ವ್ಯಾಧಿ ಕ್ಷಮತ್ವ ಅಥವಾ ರೋಗ ನಿರೋಧಕ ಶಕ್ತಿ ಅಂದರೆ ಏನು ಮತ್ತು ಅದು ಏಕೆ ಅಗತ್ಯ?

ವ್ಯಾಧಿ ಕ್ಷಮತ್ವ ಅಂದರೆ ಪ್ರತಿ ಜೀವಿಯಲ್ಲಿಯೂ, ದೇಹಕ್ಕೆ ಬಂದಿರುವ ಅಥವಾ ಮುಂದೆ ಬರಬಹುದಾದ ರೋಗದ ವಿರುದ್ಧ ಸೆಣಸಲು ಇರುವಂತಹ ವಿಶೇಷವಾದ ಒಂದು ರಕ್ಷಣಾ ವ್ಯವಸ್ಥೆಯಾಗಿದೆ.

what-is-immunity-and-why-is-it-necessary

ವ್ಯಾಧಿ ಕ್ಷಮತ್ವ ಅಂದರೆ ಪ್ರತಿ ಜೀವಿಯಲ್ಲಿಯೂ, ದೇಹಕ್ಕೆ ಬಂದಿರುವ ಅಥವಾ ಮುಂದೆ ಬರಬಹುದಾದ ರೋಗದ ವಿರುದ್ಧ ಸೆಣಸಲು ಇರುವಂತಹ ವಿಶೇಷವಾದ ಒಂದು ರಕ್ಷಣಾ ವ್ಯವಸ್ಥೆಯಾಗಿದೆ. ರೋಗೋತ್ಪಾದನೆಗೆ ಕಾರಣವಾದ ಅಂಶಗಳು ದೇಹದಲ್ಲಿ ಸೇರಿ ರೋಗವು ಉತ್ಪತ್ತಿ ಆಗುವ ಸಂದರ್ಭದಲ್ಲಿ ಅವುಗಳ ವಿರುಧ್ಧ ಹೋರಾಡಿ ದೇಹವನ್ನು ಮರಳಿ ಆರೋಗ್ಯಕರ ಸಮಸ್ಥಿತಿಗೆ ತರಲು ಕಾರಣವಾಗುವುದೇ ಈ ರೋಗನಿರೋಧಕ ಶಕ್ತಿ.

ಆಯುರ್ವೇದದಲ್ಲಿ, ಒಂದು ವ್ಯಕ್ತಿಯ ದೇಹದಲ್ಲಿ ವ್ಯಾಧಿ ಕ್ಷಮತ್ವದ ಸಾಮರ್ಥ್ಯವು ಇರುವಿಕೆಯ ಬಗ್ಗೆ ಅದರ ಇರುವಿಕೆಯ ಅಗತ್ಯತೆಯ ಕುರಿತು ಹಾಗೂ ಆ ಸಾಮರ್ಥ್ಯವು ದೇಹದಿಂದ ದೇಹಕ್ಕೆ ಭಿನ್ನವಾಗಿರುವುದರ ಬಗ್ಗೆಯೂ ಬಹಳ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದ್ದು, “ವ್ಯಾಧಿ ಕ್ಷಮತ್ವವೆಂದರೆ ವ್ಯಾಧಿಯ ಬಲಕ್ಕೆ ವಿರೋಧಿಯಾಗಿರುವುದು ಮತ್ತು ವ್ಯಾಧಿ ಉತ್ಪಾದನೆಗೆ ತಡೆ ಒಡ್ಡುವಂತಹುದು” ಎಂದು ವಿವರಿಸಲ್ಪಟ್ಟಿದೆ. ಇದಲ್ಲದೇ ಪುನಃ ಅದು ಮೂರು ವಿಭಾಗವಾಗಿ ಅಂದರೆ ಸಹಜ, ಕಾಲಾನುಸಾರ, ಯುಕ್ತಿಕೃತ ಎಂದು ವಿಂಗಡಿಸಲಾಗಿದೆ.

ಸಹಜ :

ಸಹಜ ಎಂದರೆ ಹುಟ್ಟಿನಿಂದ ಬರುವಂತಹುದು, ತಂದೆ ತಾಯಿಯಿಂದ ಬರುವಂತಹುದು. ಅದು ದೈಹಿಕ ಮತ್ತು ಮಾನಸಿಕ ಎಂದು ಪುನಃ ಎರಡು ವಿಭಾಗವಾಗಿ ಪರಿಗಣಿಸಲ್ಪಟ್ಟಿದ್ದು, ಮಾನಸಿಕ ಎನ್ನುವಲ್ಲಿ, ಅದನ್ನು ರೋಗಿಯ ಮನೋಸ್ಥೈರ್ಯ ಎಂದು ಅರ್ಥೈಸಲ್ಪಟ್ಟಿದೆ.

ಕಾಲಕೃತ :

ಇದನ್ನು ಪುನಃ, ದೈಹಿಕ ಬೆಳವಣಿಗೆಯೊಂದಿಗೆ ಮತ್ತು ಹವಾಮಾನ ಅಥವಾ ವಾತಾವರಣಕ್ಕೆ ಅನುಗುಣವಾಗಿ ಬರುವಂತಹುದು ಎಂದು ಎರಡು ವಿಧವಾಗಿ ವಿಂಗಡಿಸಲಾಗಿದೆ.

ಯುಕ್ತಿಕೃತ :

ಇದರಲ್ಲಿಯೂ ಎರಡು ವಿಧಗಳಿದ್ದು, ವ್ಯಾಯಾಮಾದಿ ದೈಹಿಕ ಕೆಲಸ ಮಾಡಿ ಪಡೆಯುವಂತಹುದು ಒಂದಾದರೆ, ಮತ್ತೊಂದು ನಾವು ಸೇವಿಸುವ ಆಹಾರದ ಶಕ್ತಿಯಿಂದ ಸಂಪಾದಿಸುವಂತಹುದು.
ಹಾಗಾಗಿಯೇ ನಾವು ಸೇವಿಸುವ ಆಹಾರಕ್ಕೆ ಆಯುರ್ವೇದದಲ್ಲಿ ಎಲ್ಲಿಲ್ಲದ ಮಹತ್ವ. “ಊಟ ಬಲ್ಲವನಿಗೆ ರೋಗವಿಲ್ಲ” ಎನ್ನುವ ಹಿರಿಯರ ಮಾತಿನ ಒಳಾರ್ಥವೂ ಇದನ್ನೇ ಧ್ವನಿಸುವಂತಹುದು. ದಿನಂಪ್ರತಿ ನಮ್ಮ ದೇಹವು ಸಾವಿರಾರು ಸೂಕ್ಷ್ಮಾಣು ಜೀವಿಗಳ ಸಂಪರ್ಕಕ್ಕೆ ಒಳಗಾಗುತ್ತಿದ್ದರೂ, ದೇಹದ ರೋಗನಿರೋಧಕ ಶಕ್ತಿ ಎಂಬ ರಕ್ಷಣಾ ವ್ಯವಸ್ಥೆಯು ಪ್ರಬಲವಾಗಿದ್ದಲ್ಲಿ ನಾವು ಯಾವುದೇ ಹೊರಗಿನ ಸೂಕ್ಷ್ಮಾಣು ಜೀವಿಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಹುದು. ಆದುದರಿಂದಲೇ ಇದೀಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಅಥವಾ ಔಷಧಗಳಿಗೆ ಬಹು ಬೇಡಿಕೆಯ ಸಮಯ.

ಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ಎಂದಿದೆ ಆಯುಷ್ ಮಂತ್ರಾಲಯ

ಹಾಗಾಗಿ ಅಂತಹ ಆಹಾರ ಅಥವಾ ಔಷಧಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಶುಂಠಿ, ಕರಿ ಮೆಣಸು, ಅರಿಶಿನ, ಧನಿಯಾ, ಒಂದೆಲಗ, ಕೊಮ್ಮೆ ಬೇರು / ಪುನರ್ನವ, ವೀಳ್ಯದೆಲೆ, ಜೇನುತುಪ್ಪ, ಕಪ್ಪು ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆ ಸೊಪ್ಪು, ಲವಂಗ,  ಏಲಕ್ಕಿ, ದಾಲ್ಚಿನ್ನಿ ಇತ್ಯಾದಿಗಳು. ಇವೆಲ್ಲವೂ ಆಹಾರ ರೂಪದಲ್ಲಿಯೋ, ಕಷಾಯವಾಗಿಯೋ ಸೇವಿಸುವಂತಹವು ಹೆಚ್ಚಾಗಿ ನಮ್ಮ ಅಡುಗೆ ಮನೆಯಲ್ಲಿಯೇ ಇರುವಂತಹುದು.

ಇನ್ನು ವ್ಯಾಧಿ ಕ್ಷಮತ್ವವನ್ನು ಹೆಚ್ಚಿಸುವ ಆಯುರ್ವೇದೀಯ ಸಸ್ಯ ಅಥವಾ ಔಷಧಿಗಳ ಬಗ್ಗೆ ತಿಳಿಯೋಣ.
ಅಮ್ರೃತ ಬಳ್ಳಿ, ಆಡುಸೋಗೆ, ಹಿಪ್ಪಲಿ, ಜೇಷ್ಟ ಮಧು, ಒಳ್ಳೆ ಕೊಡಿ, ಕಿರಾತಕಡ್ಡಿ, ಕಡೀರ ಬೇರು/ ಬಲಾ, ಶತಾವರಿ, ಪಂಚಗವ್ಯ, ಚ್ಯವನಪ್ರಾಶ, ಅಮೃತಾರಿಷ್ಟ, ದಶಮೂಲಾರಿಷ್ಟ, ಅಶ್ವಗಂಧಾರಿಷ್ಟ, ಪಿಪ್ಪಲ್ಯಾಸವ ಮುಂತಾದವು. ಇವುಗಳ ಉಪಯೋಗಗಳನ್ನು ತಜ್ಞ ವೈದ್ಯರ ಸಲಹೆ ಮೇರೆಗೆ ಉಪಯೋಗಿಸಿದರೆ ಉತ್ತಮ.

ಇದನ್ನೂ ಓದಿರಿ: ಕರೋನಾ ಬಗ್ಗೆ ಭಯ ಬೇಡ..! ಆದರೆ ಈ ವೈರಸ್ ಬಗ್ಗೆ ಜಾಗ್ರತಿಯಂತೂ ಅವಶ್ಯ..!

what-is-immunity-and-why-is-it-necessaryಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಆಹಾರಗಳು ನಿಮಗಾಗಿ…!

ಒಟ್ಟಾರೆಯಾಗಿ ಖಾಯಿಲೆ ಬಂದ ನಂತರ ಅದಕ್ಕೆ ಔಷಧಿ ಹುಡುಕುವ ಬದಲು, ಅದು ಬರದಂತೆ ತಡೆಯಲು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರಗಳನ್ನು ನಾವು ಹೆಚ್ಚು ಮುತುವರ್ಜಿವಹಿಸಿ ಸೇವಿಸುತ್ತಾ ಬಂದಲ್ಲಿ ಯಾವುದೇ ರೀತಿಯ ಸೂಕ್ಷ್ಮಾಣು ಜೀವಿಗಳ ಬಗ್ಗೆ ಹೆಚ್ಚಿಗೆ ಭಯಪಡುತ್ತಾ ಕೂಡುವ ಅಗತ್ಯವಿಲ್ಲ. ಯಾಕೆಂದರೆ ಬಗೆ ಬಗೆಯ ಸೂಕ್ಷ್ಮಾಣು ಜೀವಿಗಳು ಬರುತ್ತಲೇ ಇರುತ್ತವೆ. ಅವುಗಳ ಆಗಮನವನ್ನು ತಡೆಯುವುದು ಕಷ್ಟ ಸಾಧ್ಯ. ಇಂದು ಇರುವುದು ನಾಳೆ ಇರದೇ ಇರಬಹುದು, ನಾಳೆ ಮತ್ತೊಂದು, ಇಂದಿನಿಂದಕ್ಕಿಂತ ಬಹು ವಿಭಿನ್ನವಾಗಿರುವ, ಹೊಸಬಗೆಯ ಸವಾಲು ಮನುಕುಲಕ್ಕೆ ಎದುರಾಗಬಹುದು. ಹಾಗಾಗಿ ವೈರಿ ಬಲವನ್ನು ಅಳೆಯುವ ಪ್ರಯತ್ನದ ಜೊತೆಯಲ್ಲಿ, ನಮ್ಮ ವ್ಯಾಧಿ ಕ್ಷಮತ್ವದ ಮಟ್ಟವನ್ನು ಏರಿಸುವ ಪ್ರಯತ್ನವನ್ನೂ ಮಾಡುವುದರಲ್ಲಿಯೇ ನಮ್ಮ ಸುರಕ್ಷತೆ ಮತ್ತು ಜಾಣತನವಿದೆಯಲ್ಲವೇ..?

ಡಾ. ಬಾಲಸುಬ್ರಹ್ಮಣ್ಯ ಕೆ. ಆಚಾರ್ಯ

LEAVE A REPLY

Please enter your comment!
Please enter your name here