ಡಿಸೆಂಬರ್ 15 ರಿಂದ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಖರೀದಿಗೆ ನೋಂದಣಿ ಆರಂಭ

ಬೆಂಗಳೂರು: ಕೇಂದ್ರ ಸರ್ಕಾರದಿಂದ 2022-23 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಸಲಾಗುತ್ತಿದ್ದು, ಇದೇ ಡಿಸೆಂಬರ್ 15 ರಿಂದ ನೋಂದಣಿ ಆರಂಭವಾಗಲಿದೆ.

ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕಾರ್ಯ ಡಿಸೆಂಬರ್ 15 ರಿಂದ ಆರಂಭವಾಗಲಿದ್ದು, ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜನ್ಸಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ನೋಂದಣಿ ಮಾಡಿಸಿಕೊಂಡ ರೈತರಿಂದ ಭತ್ತ ಮತ್ತು ರಾಗಿಯನ್ನು ಜನವರಿ 1 ರಿಂದ ಮಾರ್ಚ್ 31 ರ ವರೆಗೆ ಖರೀದಿ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಓರ್ವ ಬೆಳಗಾರರಿಂದ ಗರಿಷ್ಠ 40 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುತ್ತದೆ. ಹಾಗೆಯೇ ರಾಗಿಯನ್ನು ಕನಿಷ್ಠ 10 ಕ್ವಿಂಟಲ್ ನಿಂದ 20 ಕ್ವಿಂಟಲ್ ಖರೀದಿಸಲಾಗುವುದು.

ಇದನ್ನೂ ಓದಿರಿ: ಬಾಳೆ ಬೆಳೆಯಲ್ಲಿ ಸುಲಭವಾಗಿ ಅಧಿಕ ಇಳುವರಿ ಪಡೆಯುವುದು ಹೇಗೆ ಗೊತ್ತೇ..?

ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 2,040 ರೂಪಾಯಿ ಹಾಗೂ ಎ ಗ್ರೇಡ್ ಭತ್ತಕ್ಕೆ 2,060 ರೂಪಾಯಿ ಬೆಲೆ ನಿಗದಿಪಡಿಸಿದೆ. ಅದೇ ರೀತಿ ಪ್ರತಿ ಕ್ವಿಂಟಾಲ್ ರಾಗಿಗೆ 3,578 ರೂಪಾಯಿ ನಿಗದಿಪಡಿಸಲಾಗಿದೆ. ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಟಾಸ್ಕ್‌ಫೋರ್ಸ್ ಸಮಿತಿಯು ಖರೀದಿಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸಲು ಮುಂದಾಗುವಂತೆ ಸೂಚಿಸಲಾಗಿದೆ.

ಭತ್ತ ಮತ್ತು ರಾಗಿ ಮಾರಾಟ ಮಾಡುವ ಸಮಯದಲ್ಲಿ ನೀಡಲಾಗುವ ಬೆಂಬಲ ಬೆಲೆಯನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಭತ್ತವನ್ನು ಮಾರಲು ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿರಿ: ಹೈನುರಾಸುಗಳಿಗೆ ಮೇವಿನ ಕೊರತೆಯೇ …. ಇಲ್ಲಿದೆ ಕೆಲವು ಮೇವಿನ ಬೆಳೆಗಳ ಮಾಹಿತಿ

LEAVE A REPLY

Please enter your comment!
Please enter your name here