ಹಸಿರು ಮೇವು ಹಾಲಿನ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಸಿರು ಮೇವನ್ನು ಚೆನ್ನಾಗಿ ತಿಂದು ಸುಲಭವಾಗಿ ಜೀರ್ಣಿಸಿಕೊಂಡು ಅಧಿಕ ಪ್ರಮಾಣದಲ್ಲಿ ಹಾಲನ್ನು ನೀಡುವುದರಿಂದ ಡೈರಿ ಫಾರ್ಮ್ ನಡೆಸುವವರು ಮೇವಿನ ಬೆಳೆಗಳೆಡೆಗೆ ಹೆಚ್ಚಿನ ಗಮನ ನೀಡುತ್ತಾರೆ. ಇವು ಹೈನುರಾಸುಗಳಿಗೆ ಪೋಷಕಾಂಶಗಳನ್ನು ಸಮರ್ಪಕವಾಗಿ ಪೂರೈಸಿ ಹಾಲಿನ ಇಳುವರಿಯನ್ನು ಹೆಚ್ಚಿಸುತ್ತವೆ. ಹಸಿರು ಮೇವು ನೈಸರ್ಗಿಕ ಪೋಷಕಾಂಶಗಳ ಒಂದು ಮೂಲವಾಗಿದ್ದು, ಕಡಿಮೆ ನಿರ್ವಹಣೆಯಿಂದ ಅಧಿಕ ಪ್ರಮಾಣದ ಇಳುವರಿಯನ್ನು ನೀಡುತ್ತವೆ. ಅನೇಕ ಬಗೆಯ ಪ್ರಭೇದಗಳನ್ನು ಹೊಂದಿರುವುದರಿಂದ ಬೇಕಾದ ರೀತಿಯ ಮೇವನ್ನು ಬೆಳೆದುಕೊಳ್ಳಬಹುದಾಗಿದೆ.
ಲ್ಯೂಸರ್ನ್ [ Lucerne ] :-
ಲ್ಯೂಸರ್ನ್ ಒಂದು ದ್ವಿದಳ ಧಾನ್ಯದ ಬೆಳೆಯಾಗಿದ್ದು, ರುಚಿಕಟ್ಟಾದ ಮತ್ತು ಪೌಷ್ಠಿಕವಾದ ಆಹಾರ ಬೆಳೆಯಾಗಿದೆ. ಬೀಜಗಳು ಸುಮಾರು 18 ರಿಂದ 20 ಕೆ.ಜಿ. ಪ್ರತಿ ಹೆಕ್ಟೇರಿಗೆ ಅಗತ್ಯವಿದ್ದು, ಎಲ್ಲ ವಾತಾವರಣದಲ್ಲಿಯೂ ಬೆಳೆಯುವ ಸಾಮರ್ಥ್ಯ ಹೊಂದಿದೆ. ಇದು ಉತ್ತಮವಾಗಿ ಬೆಳವಣಿಗೆ ಹೊಂದಿ ಸುಮಾರು 70 ರಿಂದ 80 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಹಚ್ಚ ಹಸುರಾಗಿ ಬೆಳೆದು, ಹೂ ಬಿಡಲು ಪ್ರಾರಂಭಿಸಿದಾಗ ಹೆಚ್ಚಿನ ಪೋಷಕಾಂಶ ತುಂಬಿರುತ್ತದೆ. ಇದರಲ್ಲಿ ಆನಂದ -2 , Co-1 , ಶೀರ್ಷ-9 ಉತ್ತಮ ತಳಿಗಳಾಗಿವೆ. ಲ್ಯೂಸರ್ನ್ ನಲ್ಲಿ 15% ನಿಂದ 20% ನಷ್ಟು ಪ್ರೋಟೀನಿನ ಅಂಶವಿದ್ದು ಪಶುಗಳ ಆರೋಗ್ಯಕ್ಕೆ ಉತ್ತಮವಾಗಿದೆ.
ಮೆಕ್ಕೆ ಜೋಳ [ Maize ] :-
ಮೆಕ್ಕೆಜೋಳ ಒಂದು ಉತ್ತಮ ಆಹಾರ ಧಾನ್ಯದ ಬೆಳೆ ಹಾಗೂ ಆಹಾರ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಬೆಳೆಯು 22 ಡಿಗ್ರಿಯಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಫೈಬರ್ ಅಂಶವು ಅತ್ಯಧಿಕವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಮೆಕ್ಕೆಜೋಳದ ಕೆಲವು ಉತ್ತಮ ತಳಿಗಳೆಂದರೆ ಆಫ್ರಿಕನ್ ಟಾಲ್ , ಗಂಗಾ-5 , ವಿಜಯ ಕಂಪೋಸಿಟ್ . ಮೆಕ್ಕೆಜೋಳದ (ಮುಸುಕಿನ ಜೋಳ ) ಬೆಲೆಯೂ 70 ರಿಂದ 80 ದಿನಗಳಿಗೆ ಮಾಡಿ ರಾಸುಗಳಿಗೆ ತಿನ್ನಿಸಬಹುದಾಗಿದೆ. ಜೋಳವು ಹಾಲಿನ ಪ್ರಮಾಣವನ್ನು ಹೆಚ್ಚಿಸಿ, ರಾಸುಗಳು ಆರೋಗ್ಯವಾಗಿರುವಂತೆ ಮಾಡುತ್ತದೆ.
ಇದನ್ನೂ ಓದಿರಿ: ಬಾಳೆ ಬೆಳೆಯಲ್ಲಿ ಸುಲಭವಾಗಿ ಅಧಿಕ ಇಳುವರಿ ಪಡೆಯುವುದು ಹೇಗೆ ಗೊತ್ತೇ..?
ತೆನೆಜೋಳ :-
ತೆನೆಜೋಳವು ಒಂದು ಉತ್ತಮ ಆಹಾರ ಬೆಳೆಯಾಗಿದ್ದು, ಪ್ರಾಣಿಗಳ ಮೇವಿನ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಇದು ಎಲ್ಲ ರೀತಿಯ ಮಣ್ಣುಗಳಲ್ಲಿಯೂ ಉತ್ತಮವಾಗಿ ಬೆಳೆದು ಹೆಚ್ಚಿನ ಇಳುವರಿಯನ್ನು ನೀಡುತ್ತದೆ. ಕಟಾವಿಗೆ ಸುಮಾರು 60 ರಿಂದ 65 ದಿನಗಳಲ್ಲಿ ಬರುತ್ತದೆ. ಇದು ಸಹ ಹಾಲಿನ ಇಳುವರಿಯನ್ನು ಉತ್ತಮವಾಗಿ ಹೆಚ್ಚಿಸುತ್ತದೆ. ಹೆಕ್ಟೇರಿಗೆ ಬಿತ್ತನೆ ಬೀಜವು ಸುಮಾರು 40 ರಿಂದ 45 ಕೆ.ಜಿ. ಬೇಕಾಗುತ್ತದೆ.
ಹೈಬ್ರಿಡ್ ನೇಪಿಯರ್ :-
ಈ ಬೆಳೆಯೂ ಸಂಪೂರ್ಣವಾಗಿ ಹಸಿರು ಮೇವಿಗಾಗಿಯೇ ಬೆಳೆಯಲಾಗುತ್ತದೆ. ಇವುಗಳು ಕಡಿಮೆ ನಿರ್ವಹಣೆಯಿಂದ ಹೆಚ್ಚಿನ ಹಸಿರು ಮೇವನ್ನು ನೀಡುತ್ತದೆ. ಇವುಗಳಲ್ಲಿ ಸುಮಾರು 8 ರಿಂದ 10 % ನಷ್ಟು ಪ್ರೊಟೀನ್ ಅಂಶ ಕಂಡುಬರುತ್ತದೆ. ಈ ಬೆಳೆಯನ್ನು ವರ್ಷವಿಡೀ ಬೆಳೆಯಬಹುದಾಗಿದ್ದು, ನೆಲವನ್ನು ಉತ್ತಮವಾಗಿ ಸಜ್ಜುಮಾಡಿ ನಟಿ ಮಾಡಿದರೆ ಆಯಿತು. 20 ರಿಂದ 25 ದಿನಗಳಿಗೊಮ್ಮೆ ನೀರನ್ನು ಬಿಡುತ್ತ ಬಂದರೆ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. ಹೈನುರಾಸುಗಳು ತುಂಬಾ ಇಷ್ಟಪಟ್ಟು ತಿನ್ನುವುದಲ್ಲದೆ ಹೆಚ್ಚಿನ ಹಾಲನ್ನು ಸಹ ನೀಡುತ್ತವೆ.
ಗಿನಿ ಹುಲ್ಲು :-
ಗಿನಿಹುಲ್ಲು ಒಂದು ಉತ್ತಮ ಮೇವಿನ ಬೆಳೆಯಾಗಿದೆ. ಇದು ತುಂಬಾ ವೇಗವಾಗಿ ಮತ್ತು ಅಗಲವಾದ ಬುಡದೊಂದಿಗೆ ಬೆಳೆಯುತ್ತದೆ. ಇದು ಬಹುವಾರ್ಷಿಕ ಬೆಳೆಯಾಗಿದ್ದು, ಹುಲ್ಲಿನ ದಂಟನ್ನು ಕಬ್ಬಿನಂತೆಯೇ ಬೀಜವಾಗಿ ಬಳಸಬಹುದಾಗಿದೆ. ಇದರಲ್ಲಿ ಶೇಕಡಾ 12 ರಷ್ಟು ಪ್ರೊಟೀನ್ ಅಂಶವಿದ್ದು ರಾಸುಗಳ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಈ ಬೆಳೆಯನ್ನು 40 ರಿಂದ 45 ದಿನಗಳಲ್ಲಿ ಕಟಾವು ಮಾಡಲು ಬರುತ್ತದೆ. ಒಂದು ವರ್ಷದಲ್ಲಿ 6 ರಿಂದ 7 ಕಟವನ್ನು ಪಡೆಯಬಹುದಾಗಿದೆ.
ಪ್ಯಾರಾ ಹುಲ್ಲು :-
ಪ್ಯಾರಾ ಹುಲ್ಲು ಒಂದು ಜವಾರಿ ತಳಿಯ ಹುಲ್ಲಿನ ಬೆಳೆಯಾಗಿದೆ. ಇದು ತುಂಬಾ ವೇಗವಾಗಿ ಬೆಳೆಯುವುದರಿಂದ ವರ್ಷದಲ್ಲಿ 6 ರಿಂದ 9 ಬೆಳೆಯನ್ನು ತೆಗೆಯಬಹುದಾಗಿದೆ. ಇದರ ನಾಟಿಗಾಗಿ ಗಿಡದ ದಂಟನ್ನು ಬಳಸಲಾಗುತ್ತದೆ. ಇದು ಸಾಮಾನ್ಯ ಹುಲ್ಲಿನಂತೆ ನೆಲದಲ್ಲಿ ಹರಡಿಕೊಂಡು ಬೆಳೆಯುತ್ತದೆ ಮತ್ತು ಬಿದ್ದಲ್ಲಿಯೇ ಬೇರನ್ನು ನೀಡಿ ಮುಂದೆ ಸಾಗುತ್ತದೆ. ಇಂತಹ ವಾತಾವರಣದಲ್ಲಿಯೂ ಬೆಳೆಯುವ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚಿನ ಹುಲ್ಲಿನ ಅವಶ್ಯಕತೆಯಿರುವವರಿಗೆ ಉತ್ತಮವಾದ ಮೇವಿನ ಬೆಳೆಯಾಗಿದೆ.
ಸುಬಾಬ್ ಹುಲ್ಲು :-
ಇದು ಒಂದು ಹಸಿರು ಮೇವಿನ ಮರದ ಬೆಳೆಯಾಗಿದೆ. ಈ ಗಿಡಗಳನ್ನು ಬದುಗಳಲ್ಲಿ ಅಥವಾ ಬೇಲಿಗಳಲ್ಲಿ ನಾಟಿ ಮಾಡಬಹುದಾಗಿದೆ. ಇದು ನೆಲದಿಂದ 5 ಪುಟ್ ಗಳಷ್ಟು ಬೆಳೆಯುತ್ತದೆ. ಜೂನ್ – ಜುಲೈನಲ್ಲಿ ಗಿಡಗಳನ್ನು ನಟಿ ಮಾಡಬಹುದಾಗಿದೆ. ಅವು ಬೆಳೆದು ದೊಡ್ಡದಾಗಿ ಒಂದು ಬೀಜದ ಬೆಳೆಯನ್ನು ನೀಡಿದ ನಂತರ ಕ್ರಮವಾಗಿ ಕಟಾವನ್ನು ಮಾಡಬಹುದಾಗಿದೆ.
ಗ್ಲಿರಿಸಿಡಿಯಾ ಮೇವು :-
ಗ್ಲಿರಿಸಿಡಿಯಾ ಗಿಡವು ಗೊಬ್ಬರದ ಗಿಡ ಎಂದೇ ಪರಿಚಿತ. ಇದು ದ್ವಿದಳ ಜಾತಿಗೆ ಸೇರಿದ ಮರ ಮೇವಿನ ಬೆಳೆಯಾಗಿದೆ. ಇದು ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುತ್ತದೆ. ಈ ಗಿಡವನ್ನು ಬೀಜ ಹಾಗೂ ದಂಟಿನಿಂದಲೂ ಸಸ್ಯೋತ್ಪಾದನೆ ಮಾಡಬಹುದಾಗಿದೆ. ಗ್ಲಿರಿಸೀಡಿಯವನ್ನು ಹಸಿರೆಲೆ ಗೊಬ್ಬರವಾಗಿ ,ಬೇಲಿಯಾಗಿ ಮತ್ತು ಆಧಾರ ಗಿಡವಾಗಿಯೂ ಬೆಳೆಯುತ್ತಾರೆ. ಇದನ್ನು ತುಂಬಾ ಸುಲಭವಾಗಿ ಬೆಳೆಯಬಹುದಾಗಿದ್ದು ಸೊಪ್ಪನ್ನು ಕಟಾವು ಮಾಡಿ ರಾಸುಗಳಿಗೆ ತಿನ್ನಿಸಬಹುದಾಗಿದೆ.