ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ತೋಳು ನೋವು ಬರಲು ಕಾರಣವೇನು? ಆ ನೋವನ್ನು ಕಡಿಮೆ ಮಾಡುವುದು ಹೇಗೆ?

coronavirus-vaccination-why-do-you-have-pain-in-your-arms-post-vaccination

ಕೊರೋನಾ ವೈರಸ್ ಜಗತ್ತಿನಲ್ಲಿ ತನ್ನ ವೇಷವನ್ನು ಬದಲಿಸಿಕೊಂಡು ಪದೇ ಪದೆ  ದಾಳಿಗೆ ಇಳಿಯುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆದುಕೊಳ್ಳುವುದು ಬಿಟ್ಟರೆ ಬೇರೆ ಪರಿಹಾರ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಲಸಿಕೆಯನ್ನು ಚುಚ್ಚುವ ದೃಶ್ಯಗಳನ್ನು ನೋಡಿದ ಹಲವಾರು ಇದಕ್ಕೆ ಭಯಗೊಂಡಿದ್ದಾರೆ. ಇದಲ್ಲದೆ ಲಸಿಕೆ ತೆಗೆದುಕೊಂಡವರ ಅನುಭವವನ್ನು ಕೇಳಿ ತೋಳುಗಳು ತುಂಬಾ ನೋವಿನಿಂದ ಕೂಡಿರುತ್ತವೆ ಎಂದು ಆತಂಕಗೊಂಡಿದ್ದಾರೆ. ಹಾಗಾದರೆ ಲಸಿಕೆ ತೆಗೆದುಕೊಂಡ ಬಳಿಕ ತೋಳು ನೋವು ಬರಲು ಕಾರಣವೇನು? ಆ ನೋವನ್ನು ಕಡಿಮೆ ಮಾಡುವುದು ಹೇಗೆ? ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ನಾವಿಂದು ಬಂದಿದ್ದೇವೆ.

ಸಾಮಾನ್ಯವಾಗಿ ಲಸಿಕೆಯನ್ನು ತೆಗೆದುಕೊಂಡವರಲ್ಲಿ ಹಲವರಿಗೆ ಜ್ವರ, ಆಯಾಸ, ಮೈಕೈ ನೋವು ಮತ್ತು ಲಸಿಕೆ ಪಡೆದ ಸ್ಥಳದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇವುಗಳನ್ನು ಹಲವಾರು ಅಡ್ಡಪರಿಣಾಮಗಳು ಎಂದು ತಿಳಿAದುಕೊಂಡಿದ್ದಾರೆ. ನಮ್ಮ ದೇಹದಲ್ಲಿ ಲಸಿಕೆ ಸೇರ್ಪಡೆಗೊಂಡ ಬಳಿಕ ಈ ರೀತಿಯ ಲಕ್ಷಣಗಳು ಕಂಡುಬರುತ್ತಿವೆ ಎಂದರೆ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯು ಲಸಿಕೆಯೊಡನೆ ಸ್ಪಂದಿಸುತ್ತಿದೆ ಎಂದರ್ಥ. ಇದಲ್ಲದೇ ಲಸಿಕೆಯನ್ನು ನೇರವಾಗಿ ತೋಳಿನ ಸ್ನಾಯುಗಳಿಗೆ ನೀಡುವುದರಿಂದ ಅಲ್ಲಿನ ಪ್ರದೇಶ ಮೂರ್ನಾಲ್ಕು ದಿನ ನೋವಿನಿಂದ ಕೂಡಿರುತ್ತದೆ.

ಕೊರೋನಾ ಲಸಿಕೆಯನ್ನು ಜನರ ತೋಳಿಗೇ ಏಕೆ ಕೊಡುತ್ತಾರೆ ?

ಹಲವರಲ್ಲಿ ಈ ಪ್ರಶ್ನೆಯು ಕಾದಿರುವುದಂತೂ ಸುಳ್ಳಲ್ಲ, ನಾವಿಂದು ಈ ಕುರಿತು ತಜ್ಞರು ನೀಡಿರುವ ಮಾಹಿತಿಯನ್ನು ನಿಮ್ಮ ಮುಂದಿಡಲಿದ್ದೇವೆ. ಮುಂದೆ ಓದಿ.. ಅಮೇರಿಕದ ಪ್ರಾಧ್ಯಾಪಕ ಲಿಬ್ಬಿ ರಿಚರ್ಡ್ಸ್ ಎಂಬುವವರು ಈ ಕುರಿತು ಮಾಹಿತಿ ನೀಡಿದ್ದು, ಬಹುತೇಕ ಲಸಿಕೆಗಳನ್ನು ತೋಳಿಗೆ ನೀಡಲಾಗುತ್ತದೆ. ಏಕೆಂದರೆ ತೋಳಿನ ಮಾಂಸಖಂಡದಲ್ಲಿನ ಅಂಗಾಂಶದಲ್ಲಿ ರೋಗನಿರೋಧಕ ಜೀವಕೋಶಗಳು ಇರುತ್ತವೆ. ಈ ಜೀವಕೋಶಗಳು ರೋಗನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಲು ನೀಡುವ ಲಸಿಕೆಯಲ್ಲಿನ ಪ್ರತಿಜನಕಗಳನ್ನು ಗುರುತಿಸುವ ಕೆಲಸ ಮಾಡುತ್ತವೆ. ಸದ್ಯ ನೀಡಲಾಗುತ್ತಿರುವ ಕೊರೋನಾ ಲಸಿಕೆಯಲ್ಲಿ ಆಂಟಿಜೆನ್ ಗಳನ್ನು ನೀಡಲಾಗುತ್ತಿಲ್ಲ. ಬದಲಿಗೆ ಅದನ್ನು ದೇಹದಲ್ಲಿಯೇ ಉತ್ಪಾದನೆ ಮಾಡುವ ಯೋಜನೆಯನ್ನು ರವಾನಿಸಲಾಗುತ್ತಿದೆ. ತೋಳಿನಲ್ಲಿರುವ ಜೀವಕೋಶಗಳು ಇದರಲ್ಲಿರುವ ಸಂದೇಶವನ್ನು ಸ್ವೀಕರಿಸಿ ದುಗ್ಧರಸ ಗ್ರಂಥಿಗಳಿಗೆ ಕಳುಹಿಸುತ್ತವೆ. ಆ ನಂತರದಲ್ಲಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಅಭಿವೃದ್ಧಿಹೊಂದುತ್ತದೆ.

ತೋಳಿಗೇ ಏಕೆ ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ, ದುಗ್ಧರಸ ಗ್ರಂಥಿಯ ಗುಚ್ಛ ತೋಳಿನಲ್ಲಿ ಇರುತ್ತದೆ. ಅದೇ ತೊಡೆಗೆ ಲಸಿಕೆಯನ್ನು ನೀಡಿದರೆ ಇಂತಹ ಗುಚ್ಛವು ಸ್ವಲ್ಪ ದೂರದಲ್ಲಿದೆ. ಈ ಎಲ್ಲ ಕಾರಣಗಳಿಂದ ಕೊರೋನಾ ಲಸಿಕೆಯನ್ನು ನೇರವಾಗಿ ತೋಳಿಗೆ ನೀಡುತ್ತಾರೆ.

ಇದನ್ನೂ ಓದಿರಿ: ಆಯುರ್ವೇದ ಈ ಕಷಾಯ ಶೀತ ಕೆಮ್ಮು ಜ್ವರಕ್ಕೆ ರಾಮಬಾಣ..!

ಲಸಿಕೆ ಪಡೆದ ಬಳಿಕ ತೋಳಿನಲ್ಲಿ ನೋವು ಕಾಣಿಸಿಕೊಳ್ಳುವುದು ಏಕೆ ?

coronavirus-vaccination-why-do-you-have-pain-in-your-arms-post-vaccination

ಸಾಮಾನ್ಯವಾಗಿ ನಮ್ಮ ದೇಹಕ್ಕೆ ಪರಕೀಯ ವಸ್ತುವು ಪ್ರವೇಶಿಸಿದ ನಂತರ ನಮ್ಮ ರೋಗನಿರೋಧ ವ್ಯವಸ್ಥೆ, ಅದು ಪ್ರವೇಶಿಸಿದ ಜಾಗವನ್ನು ಮತ್ತು ನರಗಳನ್ನು ಹೆಚ್ಚಿನ ಸಂವೇದನೆಗೆ ಒಳಪಡಿಸುತ್ತದೆ. ಆ ಮೂಲಕ ಪರಕೀಯ ವಸ್ತುವು/ ವೈರಸ್ ಇತರೆಡೆಗೆ ಹರಡದಂತೆ ತಡೆಯುತ್ತದೆ. ನಂತರ ಅದಕ್ಕೆ ಪ್ರತಿಕಾಯಗಳನ್ನು ತಯಾರಿಸಲು ಆರಂಭಿಸುತ್ತದೆ. ನಮ್ಮ ದೇಹದಲ್ಲಿ ಪ್ರತಿಕಾಯಗಳು ಎರಡನೆಯ ದಿನದಿಂದ ಉತ್ಪತ್ತಿಯಾಗಲು ಆರಂಭಿಸುತ್ತದೆ. ಅಲ್ಲಿಯವರೆಗೆ ರೋಗಾಣುವನ್ನು ತಡೆಗಟ್ಟಲು ಇತರ ಕ್ರಮಗಳಾದ ಜ್ವರ, ಮೈಕೈ ನೋವು, ವಾಕರಿಕೆಯಂತಹ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಇದಲ್ಲದೇ ಲಸಿಕೆ ನೀಡುವಾಗ ತೋಳಿನ ಸ್ನಾಯುಗಳಿಗೆ ಸೂಜಿಯು ಗಾಯವನ್ನು ಮಾಡಿರುತ್ತದೆ. ಆ ಭಾಗದ ಸ್ನಾಯುವೂ ಘಾಸಿಗೊಂಡಿರುವುದರಿಂದ ನೋವಿರುವುದು ಸಹಜ. ಈ ಎಲ್ಲ ಕಾರಣಗಳಿಂದಾಗಿ ನಮ್ಮ ದೇಹದಲ್ಲಿ ಲಸಿಕೆ ಪಡೆದ ನಂತರ ತೋಳಿನಲ್ಲಿ ನೋವು, ಜ್ವರ ಮತ್ತು ಮೈಕೈ ನೋವು ಕಾಣಿಸಿಕೊಳ್ಳುವುದು.

ಇದನ್ನೂ  ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಆಹಾರಗಳು ನಿಮಗಾಗಿ…!

ತೋಳು ನೋವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ?

coronavirus-vaccination-why-do-you-have-pain-in-your-arms-post-vaccination

ಲಸಿಕೆಯನ್ನು ಪಡೆದ ಒಂದೆರಡು ದಿನದಲ್ಲಿ ಸಾಮಾನ್ಯವಾಗಿ  ನೋವು ಕಡಿಮೆಯಾಗುತ್ತದೆ. ಈ ಕಾರಣಕ್ಕಾಗಿ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಆದರೂ ನೋವು ನಿವಾರಣೆಗಾಗಿ ಹೆಚ್ಚು ಒತ್ತಡ ನೀಡದ ವ್ಯಾಯಾಮಗಳನ್ನು ಮಾಡಬಹುದು. ಇದರಿಂದಾಗಿ ಉತ್ತಮ ರಕ್ತಪರಿಚನೆ ಉಂಟಾಗಿ ನೋವು ಬೇಗನೆ ಕಡಿಮೆಯಾಗುತ್ತದೆ. ಆದರೆ ಲಸಿಕೆ ಹಾಕಿಸಿಕೊಂಡ ನಂತರ ಹೆಚ್ಚಿನ ಭಾರ ಎತ್ತುವುದು, ಹೆಚ್ಚು ಒತ್ತಡದ ವ್ಯಾಯಾಮ ಮಾಡಬೇಡಿ. ಇದಲ್ಲದೇ ತೋಳಿಗೆ ಮಂಜುಗಡ್ಡೆಯನ್ನು ಇಟ್ಟು ನೋವನ್ನು ನಿವಾರಿಸಿಕೊಳ್ಳಬಹುದು. ಆದರೆ ಬಿಸಿಯ ಶಾಖವನ್ನು ಕೊಡಲು ಹೋಗಬಾರದು. ಇದು ಇನ್ನಷ್ಟು ತೊಂದರೆಯನ್ನು ಉಂಟುಮಾಡುತ್ತದೆ ಎಚ್ಚರವಿರಲಿ. ತೋಳಿನಲ್ಲಿನ ನೋವಿನ ಅರ್ಥ ಲಸಿಕೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬಹುದೇ ಆಗಿದೆ.

ಕೊರೋನಾದಂತಹ ಭಯಾನಕ ವೈರಸ್ ನಿಂದ ರಕ್ಷಣೆ ಪಡೆದುಕೊಳ್ಳಲು ನಮಗೆ ಈಗಿರುವುದು ಲಸಿಕೆಯೊಂದೇ ಮಹಾ ಅಸ್ತ್ರವಾಗಿದೆ. ಆದ್ದರಿಂದ ನಾವೆಲ್ಲರೂ ಲಸಿಕೆಯನ್ನು ಪಡೆಯುವ ಮೂಲಕ ನಮ್ಮ ಹಾಗೂ ಕುಟುಂಬದ ರಕ್ಷಣೆಗೆ ಮುಂದಾಗಬೇಕಿದೆ. ನಾವಿಂದು ಭಯದಿಂದ ಲಸಿಕೆ ಪಡೆಯದಿರುವ ಹಲವರಿಗೆ, ಈ ಮಾಹಿತಿಯನ್ನು ತಲುಪಿಸುವ ಮೂಲಕ ಪ್ರತಿಯೊಬ್ಬರೂ ಲಸಿಕೆ ಪಡೆದು ಈ ಕ್ಲಿಷ್ಟಕರ ಪರಿಸ್ಥಿತಿಯಿಂದ ಹೊರಬರಲು ಶ್ರಮಿಸಬೇಕಿದೆ. ಲಸಿಕೆಯಿಂದ ತೋಳಿನಲ್ಲಿ ಉಂಟಾಗುವ ಈ ಚಿಕ್ಕ ನೋವು ಮುಂದೊಂದು ದಿನ ಉಂಟಾಗಬಹುದಾದ ದೊಡ್ಡ ನೋವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ನಾವು ಸದಾ ನೆನಪಿಟ್ಟುಕೊಳ್ಳುವುದು ಅವಶ್ಯವೆನಿಸುತ್ತದೆ.

ಇದನ್ನೂ  ಓದಿರಿ: ಬಿಸಿಗೆ ನಾಲಿಗೆ ಸುಟ್ಟುಕೊಂಡಿದ್ದೀರೆ ? ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು

LEAVE A REPLY

Please enter your comment!
Please enter your name here