ಗಣೇಶ ಚತುರ್ಥಿ ಎಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮ .. ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣ.. ಮನೆಗಳಲ್ಲಿ ಹೊಸಬಟ್ಟೆ ತೊಟ್ಟು ಮನೆಗಳಲ್ಲಿ, ಬೀದಿಗಳಲ್ಲಿ ಕೂರಿಸಿದ ಗಣಪನನ್ನು ನೋಡಲು ಹೋಗುವುದೇ ಒಂದು ಆನಂದ…
ಡೊಳ್ಳು ಹೊಟ್ಟೆ ಬೃಹತ್ ಕಾಯ, ಆನೆಯ ಸೊಂಡಿಲು, ಅಗಲವಾದ ಕಿವಿ, ಬಗೆ ಬಗೆಯಲ್ಲಿ ಪ್ರತಿಷ್ಟಾಪಿತ ಗಣಪ ಆಹಾ ಎಷ್ಟೊಂದು ಸುಂದರ. ಜೊತೆಗೆ ಮೆರವಣಿಗೆಯಲ್ಲಿ ಮುಗಿಲೆತ್ತರದ ಗಣಪನನ್ನು ಡೊಳ್ಳು-ನಗಾರಿ, ಕುಣಿತ, ಪಟಾಕಿ ಶಬ್ದ ಆಹಾ ಒಂತರಾ ಮಜಾ ನಾವೆಲ್ಲಿದ್ದೇವೆ ಎಂಬುದೇ ಮರೆತು ಗಣಪನ ಸಂಭ್ರಮದಲ್ಲಿ ಮೈ ಮರೆಯುವುದು ಸಹಜವೇ.
ಇದನ್ನೂ ಓದಿರಿ: ಗಣೇಶ ಚತುರ್ಥಿ: ಬಂಧು-ಬಾಂಧವರಿಗೆ ಶುಭ ಕೋರಲು ಇಲ್ಲಿವೆ ಶುಭಾಶಯಗಳು
ಅಂದು ಕೈಲಾಸದಲ್ಲಿ ಇದ್ದ ಗಣಪನನ್ನು ಜನರಿಗೆ ನೆನಪು ಮಾಡಿಕೊಟ್ಟ ಮಹಾನ್ ಚೇತನ ಬಾಲಗಂಗಾಧರ ತಿಲಕ್ ರ ಬಗ್ಗೆ ಹಲವರಿಗೆ ಕೆಲವುದಿನ ಮಾತ್ರ ನೆನಪಾಗುತ್ತದೆ. ಎಲ್ಲೆಡೆ ಹರಿದು ಹಂಚಿ ಹೋಗಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಘಟನೆ ಮಾಡಲು ಮಹಾರಾಷ್ಟ್ರ ದಲ್ಲಿ ಸ್ಥಾಪಿಸಿದ ಗಣೇಶ ಉತ್ಸವ ಇಂದು ಅದು ಒಂದು ಧರ್ಮದ ಹಬ್ಬಕ್ಕೆ ಸೀಮಿತವಾಗಿ ಬಿಟ್ಟಿದೆ. ಅಂದು ಎಲ್ಲರೂ ಭಕ್ತಿ ಪೂರ್ವಕವಾಗಿ ಆಚರಣೆಮಾಡಿ ಸಿಹಿ ತಿನ್ನುವ ಸಂಭ್ರಮ ಇದ್ದಿದ್ದು ಇಂದು ಹಬ್ಬದ ಹೆಸರಿನಲ್ಲಿ ಹೋರಾಟ ಅಥವಾ ದ್ವೇಷ ಮತ್ತು ಪ್ರತಿಷ್ಠೆಯ ಕಾರಣಕ್ಕೆ ಯಾರೋ ಲಾಭ ಪಡೆದುಕೊಳ್ಳುವ ಹಾಗೆ ಆಗಿಹೋಗಿದೆ.
ಮನೆಗಳಲ್ಲಿ ಚಕ್ಕಲಿ, ಕಾಯಿ ಕಡುಬು, ಕರ್ಜಿಕಾಯಿ ಹೀಗೆ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯ ಬಗೆ ಬಗೆಯ ಭಕ್ಷ ಮಾಡುವುದು ಅವರವರ ಪದ್ದತಿ. ಮನೆಯಲ್ಲಿ ಗಣಪತಿ ತರದಿದ್ದರೆ ತಂದವರ ಮನೆಗೆ ಹೋಗಿ ನೋಡಿ ಬರುವುದು ಹಾಗೂ ಗಣಪನನ್ನು ನೋಡಿದರೆ ಸಕಲ ಪಾಪಗಳು ನಿವಾರಣೆ ಆಗುತ್ತದೆ ಹಾಗೂ ಚೌತಿಯ ಚಂದ್ರನ ನೋಡಿದರೆ ಕಳ್ಳತನದ ಆರೋಪ ಬರುತ್ತದೆ ಎಂಬುದು ಪ್ರತೀತಿ ಇಂದಿಗೂ ಪ್ರಚಲಿತದಲ್ಲಿದೆ.
ಗಣಪತಿ ಬಪ್ಪ ಮೊರಯ ಮಂಗಳ ಮೂರ್ತಿ ಮೊರಯ ಎಂದು ಕೂಗಿ ಗಣಪನನ್ನು ಒಂದು, ಮೂರು, ಐದು, ಏಳು , ಹನ್ನೊಂದು, ಹದಿನೈದು ಹಾಗೂ ತಿಂಗಳು ಹೀಗೆ ದೇಶದ ನಾನಾ ಭಾಗಗಳಲ್ಲಿ ಒಂದೊಂದು ದಿನ ಒಂದೊಂದು ಕಡೆ ವಿಸರ್ಜಿಸುವ ಆಚರಣೆ ಮಾಡಿಕೊಂಡಿದ್ದಾರೆ.
ಏನೇ ಆಗಲಿ ಹಬ್ಬವೆಂದರೆ ಹುಡುಗರಿಗೆ ಹೊಸಬಟ್ಟೆ ಸಿಗುತ್ತದೆ. ಭೋಜನ ಪ್ರಿಯರಿಗೆ ವಿವಿಧ ರೀತಿಯ ಭಕ್ಷ ಸಿಗುತ್ತದೆ. ಭಕ್ತಿ ಮಾರ್ಗದವರಿಗೆ ದೇವರ ದರುಶನ ಭಾಗ್ಯ ದೊರೆಯುತ್ತದೆ. ಒಂದಿಷ್ಟು ಸಿನೆಮಾ ಹಾಡು ಜೊತೆಗೆ ಅಲ್ಲೊಂದಿಷ್ಟು ಮದ್ಯದಲ್ಲಿ ಭಕ್ತಿಗೀತೆ ಹಾಕಿ ಮನೋರಂಜನೆ, ಒಂದಿಷ್ಟು ಆಟ ಗೆದ್ದವರಿಗೆ ಪ್ರಶಸ್ತಿ, ಕೆಲವರಿಗೆ ಜವಾಬ್ದಾರಿ ಹೀಗೆ ಹಲವಾರು ಆಯಾಮಗಳಲ್ಲಿ ಎಲ್ಲರಿಗೂ ಹೋಲ್ ಸೇಲ್ ಆಗಿ ಒಂದಲ್ಲೊಂದು ಆಫರ್ ರೀತಿ ದೊರೆಯುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲಾ…
ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು