ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

health-benefits-of-abhyanga-snana-on-deepavali

ದೀಪಾವಳಿಯ ಹಬ್ಬದಲ್ಲಿ ಎಣ್ಣೆ ಸ್ನಾನಕ್ಕೆ (ಅಭ್ಯಂಜನ) ವಿಶೇಷವಾದ ಮಹತ್ವವಿದೆ. ನರಕ ಚತುರ್ದಶಿಯಂದು ಬೆಳಗ್ಗೆ ಎಲ್ಲರೂ ಎಣ್ಣೆಯ ಸ್ನಾನವನ್ನು ಮಾಡುವ ಮೂಲಕ ಹಬ್ಬದ ಆಚರಣೆಯನ್ನು ಪ್ರಾರಂಭಿಸುವುದು ವಾಡಿಕೆ. ಆ ದಿನ ತೈಲದಲ್ಲಿ ಲಕ್ಷ್ಮಿಯು ಮತ್ತು ಜಲದಲ್ಲಿ ಗಂಗೆಯು ನೆಲಸಿರುವಳೆಂಬ ನಂಬಿಕೆಯಿದೆ. ಆದ್ದರಿಂದ ಅಭ್ಯಂಗ ಸ್ನಾನ ಮಾಡುವುದರಿಂದ ದಾರಿದ್ರ್ಯ ದೂರವಾಗುವುದು ಮತ್ತು ಯಮಲೋಕದಿಂದ ಪಾರಾಗುವನು ಎಂಬ ನಂಬಿಕೆಗಳು ಇವೆ.

ದೀಪಾವಳಿಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎಣ್ಣೆಯ ಸ್ನಾನವನ್ನು ಮಾಡುವುದರಿಂದ ಗಂಗಾ ಸ್ನಾನದ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ಪಾಪಗಳು ನಿವಾರಣೆಯಾಗಿ, ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇವೆಲ್ಲ ಪುರಾಣಗಳಲ್ಲಿ ಹೇಳಿರುವ ಭಕ್ತಿಯ ವಿಚಾರಗಳಾದರೆ ಆಯುರ್ವೇದದಲ್ಲಿಯೂ ಅಭ್ಯಂಜನ ಸ್ನಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ..

ಇದನ್ನೂ ಓದಿರಿ: ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!

ಅಭ್ಯಂಜನ ಸ್ನಾನ ಹೇಗೆ ಮಾಡುವುದು ನಿಮಗೆ ಗೊತ್ತೇ ?

ಅಭ್ಯಂಜನ ಸ್ನಾನಕ್ಕಾಗಿ ಎಳ್ಳೆಣ್ಣೆ ಅಥವಾ ಹರಳೆಣ್ಣೆ ಯಾವುದನ್ನಾದರೂ ಸರಿ, ಚೆನ್ನಾಗಿ ಕಾಯಿಸಿ ನಮ್ಮ ದೇಹವು ತಡೆಯುವಷ್ಟು ಬಿಸಿಯಿಂದ ತಲೆಗೆ ಹಚ್ಚಿಕೊಳ್ಳಬೇಕು. ಯಾವಾಗಲೂ ನಾವು ಕುಳಿತು, ಆದರೇ  ನೆಲದ ಮೇಲೆ ಆಸನ ವಿಲ್ಲದೆ ಕುಳಿತುಕೊಳ್ಳಬಾರದು. ಆನಂತರ ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ನಮ್ಮ ಪೂರ್ವಜರು ಕೂಡ ಯಾವುದೇ ಕಾರಣಕ್ಕೂ ಬರಿ ನೆಲದ ಮೇಲೆ ಕುಳಿತುಕೊಂಡು ಎಣ್ಣೆಹಚ್ಚಿ ಕೊಳ್ಳುತ್ತಿರಲಿಲ್ಲ. ಯಾವುದಾದರೂ ಮಣೆ  ಹಾಕಿಕೊಂಡೆ ಕುಳಿತು ಹೆಣ್ಣೆ ಹಚ್ಚಿಕೊಳ್ಳಲು ಹೇಳುತ್ತಿದ್ದರು. ನಮ್ಮ ಮನೆಯಲ್ಲಿ ಅಜ್ಜಿಯವರು ಬರೀ ನೆಲದ ಕುಳಿತು ಎಣ್ಣೆ ಹಚ್ಚಿಕೊಳ್ಳಬೇಡ ನೆಲ ಗ್ರಹ ಬಡಿಯುತ್ತದೆ ಎಂದು ಹೇಳುತ್ತಿದ್ದರು. ವೈಜ್ಞಾನಿಕವಾಗಿ ಕೂಡ ಅದು ನಮ್ಮ ದೇಹದ ಅಯಸ್ಕಾಂತೀಯ ಶಕ್ತಿಯನ್ನು ಎಳೆಯುತ್ತದೆ ಎಂದು ಹೇಳಲಾಗುತ್ತದೆ.
health-benefits-of-abhyanga-snana-on-deepavali
ಎಣ್ಣೆ ಹಚ್ಚಿ ಕೊಳ್ಳಬೇಕಾದರೆ ಪೂರ್ವಕ್ಕೆ ತಿರುಗಿ ಕುಳಿತು ಹಚ್ಚಿಕೊಳ್ಳಬೇಕು. ತಲೆಗೆ ಹಚ್ಚಿದ ನಂತರ, ಒಂದೆರಡು ಸಲ ನಿದಾನಕ್ಕೆ ನೆತ್ತಿ ಬಾಯಿಗೆ ತಟ್ಟಿ ತಟ್ಟಿ ಎಣ್ಣೆಯನ್ನು ತಲೆಯಲ್ಲಿ ಎಣ್ಣೆ ಹೀರಿಕೊಳ್ಳುವಂತೆ ಮಾಡಬೇಕು. ಆನಂತರ ಅಂಗಾಲಿಗೆ ಮತ್ತು ನಿಧಾನಕ್ಕೆ ದೇಹದ  ಎಲ್ಲ ಕಡೆಗೂ ಹಚ್ಚಿಕೊಳ್ಳಬೇಕು. ಬೆನ್ನುಹುರಿ ಮತ್ತು ಹೊಕ್ಕಳಿಗೆ ಎಣ್ಣೆ ಇಲ್ಲದೆ ಅಭ್ಯಂಜನ ಸ್ನಾನವು ಪೂರ್ಣವಾಗುವುದಿಲ್ಲ.
ಖಾಲಿ ಹೊಟ್ಟೆಯಲ್ಲಿಯೇ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಎಣ್ಣೆಯನ್ನು ನಮ್ಮ ದೇಹಕ್ಕೆ ಚೆನ್ನಾಗಿ ಕುಡಿಸಬೇಕು. ಆಗ ನಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ಚರ್ಮವು ಹೊಳೆಯುವಂತೆ ಆಗುತ್ತದೆ. ತಲೆಗೆ ಎಣ್ಣೆ ಹಚ್ಚಿಕೊಂಡು ಊರಲ್ಲ ಸುತ್ತುವವರೂ ಇದ್ದಾರೆ. ಅದು ಅನಾರೋಗ್ಯವನ್ನು ಉಂಟುಮಾಡುತ್ತದೆ. ಚಿಕ್ಕಂದಿನಲ್ಲಿ ನಮ್ಮ ಅಜ್ಜಿಯವರು ತಲೆಗೆ ಎಣ್ಣೆ ಹಚ್ಚಿ, ಹಿತ್ತಲೆ ಕಡೆ ಕೂಡ ಹೋಗಲು ನಮ್ಮನ್ನು ಬಿಡುತ್ತಿರಲಿಲ್ಲ. ಎಣ್ಣೆ ತಲೆಗೆ ಚಿಟಿಕೆ ಸೀಗೆಪುಡಿ ಯನ್ನಾದರೂ ಹಾಕಿಕೊಂಡು ಹೋಗು ಎನ್ನುತ್ತಿದ್ದರು. ಕಾರಣ ಅತಿಮಾನುಷ ಶಕ್ತಿಗಳು ನಮ್ಮನ್ನು ಅಟಕಾಯಿಸಿಕೊಂಡು ಬಿಡುತ್ತದೆ ಎಂದು ಅವರು ಹೇಳುತ್ತಿದ್ದರು. ವೈಜ್ಞಾನಿಕವಾಗಿ ನೋಡಿದರೂ ಕೂಡ ಅನಾರೋಗ್ಯ ಉಂಟಾಗುತ್ತದೆ. ಸೂರ್ಯನ ಕಿರಣಗಳು ಎಣ್ಣೆ ಹಚ್ಚಿದ ತಲೆಗೆ ಬಿದ್ದಾಗ ನಿಶ್ಯಕ್ತಿ ಮತ್ತು ಸುಸ್ತು ಇದರ ಜೊತೆಗೆ ತಲೆಸುತ್ತುವುದು ಕೂಡ ಆಗುವುದು.
health-benefits-of-abhyanga-snana-on-deepavali

ಅಭ್ಯಂಜನ ಸ್ನಾನದಿಂದಾಗುವ ಆರೋಗ್ಯ ಪ್ರಯೋಜನಗಳು

ಅಭ್ಯಂಜನ ಸ್ನಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಅನುಕೂಲವಾಗುವಂತಹ ಅನೇಕ ಪ್ರಯೋಜನಗಳು ಉಂಟಾಗುತ್ತವೆ. ಅವುಗಳನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ..

  • ಎಣ್ಣೆಯ ಮಜ್ಜನ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಇದಲ್ಲದೆ ಚರ್ಮದ ಮೇಲೆ ಮೂಡಿರುವ ಸುಕ್ಕು, ಸ್ಟ್ರೆಚ್ ಮಾರ್ಕ್ ನಿವಾರಣೆಯಾಗುತ್ತದೆ.
  • ಎಣ್ಣೆಯ ಸ್ನಾನದಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿ ಇರುತ್ತದೆ. ಇದಲ್ಲದೇ ಚಳಿಗಾಲವು ಆರಂಭವಾಗಿರುವುದರಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ಬಿರುಕುಗಳು ನಿವಾರಣೆಯಾಗುತ್ತದೆ.
  • ಅಭ್ಯಂಜನ ಸ್ನಾನ ಮಾಡುವುದರಿಂದ ದೇಹದಲ್ಲಿ ಶೇಖರಣೆಯಾದ ಜಿಡ್ಡಿನ ಅಂಶ ದೂರವಾಗುತ್ತದೆ. ಇದರೊಂದಿಗೆ ದೇಹದ ರೋಗನಿರೋಧಕ ಶಕ್ತಿಯು ವೃದ್ಧಿಯಾಗಲು ಸಹಕಾರಿಯಾಗಿದೆ.
  • ತಲೆ ನೋವು, ಕೈ-ಕಾಲು ನೋವು, ದೇಹದ ಸೆಳೆತದ ತೊಂದರೆಗಳು ಅತೀ ಶೀಘ್ರದಲ್ಲಿಯೇ ನಿವಾರಣೆಯಾಗುತ್ತದೆ. ನೋವು ಕಾಡುತ್ತಿರುವ ಭಾಗಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನವನ್ನು ಮಾಡುವುದರಿಂದ ಮುಕ್ತಿ ದೊರೆಯುತ್ತದೆ.
  • ಅಸ್ವಸ್ಥತೆ, ಕೂದಲಿನ ಸಮಸ್ಯೆ, ದೃಷ್ಟಿ ದೋಷ ಸಮಸ್ಯೆಗಳಿಂದ ನಮ್ಮನ್ನು ದೂರಗೊಳಿಸಿ, ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.
  • ಕಷ್ಟದ ಕೆಲಸಗಳನ್ನು ಮಾಡಿ, ಬಳಲಿರುವ ಮಾಂಸಖಂಡಗಳಿಗೆ ಪುನಶ್ಚೇತನ ನೀಡಲು ಅಭ್ಯಂಜನ ಸ್ನಾನ ತುಂಬಾ ಸಹಕಾರಿಯಾಗಿದೆ.
  • ಎಣ್ಣೆಯ ಸ್ನಾನದಿಂದ ದೇಹದ ಮೂಳೆಗಳು ಭಲಗೊಳ್ಳುತ್ತವೆ. ನಮ್ಮ ದೇಹಕ್ಕೆ ಬೇಕಾದಂತಹ ಪುಷ್ಟಿಕರವಾದ ಆರೋಗ್ಯ ನೀಡಲು ಇದು ಸಹಕಾರಿಯಾಗಿದೆ.
  • ಎಣ್ಣೆಯ ಸ್ನಾನವು ನರಗಳ ಚೇತರಿಕೆಗೆ ಸಹಕಾರಿಯಾಗಿದೆ. ನರಗಳ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ನಾನ ಮಾಡುವುದರಿಂದ ಶೀಘ್ರವೇ ಗುಣವಾಗುವುದು.
  • ಎಣ್ಣೆಯ ಸ್ನಾನವನ್ನು ಮಾಡುವುದರಿಂದ, ಪಾದಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿದ್ರೆಯ ಸಮಸ್ಯೆ ದೂರವಾಗುತ್ತದೆ. ಇದರಿಂದಾಗಿ ಉತ್ತಮ ನಿದ್ರೆಯು ಬರುತ್ತದೆ.

ಇದನ್ನೂ ಓದಿರಿ: ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದುಗಳು

health-benefits-of-abhyanga-snana-on-deepavali

ಯಾರು ಅಭ್ಯಂಜನ ಸ್ನಾನವನ್ನು ಮಾಡಬಾರದು ?

ಅಭ್ಯಂಜನ ಸ್ನಾನವನ್ನು ಅತಿ ಹೆಚ್ಚು ಶೀತವಾಗಿರುವವರು, ಋತುಮತಿಯಾಗಿ ಇರುವವರು, ತುಂಬಿದ ಬಸುರಿಯರು, ಜ್ವರ ಬಂದವರು, ಅನಾರೋಗ್ಯದಲ್ಲಿ ಇರುವಾಗ, ಹೊಟ್ಟೆ ತುಂಬಾ ಊಟ ಮಾಡಿದ ನಂತರ ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾಡುವುದು ಆರೋಗ್ಯಕರವಲ್ಲ.
ಹಿರಿಯರು ಹೆಣ್ಣುಮಕ್ಕಳಿಗೆ ಶುಕ್ರವಾರ ಮತ್ತು ಮಂಗಳವಾರ ಎಣ್ಣೆ ಸ್ನಾನವನ್ನು ಮಾಡಲು ಹೇಳುತ್ತಿದ್ದರು. ಗಂಡು ಮಕ್ಕಳು ಸೋಮವಾರ ಮತ್ತು ಶನಿವಾರ ಎಣ್ಣೆ ಸ್ನಾನವನ್ನು ಮಾಡಲು ಸೂಚಿಸುತ್ತಿದ್ದರು. ಈಗ ಅವಸರದ ದಿನಗಳಲ್ಲಿ ಇರುವುದರಿಂದ ಭಾನುವಾರ ಸೂಕ್ತವೆಂದು ಹೇಳಬಹುದು. ದೀಪ ಹಚ್ಚಿದ ನಂತರ ತಲೆಗೆ ಹರಳೆಣ್ಣೆಯನ್ನು ಅಥವಾ ಎಳ್ಳೆಣ್ಣೆಯನ್ನು ಹಚ್ಚಿಕೊಳ್ಳಬಾರದು ಎಂದು ಹೇಳುತ್ತಿದ್ದರು ಕಾರಣ, ಸೂರ್ಯಸ್ತಮವಾದ ನಂತರ ತಲೆಯಲ್ಲಿ ಎಣ್ಣೆ ಇದ್ದರೆ ಶೀತವಾಗುವ ಸಂದರ್ಭವೂ ಹೆಚ್ಚು. ನಮ್ಮ ಪೂರ್ವಿಕರು ಏನೆಲ್ಲಾ ಶಾಸ್ತ್ರಗಳನ್ನು ಮಾಡಿರುತ್ತಾರೋ ಅಲ್ಲೆಲ್ಲ ಯಾವುದೋ ಒಂದು ವೈಜ್ಞಾನಿಕ ಹಿನ್ನೆಲೆ ಇದ್ದೇ ಇರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಈ ಎಲ್ಲ ಕಾರಣಗಳಿಂದಾಗಿ ದೀಪಾವಳಿಯ ಹಬ್ಬದಲ್ಲಿ ಎಣ್ಣೆ ಸ್ನಾನಕ್ಕೆ ಮಹತ್ವಪೂರ್ಣವಾಗಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಆರೋಗ್ಯದ ಹಾದಿಯಲ್ಲಿ ನಾವೆಲ್ಲಾ ನಡೆಯುತ್ತಾ ಇಂದಿನ ಒತ್ತಡದ ಜೀವನ ಶೈಲಿಯಿಂದ ಆರೋಗ್ಯದೆಡೆಗೆ ಒಂದೊಂದೇ ಹೆಜ್ಜೆಯನ್ನು ಹಾಕೋಣ..

1 COMMENT

LEAVE A REPLY

Please enter your comment!
Please enter your name here