ್ಲ. ಜ್ಯೋತಿಷದ ಪ್ರಕಾರ ಆ ವರ್ಷದ ಆಗಸ್ಟ್ 15, ಶುಕ್ರವಾರವು ಪರಮ ಅಶುಭ ದಿನವಾಗಿತ್ತು. ಮಕರ ರಾಶಿಯಲ್ಲಿ ಶನಿ ಪ್ರಭಾವ ದೇಶದ ಮೇಲೆ ದಟ್ಟವಾಗಿತ್ತು. ಆ ದಿನ ಅಧಿಕಾರ ಹಸ್ತಾಂತರ ಆದರೆ ದೇಶ ಘನಘೋರ ಭವಿಷ್ಯ ಎದುರಿಸಬೇಕಾಗುತ್ತದೆ ಎಂಬ ಆತಂಕವನ್ನು ತೋಡಿಕೊಂಡರು. ಇಷ್ಟು ವರ್ಷಗಳ ಕಾಲ ಕಾದಿದ್ದಾಗಿದೆ, ಇನ್ನೊಂದು ದಿನ ಕಾಯಬಾರದೇ? ಎಂದು ಜ್ಯೋತಿಷಿಗಳು ಕಂಡ ಕಂಡವರಲ್ಲಿ ವಿಷಯ ತಿಳಿಸಿ ಕೇಳಿಕೊಂಡರು. ಕಲ್ಕತ್ತಾದಿಂದ ಸ್ವಾಮಿ ಮದನಾನಂದ ನೇರವಾಗಿ ವೈಸರಾಯ್ ಅವರಿಗೆ ಪತ್ರ ಬರೆದು, ‘ದೇವರ ಪ್ರೀತಿಯಾಗಿ ಹೇಳುತ್ತೇನೆ. ದಯಮಾಡಿ ಆಗಸ್ಟ್ 15 ರಂದು ದೇಶಕ್ಕೆಸ್ವಾತಂತ್ರ್ಯಕೊಡಬೇಡಿ. ನಿಮ್ಮ ಈ ಒಂದು ನಿರ್ಧಾರದಿಂದ ದೇಶವು ಮುಂದೆ ಕ್ಷಾಮ, ನೆರೆ, ಮಾರಣಹೋಮ ಇತ್ಯಾದಿಗಳನ್ನು ಯಥೇಚ್ಛವಾಗಿ ಕಾಣಬೇಕಾದೀತು’. ದಿನಾಂಕ ಬದಲಿಸಲು ವೈಸರಾಯ್ ಒಪ್ಪಲಿಲ್ಲ. ಜ್ಯೋತಿಷಿಗಳು ತಮ್ಮ ಹಟ ಬಿಡಲಿಲ್ಲ. ಕೊನೆಗೂ ಒಂದು ನಿರ್ಧಾರಕ್ಕೆ ಬರಲಾಯಿತು. ಬ್ರಿಟಿಷರಿಗೆ ದಿನ ಪ್ರಾರಂಭವಾಗುವುದು ರಾತ್ರಿ 12ಕ್ಕೆ, ಭಾರತದಲ್ಲಿ ದಿನ ಪ್ರಾರಂಭವಾಗುವುದು ಸೂರ್ಯೋದಯಕ್ಕೆ. ಆಗಸ್ಟ್ 14ರ ಮಧ್ಯರಾತ್ರಿಯ ವೇಳೆಗೆ ಎಲ್ಲವೂ ನಡೆದುಹೋದರೆ ಎರಡೂ ಕಡೆಯವರಿಗೂ ಸಮಾಧಾನ ಆಗುತ್ತದೆ. ಆ ಕಾರಣಕ್ಕೆ ಆಗಸ್ಟ್ 15 ರಂದು ಹಗಲು ನಡೆಯಬೇಕಾಗಿದ್ದ ಧ್ವಜಾರೋಹಣವು ಕೆಂಪುಕೋಟೆಯಲ್ಲಿ ಆಗಸ್ಟ್ 14ರ ಮಧ್ಯರಾತ್ರಿ ನಡೆದುಹೋಯಿತು. ಜ್ಯೋತಿಷಿಗಳು ನಿಟ್ಟುಸಿರಿಟ್ಟರು. ಎಲ್ಲವೂ ಕಳೆದ ಬಳಿಕ ಮೌಂಟ್‌ಬ್ಯಾಟನ್ (ಅವರು ಸ್ವಾತಂತ್ರ್ಯಾನಂತರ ಗವರ್ನರ್ ಜನರಲ್ ಆಗಿ ಒಂದು ವರ್ಷ ಮುಂದುವರಿಯುತ್ತಾರೆ) ತಮ್ಮ ಕಾರ್ಯದರ್ಶಿ ಅಲೆನ್ ಕ್ಯಾಂಪ್‌ಬೆಲ್- ಜಾನ್ಸನ್ ಅವರನ್ನು ಕರೆದು ಹೀಗೆ ಹೇಳುತ್ತಾರೆ: ‘ಯಾವುದಕ್ಕಾದರೂ ಇರಲಿ, ನಮ್ಮ ಉನ್ನತ ಮಟ್ಟದ ಸಲಹೆಗಾರರ ಬಳಗದಲ್ಲಿ ಒಬ್ಬ ಜ್ಯೋತಿಷಿಯನ್ನು ಕೂಡಾ ಸೇರಿಸಿಕೊಂಡಿರಿ’! ಸ್ವಾತಂತ್ರ್ಯದ ಮುಹೂರ್ತ ನಿರ್ಣಯದ ವಿಷಯದಲ್ಲಿ ಈ ದೇಶದ ಜ್ಯೋತಿಷ ಶಕ್ತಿಯನ್ನು ಯಾರಿಗೂ ನಿಲ್ಲಿಸಲಾಗಲಿಲ್ಲ.
ಎಲ್ಲವೂ ಶುಭಮುಹೂರ್ತದಲ್ಲಿ ನಡೆಯಿತು ಎನ್ನುವ ಕಾರಣಕ್ಕೆ ದೇಶ ಕ್ಷಾಮ, ಡಾಮರ, ನೆರೆ, ಬರ, ಮಾರಣಹೋಮಗಳಿಂದ ಮುಕ್ತವಾಗಲಿಲ್ಲ ಎಂದು ಜ್ಯೋತಿಷ್ಯ ನಂಬದವರು ನಗಬಹುದು. ಜ್ಯೋತಿಷ್ಯ ನಂಬುವವರು ಮೌಂಟ್‌ಬ್ಯಾಟನ್ ನಿರ್ಧರಿಸಿದ್ದ ಅದೇ ಅಶುಭ ಮುಹೂರ್ತದಲ್ಲೇ ಎಲ್ಲವೂ ನಡೆದುಹೋಗಿದ್ದರೆ ಈ ಎಲ್ಲಾ ಸಂಕಷ್ಟಗಳೂ ಇನ್ನೂ ಹೆಚ್ಚಿಗೆ ನಡೆದು ದೇಶ ವಿನಾಶವಾಗುತ್ತಿತ್ತು ಅಂತ ವಾದಿಸುತ್ತಾ ಇರಬಹುದು.
ಅಶೋಕ್ ಚಕ್ರದ 24 ಕಡ್ಡಿಗಳ ಅರ್ಥವೇನು?
ಅಶೋಕ ಚಕ್ರವು “ಧರ್ಮಚಕ್ರ” ದ ಚಿತ್ರಣವಾಗಿದೆ; 24 ಕಡ್ಡಿಗಳೊಂದಿಗೆ ನಿರೂಪಿಸಲಾಗಿದೆ. ಅಶೋಕ್ ಚಕ್ರವನ್ನು ಕರ್ತವ್ಯದ ಚಕ್ರ ಎಂದೂ ಕರೆಯುತ್ತಾರೆ. ಈ 24 ಕಡ್ಡಿಗಳು ವ್ಯಕ್ತಿಯ 24 ಗುಣಗಳನ್ನು ಪ್ರತಿನಿಧಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಕಡ್ಡಿಗಳನ್ನು ಮನುಷ್ಯರಿಗಾಗಿ ಮಾಡಿದ 24 ಧಾರ್ಮಿಕ ಮಾರ್ಗಗಳು ಎಂದು ಕರೆಯಬಹುದು. ಅಶೋಕ್ ಚಕ್ರದಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾರ್ಗಗಳು ಯಾವುದೇ ದೇಶವನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸುತ್ತದೆ. ನಮ್ಮ ರಾಷ್ಟ್ರೀಯ ಧ್ವಜದ ವಿನ್ಯಾಸಕರು ಅದರಿಂದ ಚರಖವನ್ನು ತೆಗೆದುಹಾಕಿ ಮತ್ತು ಅಶೋಕ್ ಚಕ್ರವನ್ನು ಧ್ವಜದ ಮಧ್ಯದಲ್ಲಿ ಇರಿಸಲು ಇದು ಬಹುಶಃ ಕಾರಣವಾಗಿದೆ .
ಅಶೋಕ್ ಚಕ್ರದಲ್ಲಿನ ಅರ್ಥವೇನು..
1. ಪರಿಶುದ್ಧತೆ (ಸರಳ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ)
2. ಆರೋಗ್ಯ (ದೇಹ ಮತ್ತು ಮನಸ್ಸಿನಿಂದ ಆರೋಗ್ಯವಾಗಿರಲು ಪ್ರೇರೇಪಿಸುತ್ತದೆ)
3. ಶಾಂತಿ (ದೇಶಾದ್ಯಂತ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು)
4. ತ್ಯಾಗ (ದೇಶ ಮತ್ತು ಸಮಾಜದ ಸಲುವಾಗಿ ಯಾವುದೇ ತ್ಯಾಗಕ್ಕೆ ಸಿದ್ಧರಾಗಿರಬೇಕು)
5. ನೈತಿಕತೆ (ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ನೈತಿಕತೆಯನ್ನು ಕಾಪಾಡಿಕೊಳ್ಳಲು)
6. ಸೇವೆ (ಅಗತ್ಯವಿದ್ದಾಗ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಿದ್ಧವಾಗಿದೆ)
7. ಕ್ಷಮೆ (ಮಾನವರು ಮತ್ತು ಇತರ ಜೀವಿಗಳ ಬಗ್ಗೆ ಕ್ಷಮೆಯ ಭಾವನೆ)
8. ಪ್ರೀತಿ (ದೇಶ ಮತ್ತು ದೇವರ ಎಲ್ಲಾ ಜೀವಿಗಳ ಬಗ್ಗೆ ಪ್ರೀತಿಯ ಭಾವನೆ)
9. ಸ್ನೇಹ (ಎಲ್ಲಾ ನಾಗರಿಕರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು)
10. ಭ್ರಾತೃತ್ವ (ದೇಶದಲ್ಲಿ ಸಹೋದರತ್ವದ ಪ್ರಜ್ಞೆಯನ್ನು ಬೆಳೆಸಲು)
11. ಸಂಘಟನೆ (ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವುದು)
12. ಕಲ್ಯಾಣ (ದೇಶ ಮತ್ತು ಸಮಾಜಕ್ಕೆ ಸಂಬಂಧಿಸಿದ ಕಲ್ಯಾಣ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ)
13. ಸಮೃದ್ಧಿ (ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ)
14. ಕೈಗಾರಿಕೆ (ದೇಶವನ್ನು ಅದರ ಕೈಗಾರಿಕಾ ಪ್ರಗತಿಗೆ ಸಹಾಯ ಮಾಡಲು)
15. ಸುರಕ್ಷತೆ (ದೇಶದ ರಕ್ಷಣೆಗೆ ಯಾವಾಗಲೂ ಸಿದ್ಧರಾಗಿರಬೇಕು)
16. ಜಾಗೃತಿ (ಸತ್ಯದ ಬಗ್ಗೆ ತಿಳಿದಿರಲು ಮತ್ತು ವದಂತಿಗಳನ್ನು ನಂಬಬೇಡಿ)
17. ಸಮಾನತೆ (ಸಮಾನತೆಯ ಆಧಾರದ ಮೇಲೆ ಸಮಾಜವನ್ನು ಸ್ಥಾಪಿಸುವುದು)
18. ಅರ್ಥಾ (ಹಣದ ಅತ್ಯುತ್ತಮ ಬಳಕೆ)
19. ನೀತಿ (ದೇಶದ ನೀತಿಯಲ್ಲಿ ನಂಬಿಕೆ ಇಡುವುದು )
20. ನ್ಯಾಯ (ಎಲ್ಲರಿಗೂ ನ್ಯಾಯದ ಬಗ್ಗೆ ಮಾತನಾಡುವುದು)
21. ಸಹಕಾರ (ಒಟ್ಟಿಗೆ ಕೆಲಸ ಮಾಡುವುದು)
22. ಕರ್ತವ್ಯಗಳು (ನಿಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಲು)
23. ಹಕ್ಕುಗಳು (ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ)
24. ಬುದ್ಧಿವಂತಿಕೆ (ಪುಸ್ತಕಗಳನ್ನು ಮೀರಿ ಜ್ಞಾನವನ್ನು ಹೊಂದಲು)
ಅಶೋಕ ಚಕ್ರದ ಗಾತ್ರ ಮತ್ತು ಅಳತೆ
ಅಶೋಕ ಚಕ್ರದ ಗಾತ್ರ ಇಷ್ಟೇ ಇರಬೇಕು ಎಂಬ ಸ್ಪಷ್ಟ ನಿಯಮಾವಳಿಯೇನೂ ಇಲ್ಲ. ಆದರೆ ಇದು ಗಾಢನೀಲಿ ಬಣ್ಣದ್ದಾಗಿದ್ದು ಇದರಲ್ಲಿರುವ ಇಪ್ಪತ್ತನಾಲ್ಕು ಕಡ್ಡಿಗಳೂ ಸಮಾನಾಂತರವಾಗಿರಬೇಕು ಹಾಗೂ ಧ್ವಜದ ನಡುವೆ, ಬಿಳಿಪಟ್ಟಿಯ ಮೇಲೆ ಮಾತ್ರವೇ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು. ಇದರ ಅಂಚು ಬಿಳಿ ಪಟ್ಟಿಯನ್ನು ದಾಟುವಂತಿಲ್ಲ.
ಶದ ಪ್ರಮುಖ ಸ್ಥಳಗಳಲ್ಲಿ ಬಳಸಲಾಗುವ ಈ ರಾಷ್ಟ್ರಧ್ವಜ ತಯಾರಾಗುವುದು ನಮ್ಮ ಕರ್ನಾಟಕದಲ್ಲಿಯೇ (ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮ) ಎಂಬುದು ನಮಗೊಂದು ಹೆಮ್ಮೆಯ ವಿಷಯ. ಇದನ್ನು ಸುಖಾಸುಮ್ಮನೇ ನಮಗೆ ಮನಸ್ಸಿಗೆ ಬಂದಂತೆ ಹೊಲಿದು ಬಳಸುವಂತಿಲ್ಲ. ಇದರ ತಯಾರಿಕೆಯಲ್ಲಿ ಹಲವು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ. ನಮ್ಮ ರಾಷ್ಟ್ರ ಧ್ವಜವನ್ನು ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ್ದಾರೆ. ಇವರು ಓರ್ವ ಪ್ರಗತಿಪರ ಕೃಷಿಕರಾಗಿದ್ದು ಸ್ವತಂತ್ರ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರಾಂತಿಗೆ ಕಾರಣರಾಗಿದ್ದರು.
ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ
ರಾಷ್ಟ್ರ ಧ್ವಜವನ್ನು ನಮಗೆ ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ. ಬದಲಿಗೆ, ಕಾನೂನು ಸ್ಪಷ್ಟಪಡಿಸಿದಂತೆ ಇದನ್ನು ಖಾದಿ ಬಟ್ಟೆಯಿಂದಲೇ ತಯಾರಿಸಲಾಗುತ್ತದೆ. ಇದರ ಬಟ್ಟೆಯನ್ನು ಚರಕ ಬಳಸಿ ತಯಾರಿಸಿದ ಹತ್ತಿಯ ನೂಲುಗಳನ್ನು ನೇದಿದ ಬಟ್ಟೆಯನ್ನೇ ಬಳಸಬೇಕಾಗುತ್ತದೆ. ಈ ನೂಲುಗಳನ್ನು ಮಹಾತ್ಮಾಗಾಂಧಿಯವರು ಚರಕದಿಂದ ತಯಾರಿಸುತ್ತಿದ್ದ ರೀತಿಯಲ್ಲಿಯೇ ತಯಾರಿಸಲಾಗುತ್ತದೆ.
ಮೂರು ಬಣ್ಣಗಳ ವಿಶೇಷಗಳು
ಕೇಸರಿ: ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ.
ಬಿಳಿಬಣ್ಣ: ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ.
ಹಸಿರು ಬಣ್ಣ: ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ.
ಭಾರತದ ಧ್ವಜಕ್ಕೂ ಒಂದು ನಿಯಮಾವಳಿ ಇದೆ. ಇದರ ಪ್ರಕಾರ ಉದ್ದ ಮತ್ತು ಅಗಲಗಳು, ಎರಡು:ಮೂರರ ಅನುಪಾನದಲ್ಲಿಯೇ ಇರುವುದು ಕಡ್ಡಾಯ. ಅಂದರೆ ಅಗಲಕ್ಕಿಂತಲೂ ಉದ್ದ ಒಂದೂವರೆ ಪಟ್ಟು ಇರಬೇಕು. ಮೂರೂ ಬಣ್ಣಗಳು ಸಮಾನವಾದ ಅಗಲ ಮತ್ತು ಉದ್ದವನ್ನು ಹೊಂದಿರಬೇಕು. ಅಲ್ಲದೇ ಅಶೋಕ ಚಕ್ರವನ್ನು ಧ್ವಜದ ಎರಡೂ ಬದಿಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು. ಸಾಮಾನ್ಯವಾಗಿ ರಾಷ್ಟ್ರಧ್ವಜವನ್ನು ಒಂಭತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ. ಅತಿ ಚಿಕ್ಕದ್ದು 6×4 ಇಂಚು ಗಾತ್ರ ಹೊಂದಿದ್ದರೆ ಪ್ರಮುಖ ಕಟ್ಟಡಗಳ ಮೇಲೆ ರಾಷ್ಟ್ರವನ್ನು ಪ್ರತಿನಿಧಿಸುವ ದೊಡ್ಡ ಧ್ವಜಗಳು 21×14 ಅಡಿಯಷ್ಟು ವಿಶಾಲವಾಗಿರುತ್ತವೆ. ದೆಹಲಿಯ ಕೆಂಪುಕೋಟೆ, ರಾಷ್ಟ್ರಪತಿ ಭವನ ಮೊದಲಾದ ಕಟ್ಟಡಗಳ ಮೇಲೆ ಮಧ್ಯಮ ಗಾತ್ರದ, ಅಂದರೆ 12×8 ಅಡಿಯ ಅಳತೆಯ ಧ್ವಜವನ್ನು ಹಾರಿಸಲಾಗುತ್ತದೆ.
ರಾಷ್ಟ್ರಧ್ವಜ ಹಾರಿಸುವವರು ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮಗಳು
- ರಾಷ್ಟ್ರಧ್ವಜವನ್ನು ಹಗಲಿನಲ್ಲಿ, ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರವೇ ಹಾರಿಸಲು ಅನುಮತಿ ಇದೆ. ಆದ್ದರಿಂದ ಧ್ವಜ ಹಾರಿಸುವ ಜವಾಬ್ದಾರಿ ಹೊಂದಿರುವ ವ್ಯಕ್ತಿಗಳು ತಪ್ಪದೇ ಸೂರ್ಯಾಸ್ತಕ್ಕೂ ಮುನ್ನ ಧ್ವಜವನ್ನು ಇಳಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮರೆತು ರಾತ್ರಿಯೂ ಧ್ವಜ ಹಾರುತ್ತಿದ್ದರೆ ಇದು ಕಾನೂನಿನ ಉಲ್ಲಂಘನೆಯಾಗಿದ್ದು ಜವಾಬ್ದಾರಿ ಹೊಂದಿದ ವ್ಯಕ್ತಿಗಳನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಬಂಧಿಸಲೂ ಬಹುದಾಗಿದೆ. ಆದರೆ 2009 ರಲ್ಲಿ ಪ್ರಸ್ತುತಪಡಿಸಲಾದ ಪ್ರಣಾಳಿಕೆಯ ಪ್ರಕಾರ ಒಂದು ವೇಳೆ ರಾತ್ರಿ ನಡೆಯುವ ಪ್ರಮುಖ ಕಾರ್ಯಕ್ರಮದಲ್ಲಿ (ಉದಾಹರಣೆಗೆ ಕ್ರೀಡಾಕೂಟ) ರಾಷ್ಟ್ರಧ್ವಜ ಹಾರಿಸುವುದು ಅಗತ್ಯವಾಗಿದ್ದರೆ ರಾಷ್ಟ್ರಧ್ವಜ ಹಾರಿಸಬಹುದು, ಆದರೆ ಇದು ಸ್ಪಷ್ಟವಾಗಿ ಕಾಣುವಂತೆ ಬೆಳಕಿನ ವ್ಯವಸ್ಥೆಯನ್ನು ಒದಗಿಸುವುದು ಸಹಾ ಕಡ್ಡಾಯವಾಗಿದೆ. ಅಲ್ಲದೇ ಈ ಉದ್ದೇಶ ಪೂರ್ಣಗೊಂಡ ಬಳಿಕ ಧ್ವಜವನ್ನು ತಪ್ಪದೇ ಇಳಿಸಬೇಕು.
- ರಾಷ್ಟ್ರದ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು.
- ಅಪ್ಪಿತಪ್ಪಿಯೂ ಹಸಿರು ಬಣ್ಣ ಮೇಲೆ ಬರದಂತೆ ಎಚ್ಚರ ವಹಿಸಬೇಕು.
- ಬೆಂಕಿ, ಮಳೆ, ಬಿರುಗಾಳಿ ಮೊದಲಾದ ಸಂದರ್ಭದಲ್ಲಿ ಧ್ವಜ ಹಾಳಾಗುವ ಸಂದರ್ಭವಿದ್ದರೆ ತಕ್ಷಣ ಇಳಿಸಬೇಕು ಹಾಗೂ ಧ್ವಜ ಹಾಳಾಗುವುದನ್ನು ತಪ್ಪಿಸಬೇಕು.
- ಕ್ರೀಡಾಂಗಣಗಳಲ್ಲಿ, ರಾಷ್ಟ್ರನಾಯಕರ ಆಗಮನ ಮೊದಲಾದ ಸಂದರ್ಭದಲ್ಲಿ ಸಾವಿರಾರು, ಲಕ್ಷಾಂತರ ಕಾಗದದ ಚಿಕ್ಕ ಬಾವುಟಗಳನ್ನು ಬಳಸಲಾಗುತ್ತದೆ. ಆದರೆ ಈ ಸಂದರ್ಭ ಕೊನೆಗೊಂಡ ಬಳಿಕ ಜನರು ಈ ಧ್ವಜಗಳನ್ನು ಎತ್ತೆತ್ತಲೋ ಎಸೆಯುತ್ತಾರೆ.
- ಆದರೆ ಈ ಬಾವುಟಗಳನ್ನು ತ್ಯಾಜ್ಯದ ರೂಪದಲ್ಲಿ ಎಸೆಯುವುದನ್ನು ಪ್ರತಿಬಂಧಿಸಲಾಗಿದ್ದು ಇವನ್ನು ಒಟ್ಟುಗೂಡಿಸಿ ಪ್ರತ್ಯೇಕವಾಗಿ ಗೌರವಪೂರ್ಣವಾಗಿ ನಾಶಪಡಿಸಬೇಕು.
ಅನೇಕ ಮಾಹಿತಿಗಳನ್ನು wikipedia ದಿಂದ ಪಡೆಯಲಾಗಿದೆ.
ಇದನ್ನೂ ಓದಿರಿ: ಸ್ವಾತಂತ್ರ್ಯೋತ್ಸವದ ಸಂಭ್ರಮ: ಆತ್ಮೀಯತೇಯ ಬಂಧವೇ ಸ್ವಾತಂತ್ರ್ಯ…