ನಮ್ಮ ಇಂದಿನ ಆಹಾರ ಸೇವನೆಯ ಕ್ರಮಗಳಿಂದಾಗಿ ಹಲವಾರು ರೋಗಗಳು ನಮ್ಮನ್ನು ಬೆನ್ನುಹತ್ತಿವೆ. ನಮಗೆ ಬೇಕಾದ ತಿಂಡಿಗಳನ್ನು ಯಾವಾಗೆಂದರೆ ಅವಾಗ ತಿನ್ನುವುದರಿಂದಾಗಿ ನಮ್ಮ ದೇಹಕ್ಕೆ ವಿರುದ್ಧಾಹಾರಗಳು ಸೇರಿ ಅನೇಕ ಕಾಯಿಲೆಗಳನ್ನು ತರುತ್ತಿವೆ. ನಮ್ಮ ಊಟದಲ್ಲಿ ಯಾವೆಲ್ಲ ರೀತಿಯಲ್ಲಿ ವಿರುದ್ಧಾಹಾರ ಸೇವನೆಯಾಗುತ್ತಿದೆ ಮತ್ತು ಹೇಗೆಲ್ಲ ಅವುಗಳನ್ನು ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಯಾವುದೇ ಯಾವುದೇ ಸಮಾರಂಭಗಳಿಗೆ ಹೋದರೂ ಅಲ್ಲಿ ಭಫೆ (ಊಟದ ತಟ್ಟೆಯನ್ನು ಕೈಯಲ್ಲಿ ಹಿಡಿದು ಬೇಕಾದ ಆಹಾರವನ್ನು ಹಾಕಿಸಿಕೊಂಡು ಸೇವಿಸುವುದು) ಊಟ ವಿಧಾನ ಇದ್ದೇ ಇರುತ್ತದೆ. ಅಲ್ಲಿ ನಿಮಗೆ ಸೌತೆಕಾಯಿ, ಈರುಳ್ಳಿ, ಕ್ಯಾರೆಟ್, ಕತ್ತರಿಸಿದ ನಿಂಬೆಹಣ್ಣು, ಟೊಮೆಟೊ ಇತ್ಯಾದಿ ಇಟ್ಟಿರುತ್ತಾರೆ. ಸಾಮಾನ್ಯವಾಗಿ ಇವುಗಳನ್ನು ತಟ್ಟೆಗೆ ಹಾಕಿಸಿಕೊಂಡು ಊಟದ ಜೊತೆಗೆ ನಾವು ಸೇವಿಸುತ್ತೇವೆ. ಈ ರೀತಿಯಲ್ಲಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಎಂಬ ವಿಚಾರ ನಿಮಗೆ ತಿಳಿದಿದೆಯೇ ?
ಹೌದು .. ಅಲ್ಲಿ ಊಟದ ಜೊತೆಗೆ ಇವುಗಳನ್ನು ಸೇವಿಸುವುದರಿಂದ ಒಂದು ಆಹಾರಕ್ಕೆ ಮತ್ತೊಂದು ಆಹಾರ ವಿರುದ್ಧ ಪದಾರ್ಥವಾಗಿರುತ್ತದೆ. ಅದನ್ನು ಊಟಕ್ಕೆ ಮೊದಲು ತಿಂದು ನಂತರ ಹಲವಾರು ಆಹಾರ ಪದಾರ್ಥಗಳನ್ನು ಸೇವಿಸಬೇಕು.ಇದು ಸರಿಯಾದ ಕ್ರಮವಾಗಿದ್ದು, ನಾವು ಊಟ ಮಾಡಿದ ನಂತರ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಹೊಟ್ಟೆನೋವು, ಬೇದಿ, ಇಂತಹ ಸಣ್ಣಪುಟ್ಟ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ.
ಆಯುರ್ವೇದದ ಪ್ರಕಾರ ಸಂಜೆ ಆರು ಗಂಟೆಯ ನಂತರದಲ್ಲಿ ಹಣ್ಣನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ನಾವು ಅತಿ ಬಿಸಿ ಪದಾರ್ಥಗಳನ್ನು ತಿಂದು, ನಂತರ ಕೊನೆಯಲ್ಲಿ ನಾವು ಐಸ್ಕ್ರೀಮ್ ಮತ್ತು ಜ್ಯೂಸ್ ಗಳನ್ನು ಸೇವಿಸುತ್ತೇವೆ. ಈ ರೀತಿಯಲ್ಲಿ ನಾವು ನಮ್ಮ ದೇಹಕ್ಕೆ ವಿರುದ್ಧ ಆಹಾರ ಪದಾರ್ಥವನ್ನು ತುಂಬುತ್ತೇವೆ. ಶೀತ, ಸಮಶೀತೋಷ್ಣ, ಉಷ್ಣ ಈ ರೀತಿಯ ಆಹಾರಗಳನ್ನು ಒಟ್ಟಿಗೆ ಸೇವಿಸಿದಾಗ ಅದರ ಪರಿಣಾಮ ನಮ್ಮ ಕರುಳನ್ನು ಭಾದಿಸುತ್ತದೆ.
ಬಿಸಿ ಪದಾರ್ಥಗಳ ಜೊತೆ ಅತೀ ಶೀತವಾದ ಆಹಾರಗಳನ್ನು ಸೇವಿಸುವುದರಿಂದ ಕೆಟ್ಟ ಪರಿಣಾಮ ಉಂಟಾಗಿ ಹೊಟ್ಟೆಯುಬ್ಬರ, ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗುತ್ತವೆ. ಆದಷ್ಟು ನಾವು ಆಹಾರ ಸೇವನೆಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸುವುದರಿಂದ ಇಂತಹ ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗುತ್ತದೆ.
ಅದಕ್ಕಾಗಿ ನಾವು ಊಟಕ್ಕೆ ಮುಂಚೆ ನೀಡುವ ಸಲಾಡ್ ಗಳಲ್ಲಿ ಪ್ರಮುಖವಾಗಿ ಕ್ಯಾರೆಟನ್ನು ಚೆನ್ನಾಗಿ ಅಗಿದು ತಿನ್ನಬೇಕು. ಕ್ಯಾರೆಟ್ ಗ್ಯಾಸ್ಟ್ರಿಕ್ ಸಮಸ್ಯೆ ಬರದಂತೆ ತಡೆಯುತ್ತದೆ. ಸೌತೆಕಾಯಿಗೆ ನಿಂಬೆರಸ ಬೆರೆಸಿ ತಿನ್ನುವುದರಿಂದ ಜೀರ್ಣವಾಗುವ ಪ್ರಕ್ರಿಯೆಯು ಚೆನ್ನಾಗಿ ಆಗುತ್ತದೆ.
ಸೌತೆಕಾಯಿಯ ಜೊತೆಯಲ್ಲಿ ಈರುಳ್ಳಿಯನ್ನು ಬೆರೆಸಿ ತಿನ್ನುವುದು ಸಹ ಆರೋಗ್ಯಕ್ಕೆ ಉತ್ತಮವಾಗಿದೆ.
ಊಟದ ನಂತರ ಸಾಮಾನ್ಯವಾಗಿ ಬೀಡ ಜಗಿಯುವ ಬದಲು, ಸಾಧಾರಣ ಎಲೆ ಅಡಿಕೆ ಸುಣ್ಣ ಹೆಚ್ಚು ಆರೋಗ್ಯಕಾರಕ. ಕೆಲವೆಡೆಗಳಲ್ಲಿ ಸೋಂಪು ಕಾಳನ್ನು ಇಟ್ಟಿರುತ್ತಾರೆ. ಎಲ್ಲಾ ಊಟ ಮುಗಿಸಿದ ನಂತರ, ನಾಲ್ಕು ಕಾಳು ಸೋಂಪನ್ನು ಬಾಯಿಗೆ ಹಾಕಿಕೊಂಡು ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರದಂತೆ ತಡೆಗಟ್ಟಬಹುದು. ಊಟದ ನಂತರ ಕಾಡುವ ಸಣ್ಣಪುಟ್ಟ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು. ಇದು ಚಿಕ್ಕ ವಿಷಯವಾಗಿದ್ದರೂ ದೊಡ್ಡ ಪರಿಣಾಮ ಉಂಟುಮಾಡುತ್ತದೆ.