ಅಸಿಡಿಟಿಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಅಗತ್ಯ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ "ನನಗೆ ಅಸಿಡಿಟಿ ಪ್ರಾಬ್ಲಮ್ ಇದೆ, ಗ್ಯಾಸ್ಟ್ರಿಕ್  ಆಗಿದೆ, ಹುಳಿ ತೇಗು ಬರುತ್ತೆ, ಎದೆ ಉರೀತಾ ಇದೆ" ಮುಂತಾದ ಸಮಸ್ಯೆಗಳನ್ನು ಯುವಕರೇ ಮುಂದಿಡುತ್ತಿರುವುದನ್ನು ನೋಡಿದಾಗ ನಮ್ಮ ಯುವ ಜನರ ದೇಹ ನಿಜಕ್ಕೂ ಇಷ್ಟೊಂದು ದುರ್ಬಲವೇ ಎಂದು ಅನೇಕ ಬಾರಿ ಅನ್ನಿಸುವುದುಂಟು.

do-you-suffer-from-acidity-heres-the-necessary-information-01

ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ “ನನಗೆ ಅಸಿಡಿಟಿ ಪ್ರಾಬ್ಲಮ್ ಇದೆ, ಗ್ಯಾಸ್ಟ್ರಿಕ್  ಆಗಿದೆ, ಹುಳಿ ತೇಗು ಬರುತ್ತೆ, ಎದೆ ಉರೀತಾ ಇದೆ” ಮುಂತಾದ ವಿವರಣೆಗಳನ್ನು ಹೆಚ್ಚಾಗಿ ನಮ್ಮ ಸುತ್ತಲಿನ ಜನರಿಂದ ಕೇಳುತ್ತಲೇ ಇರುತ್ತೇವೆ. ಇದರಲ್ಲಿ ಯುವ ಜನತೆಯ ಸಂಖ್ಯೆಯೇ ತುಂಬಾ ಹೆಚ್ಚಿನ ಪ್ರಮಾಣದಲ್ಲಿದೆ ಎನ್ನುವುದಂತೂ ಇನ್ನೂ ಕಳವಳಕಾರಿ ಮತ್ತು ದುಃಖದ ಸಂಗತಿ. ನಮ್ಮ ಯುವ ಜನರ ದೇಹ ನಿಜಕ್ಕೂ ಇಷ್ಟೊಂದು ದುರ್ಬಲವೇ ಎಂದು ಅನೇಕ ಬಾರಿ ಅನ್ನಿಸುವುದುಂಟು. ವಯಸ್ಸು ಮೂವತ್ತೂ ಆಗಿರುವುದಿಲ್ಲ, ಇಂಥಹ ತೊಂದರೆ ಅನುಭವಿಸುತ್ತಿರುತ್ತಾರೆ. ಅದೂ ಕೂಡ ಪದೇ ಪದೇ. ಯುವ ಜನರೇ ದೇಶದ ನಿಜವಾದ ದುಡಿಯುವ ಶಕ್ತಿ ಯಾಗಿರುವ ಸಂದರ್ಭದಲ್ಲಿ ಅವರು ಇಂತಹ ತೊಂದರೆಗಳಿಂದಾಗಿ ಹಲವು ಬಾರಿ ಕೆಲಸಕ್ಕೆ ಗೈರು ಹಾಜರಾಗುವುದು, ಕಾರ್ಯ ದಕ್ಷತೆ ಕಡಿಮೆಯಾಗುವುದು, ಕೆಲಸದಲ್ಲಿ ಏಕಾಗ್ರತೆ ಕೊರತೆ ಉಂಟಾಗುವುದು – ಇತ್ಯಾದಿಗಳು ದೇಶದ ಪ್ರಗತಿಯ ದೃಷ್ಟಿಯಿಂದ ಖಂಡಿತ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಹಾಗಾದರೆ ನಿಜವಾಗಿ ಅಸಿಡಿಟಿ ಅಥವಾ ಅಮ್ಲಪಿತ್ತ ಎಂದರೇನು? ಎಂಬುದನ್ನು ತಿಳಿದುಕೊಳ್ಳೋಣ.

Akshara aayurveda
ನಮ್ಮ ಜಠರದ ಒಳ ಪದರದ ಚರ್ಮದಲ್ಲಿರುವ ವಿಶೇಷ ಬಗೆಯ ವಿವಿಧ ಜೀವಕೋಶಗಳಿಂದ ಉತ್ಪತ್ತಿಯಾಗುವ ಜಠರರಸವು ( ಗ್ಯಾಸ್ಟ್ರಿಕ್ ಜ್ಯೂಸ್) ಬಹಳ ಪ್ರಬಲವಾದ ಆಮ್ಲ ರಸವಾಗಿದ್ದು (ಉದಾಹರಣೆಗೆ ಹೇಳುವುದಾದರೆ ಶೇವಿಂಗ್ ಗೆ ಉಪಯೋಗಿಸುವ ಬ್ಲೇಡನ್ನು ಕೂಡ ಕರಗಿಸುವಷ್ಟು) ಅದು ಅನೇಕ ಬಗೆಯ ರಾಸಾಯನಿಕಗಳ ಮಿಶ್ರಣವಾಗಿದೆ. ಬಹು ಮುಖ್ಯವಾಗಿ ಹೈಡ್ರೋ ಕ್ಲೋರಿಕ್ ಆಸಿಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಇದು ಆಹಾರದ ಸಂಪರ್ಕಕ್ಕೆ ಬಂದ ಕೂಡಲೇ ಆಹಾರವನ್ನು ಜೀರ್ಣಿಸಲು ಶುರು ಮಾಡುತ್ತದೆ. ಆದರೆ ಅದು ಅಷ್ಟೊಂದು ತೀಕ್ಷ್ಣವಾದ ಆಸಿಡ್ ಆಗಿದ್ದರೂ ಜಠರದ ಚರ್ಮವು ಸುಡದೇ ಇರುವಂತೆ, ಹಾನಿಗೊಳಗಾಗದಂತೆ ಮಾಡಲು ವಿಶೇಷವಾದ ದಪ್ಪ , ಲೋಳೆಯಂಥ ದ್ರವ ಪದಾರ್ಥವು ಜಠರದ ಒಳ ಚರ್ಮವನ್ನು ಆವರಿಸಿರುತ್ತದೆ. ಹಾಗಾಗಿ ಜಠರವು ತಾನೇ ಉತ್ಪತ್ತಿ ಮಾಡುವ ಆಸಿಡ್ ನಿಂದ ಹಾನಿಗೊಳಗಾಗುವುದಿಲ್ಲ.
ಈ ಜಠರ ರಸವು ಪ್ರತಿ ದಿನವೂ ನಿರ್ದಿಷ್ಟ ಸಮಯದಲ್ಲಿ, ನಮ್ಮೊಳಗಿನ ಜೈವಿಕ ಗಡಿಯಾರಕ್ಕೆ ಅನುಸಾರವಾಗಿ ಉತ್ಪತ್ತಿಯಾಗುತ್ತಿರುತ್ತದೆ. ಹಾಗಾಗಿಯೇ ನಮಗೆ ಸಮಯ ಸಮಯಕ್ಕೆ ಸರಿಯಾಗಿ ಹಸಿವೆಯ ಅನುಭವವಾಗುತ್ತದೆ. ಆದ್ದರಿಂದ ಆ ಸಮಯಕ್ಕೆ ಸರಿಯಾಗಿ ನಾವು ಆಹಾರ ತೆಗೆದು ಕೊಳ್ಳದೇ ಹೋದರೆ, ಅದು ಕ್ರಮೇಣ ಮೊದಲಿಗೆ ಜಠರದ ಚರ್ಮದ ರಕ್ಷಾ ಕವಚದಂತಿರುವ ಲೋಳೆ ಪದಾರ್ಥವನ್ನು ದಾಟಿ ಜಠರದ ಚರ್ಮದ ಸಂಪರ್ಕಕ್ಕೆ ಬಂದು, ಅದರ ಉರಿಯೂತವನ್ನುಂಟು ಮಾಡುತ್ತದೆ. ಆಗ ಹೊಟ್ಟೆಯಲ್ಲಿ ಉರಿಯಂಥ ಅನುಭವು ವ್ಯಕ್ತಿಯ ಗಮನಕ್ಕೆ ಬರಲು ಶುರುವಾಗುತ್ತದೆ. ಅದರೊಂದಿಗೆ ಇನ್ನು ಕೆಲವರಿಗೆ ಹೊಟ್ಟೆಯಲ್ಲಿ ನೋವು, ವಾಂತಿ ಬಂದ ಹಾಗೆ ಆಗುವುದು ಅಥವಾ ವಾಂತಿ ಆಗುವುದು, ವಿಪರೀತ ಅಥವಾ ಸ್ವಲ್ಪ ತಲೆ ನೋಯುವುದು, ಕೆಲವರಿಗೆ ಆಲಸ್ಯ, ನಿಶ್ಯಕ್ತಿ ಉಂಟಾಗುವುದು ಮುಂತಾದ ತೊಂದರೆಗಳು ಒಟ್ಟಿಗೆ ಸೇರಿ ಕೊಳ್ಳುತ್ತವೆ. ಇದುವೇ ವೈದ್ಯಕೀಯ ಭಾಷೆಯಲ್ಲಿ ಗ್ಯಾಸ್ಟ್ರೈಟಿಸ್ ಅಥವಾ ಅಮ್ಲಪಿತ್ತ.

ಇದನ್ನೂ ಓದಿರಿ: ವ್ಯಾಧಿ ಕ್ಷಮತ್ವ ಅಥವಾ ರೋಗ ನಿರೋಧಕ ಶಕ್ತಿ ಅಂದರೆ ಏನು ಮತ್ತು ಅದು ಏಕೆ ಅಗತ್ಯ?
do-you-suffer-from-acidity-heres-the-necessary-information-02
ಇದಕ್ಕೆ ನೀರು ಕುಡಿಯುವುದಾಗಲೀ,  ಮಾರುಕಟ್ಟೆಯಲ್ಲಿ ದೊರೆಯುವ ಅಂಟಾಸಿಡ್ ‌ಮಾತ್ರೆ ಗಳಾಗಲೀ ಶಾಶ್ವತ ಪರಿಹಾರವಲ್ಲ. ಯಾಕೆಂದರೆ ಅವು ಜಠರ ರಸದ ಉತ್ಪತ್ತಿಯನ್ನೇ ಕಡಿಮೆ ಮಾಡಿ ಬಿಡುತ್ತದೆ. ಹಾಗಾಗಿ ಅದನ್ನೇ ರೂಢಿಸಿಕೊಂಡರೆ ಮುಂದೆ ತಿಂದ ಆಹಾರವೇ ಜೀರ್ಣವಾಗದಿರುವ ಪರಿಸ್ಥಿತಿ ಅಂದರೆ ಅಜೀರ್ಣತೆ ಉಂಟಾಗಿ ಮತ್ತೊಂದು ಹೊಸ ಸಮಸ್ಯೆ ಶುರುವಾಗಬಹುದು.
ಅಸಿಡಿಟಿಯ ಸಮಸ್ಯೆ ಇದ್ದರೂ ಸಮಯಕ್ಕೆ ಸರಿಯಾಗಿ ಆಹಾರ ತೆಗೆದು ಕೊಳ್ಳದೇ ಇರುವ ಅಭ್ಯಾಸವು ಮತ್ತೂ ಮುಂದುವರೆದಲ್ಲಿ ಅದು ಕ್ರಮೇಣ ಜಠರದ ಚರ್ಮವನ್ನು ಹಾನಿ ಮಾಡಿ ಅಲ್ಲಿ ಗಾಯವಾಗಿ ಹುಣ್ಣಿನ ಉತ್ಪತ್ತಿಯಾಗುತ್ತದೆ. ಆಗ ವಿಪರೀತ ಎನಿಸುವಷ್ಟು ನೋವು, ಉರಿ , ವಾಂತಿ ಮುಂತಾದ ಸಮಸ್ಯೆ ಶುರುವಾಗಬಹುದು. ಇದುವೇ ಗ್ಯಾಸ್ಟ್ರಿಕ್ ಅಲ್ಸರ್.

ಇದನ್ನೂ ಓದಿರಿ: ಪ್ರತಿದಿನ ಮೂರು ಖರ್ಜೂರ ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ ಪಡೆಯಬಹುದಂತೆ !

ಹಾಗಾದರೆ ಅದು ಬರೆದಿರುವಂತೆ ತಡೆಗಟ್ಟಲು ಇರುವ ಕ್ರಮಗಳಾವುವು?

ಅದು ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನ ಶೈಲಿ ಎರಡನ್ನೂ ಅವಲಂಬಿಸಿದೆ. ಸಮಯಕ್ಕೆ ಸರಿಯಾಗಿ ಹಸಿವೆ ಆದಾಗ ಆಹಾರದ ಸೇವನೆ, ಉಪ್ಪು, ಹುಳಿ, ಖಾರದ ಪದಾರ್ಥಗಳ ಮಿತ ಬಳಕೆ, ಹಸಿ ಮತ್ತು ಬೇಯಿಸಿದ ತರಕಾರಿಗಳ ಸೇವನೆ, ಮಾಂಸಾಹಾರದ ಮಿತ ಬಳಕೆ, ಹಸಿ ಮೆಣಸಿನ ಬದಲು ಒಳ್ಳೆ ಮೆಣಸಿನ ಬಳಕೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅತಿಯಾಗಿ ತಿನ್ನದಿರುವುದು, ಆಹಾರದ ಜೊತೆ ತುಪ್ಪ ಮತ್ತು ಬೆಣ್ಣೆಗಳ ನಿಯಮಿತ ಸೇವನೆ, ಹಿಂದಿನ ದಿನದ ಆಹಾರದ ಬಳಕೆ ಮಾಡದೇ ಇರುವುದು, ಊಟ ಮಾಡುವಾಗ ನಡುವೆ ನಿಯಮಿತವಾಗಿ ನೀರು ಕುಡಿಯುವುದು, ಅತಿ ಬಿಸಿಯಾದ ಆಹಾರಗಳನ್ನು ಸೇವಿಸದಿರುವುದು ಇತ್ಯಾದಿಗಳೆಲ್ಲ ನಾವು ಸೇವಿಸುವ ಆಹಾರ ಶೈಲಿಗೆ ಸಂಬಂಧಪಟ್ಟವಾದರೆ, ಇನ್ನು ಜೀವನ ಶೈಲಿಯಲ್ಲಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು, ಧ್ಯಾನ/ ಮೆಡಿಟೇಶನ್ ಮಾಡುವುದು, ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆ ಮುಂತಾದ ತೊಂದರೆಗಳಿದ್ದರೆ ಅವನ್ನು ಸರಿ ಮಾಡಿಕೊಳ್ಳುವುದು, ದಿನಾಲೂ ರಾತ್ರಿ ಊಟದ ನಂತರ ಸ್ವಲ್ಪ ದೂರ ನಡೆಯುವುದು, ಪದೇ ಪದೇ ಮಲಬದ್ಧತೆ ಆಗದಂತೆ ನೋಡಿಕೊಳ್ಳುವುದು ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಇದನ್ನೂ ಓದಿರಿ: ಕಿಡ್ನಿ ಸಮಸ್ಯೆ ಇರುವವರು ಅವಶ್ಯವಾಗಿ ಈ ಆಹಾರವನ್ನು ಸೇವಿಸಬೇಕು

do-you-suffer-from-acidity-heres-the-necessary-information

ಇನ್ನು ಈ ಮೊದಲೇ ಅಸಿಡಿಟಿಯಿಂದ ಬಳಲುತ್ತಿರುವ ರೋಗಿಗಳಿಗೆ ಮನೆಯಲ್ಲೇ ಮಾಡಿ ಕೊಳ್ಳಬಹುದಾದ ಕೆಲ ಬಗೆಯ ಪರಿಹಾರಗಳನ್ನು ನೋಡೋಣ.

  • ಮಣ್ಣಿನ ಮಡಿಕೆಯ ನೀರು ಕುಡಿಯುವುದು. ಇದು ದೇಹದ ಪಿತ್ತವನ್ನು ಕಡಿಮೆ ಮಾಡುತ್ತದೆ.
  • ಬಾಳೆ ಎಲೆಯ ಮೇಲೆ ಊಟ ಮಾಡುವುದು (ಬಾಳೆ ಎಲೆಯ ಮೇಲ್ಪದರದ ಮೇಲೆ ಎಪಿಗ್ಯಾಲೋ ಕೆಟಾಚಿನ್ ಗ್ಯಾಲೇಟ್/EGCG ಎನ್ನುವ ಅಂಶವಿದ್ದು ಇದು ಹೊಟ್ಟೆಯ ಹುಣ್ಣು, ಕರುಳಿನ ಹುಣ್ಣು, ಅಸಿಡಿಟಿ, ಕರುಳಿನ ಕ್ಯಾನ್ಸರ್ ಮುಂತಾದ ತೊಂದರೆಗಳಿಗೆ ಉತ್ತಮ ಪ್ರತಿರೋಧ ತೋರುತ್ತದೆ ಮಾತ್ರವಲ್ಲದೆ ದೇಹದ ತೂಕ ಕಡಿಮೆ ಮಾಡಲು ಕೂಡ ಸಹಕಾರಿ ಮತ್ತು ಹೃದಯದ ಮತ್ತು ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು.)
  • ಪಡುವಲಕಾಯಿ ಬಳ್ಳಿಯ ಎಲೆ ಮತ್ತು ಕಹಿ ಬೇವಿನ ಎಲೆಯ ಕಷಾಯ ಕುಡಿಯುವುದು.
  • ಧನಿಯಾ, ಜೀರಿಗೆ ನೀರು ಕುಡಿಯುವುದು.
  • ನನ್ನಾರಿ ಬೇರು ಅಥವಾ ಲಾಮಂಚ ಹಾಕಿ ಕುದಿಸಿದ ನೀರು ಕುಡಿಯುವುದು.
  • ಒಂದೆಲಗ ಎಲೆಯ ಚಟ್ನಿ, ತಂಬುಳಿ ಮಾಡಿ ಸೇವಿಸುವುದು.
  • ಸಿಹಿಗುಂಬಳದ ಪದಾರ್ಥ ಸೇವನೆ.
  • ಚೆನ್ನಾಗಿ ಬೇಯಿಸಿದ ಆಹಾರ ಸೇವನೆ.
  • ಹೆಚ್ಚು ಹೊತ್ತು ಹೊಟ್ಟೆ ಖಾಲಿ ಬಿಡದೆ, ಆಗಾಗ ಚಿಕ್ಕ ಪ್ರಮಾಣದಲ್ಲಿ ಆಹಾರ ಅಥವಾ ಸಿಹಿ ಹಣ್ಣುಗಳ ಸೇವನೆ.

ಇದನ್ನೂ ಓದಿರಿ: ಈ ಔಷಧವನ್ನು ಸೇವಿಸುವ ಮೂಲಕ ಸುಲಭವಾಗಿ ಅಸಿಡಿಟಿಯಿಂದ ಹೊರಬನ್ನಿ..!

ಮುಂತಾದ ಕ್ರಮಗಳನ್ನು ಅನುಸರಿಸಬೇಕು. ಮತ್ತು ಆಯುರ್ವೇದದಲ್ಲಿ ಅಮ್ಲಪಿತ್ತಕ್ಕೆ, ಅದರಿಂದ ಉಂಟಾಗ ಬಹುದಾದ ತಲೆನೋವು, ವಾಂತಿ, ಮಲಬದ್ಧತೆ ಮುಂತಾದ ತೊಂದರೆಗಳಿಗೆ ಅತ್ಯುತ್ತಮ ಪರಿಹಾರ ಲಭ್ಯವಿದ್ದು ಅಗತ್ಯವಿದ್ದಲ್ಲಿ ಆಯುರ್ವೇದ ವೈದ್ಯರ ಸಲಹೆಯನ್ನೂ ಪಡೆಯಬಹುದು.

– ಡಾ. ಬಾಲಸುಬ್ರಹ್ಮಣ್ಯ ಕೆ. ಆಚಾರ್ಯ
ಫೋ ನಂ. 9483819033

LEAVE A REPLY

Please enter your comment!
Please enter your name here