ಆಯುರ್ವೇದದ ಪ್ರಕಾರ ನಿದ್ರೆಯು ಮಾನವನ ಆರೋಗ್ಯದ ಆಧಾರ ಸ್ತಂಭ. ದೇಹವು ಆರೋಗ್ಯವಾಗಿ ಮತ್ತು ಸುಸ್ಥಿತಿಯಲ್ಲಿ ತನ್ನೆಲ್ಲ ಕೆಲಸಗಳನ್ನು ಮಾಡಲು ಪ್ರತಿಯೊಬ್ಬನಿಗೂ ನಿದ್ರೆಯು ಬಹು ಮುಖ್ಯವಾಗಿದೆ. ಇದು ದೇಹದ ಒತ್ತಡವನ್ನು ನಿವಾರಿಸಲು ಮತ್ತು ಚೈತನ್ಯವನ್ನು ತುಂಬಲು ಸಹಕಾರಿಯಾಗಿದೆ. ನಾವು ನಿದ್ರೆಯಲ್ಲಿ ಇರುವಾಗ ನಮ್ಮ ದೇಹವು ತನ್ನೆಲ್ಲ ಆಯಾಸವನ್ನು ನಿವಾರಿಸಿಕೊಂಡು ಮತ್ತೆ ಲವಲವಿಕೆಯಿಂದ ಕಾರ್ಯನಿರ್ವಹಿಸುವಂತೆ ಪುನರ್ ಚೈತನ್ಯ ಪಡೆದುಕೊಳ್ಳುತ್ತದೆ. ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆಯು ಬಾರದೆ ಹಗಲಲ್ಲಿ ಅನೇಕ ತೊಂದರೆಗಳಿಗೆ ಒಳಗಾಗುತ್ತಿದ್ದರೆ ಇದನ್ನೇ ನಿದ್ರಾಹೀನತೆ ಎನ್ನುವುದು.
ನಿದ್ರೆಯ ಕೊರತೆಯು ನಮ್ಮ ಕೆಲಸದ ಕ್ಷಮತೆಯಿಂದ ಹಿಡಿದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆಯೂ ಪರಿಣಾಮವನ್ನು ಬೀರುತ್ತದೆ. ನಿದ್ರೆಯ ಕೊರತೆಯಿಂದ ನಾವು ಅನೇಕ ವಿಚಿತ್ರ ಸಮಸ್ಯೆಗಳಿಗೆ ತುತ್ತಾಗುತ್ತೇವೆ. ನಿದ್ರೆಯ ಸಮಸ್ಯೆಯೆಂದರೆ ಮಲಗಿದಾಗ ಹಲವಾರು ಯೋಚನೆಗಳು ಪ್ರಾರಂಭವಾಗಿ ಎಷ್ಟೇ ಪ್ರಯತ್ನಿಸಿದರೂ ನಿದ್ರೆಯು ಬಾರದೆ ಹೋಗುತ್ತದೆ. ಇದಲ್ಲದಿದ್ದರೆ ಎಲ್ಲೋ ಮಧ್ಯರಾತ್ರಿಯಲ್ಲಿ ಒಮ್ಮೆಲೇ ಎಚ್ಚರವಾಗಿ ನಂತರ ಹಲವಾರು ಯೋಚನೆಗಳು ಬಂದು ನಿದ್ರೆಗೆ ತೊಡಕಾಗುತ್ತದೆ. ನಂತರ ಎಷ್ಟೇ ಪ್ರಯತ್ನಿಸಿದರೂ ನಿದ್ರಿಸಲು ಸಾಧ್ಯವಾಗುವುದಿಲ್ಲ. ಇಂತಹ ನಿದ್ರಾಹೀನತೆ ಸಮಸ್ಯೆಯಿಂದಾಗಿ ನಾವು ಹಗಲಲ್ಲಿ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗುತ್ತೇವೆ. ಆಯುರ್ವೇದದ ಪ್ರಕಾರ ಈ ರೀತಿಯ ಲಕ್ಷಣಗಳು ವಾತ, ಪಿತ್ತ ಮತ್ತು ಕಫಗಳೆಂಬ ತ್ರಿದೋಷಗಳಲ್ಲಿನ ವ್ಯತ್ಯಾಸದಿಂದ ಉಂಟಾಗುತ್ತದೆ.
ಇದನ್ನೂ ಓದಿರಿ: ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?
ಈ ಸಮಸ್ಯೆಗಳಿಂದ ಹೊರಬರಲು ನಾವು ನಮ್ಮ ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ನಮ್ಮ ನಿದ್ರಾ ಹೀನತೆಯ ಸಮಸ್ಯೆ ದೂರವಾಗಿಸಲು ಕೆಲವು ಉಚಿತ ಸಲಹೆಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತೇವೆ, ಆ ಕುರಿತು ತಿಳಿಯಲು ಮುಂದೆ ಓದಿ.
ಚಹಾ, ಕಾಫಿಗಳಿಂದ ದೂರವಿರಿ
ಚಹಾ ಮತ್ತು ಕಾಫಿಗಳಲ್ಲಿ ಇರುವ ಕೆಫಿನ್ ನಮ್ಮ ನಿದ್ರೆಯನ್ನು ತಡೆಯುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಇವುಗಳ ಸೇವನೆಯನ್ನು ತಡೆಗಟ್ಟುವುದು ಅವಶ್ಯಕವಾಗಿದೆ. ಅದರಲ್ಲಿಯೂ ಮದ್ಯಾಹ್ನ 3 ಗಂಟೆಯ ನಂತರ ಯಾವುದೇ ಕಾರಣಕ್ಕೂ ಇವುಗಳ ಸೇವನೆಯನ್ನು ಮಾಡಬಾರದು ಇವುಗಳ ಬದಲಿಗೆ ಜೀರಿಗೆ ಮಿಶ್ರಿತ ಕಷಾಯಗಳನ್ನು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.
ಇದನ್ನೂ ಓದಿರಿ: ಹಾಗಲಕಾಯಿಯ ಸೇವನೆಯಿಂದ ಏನೆಲ್ಲಾ ಉಪಯೋಗಗಳಿವೆ ನಿಮಗೆ ತಿಳಿಯಬೇಕೆ ಹಾಗಾದರೆ ಓದಿ
ಹಾಲನ್ನು ಸೇವನೆ ಮಾಡಿ
ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯುವುದು ಉತ್ತಮ. ಇದರಿಂದ ನಿಮಗೆ ಉತ್ತಮ ನಿದ್ರೆಯು ಬರುತ್ತದೆ. ಉತ್ತಮ ನಿದ್ರೆಗಾಗಿ ಬಿಸಿ ಹಾಲಿಗೆ ಒಂದು ಚಮಚ ಜಾಯಿಕಾಯಿ ಪುಡಿಯನ್ನು ಸೇರಿಸಿಕೊಂಡು ಕುಡಿಯಬಹುದು. ಇದು ನಿಮಗೆ ಉತ್ತಮ ನಿದ್ರೆಯು ಬರುವಂತೆ ಪ್ರೇರೇಪಣೆ ನೀಡುತ್ತದೆ. ಪಿತ್ತ ಪ್ರಕೃತಿಯ ದೇಹದವರು ಹಾಲಿನೊಂದಿಗೆ ಶತಾವರಿ ಸೇರಿಸಿ, ಕಫ ಪ್ರಕೃತಿಯವರು ಅರಿಶಿನವನ್ನು ಮತ್ತು ವಾತ ಪ್ರಕೃತಿಯವರು ಬೆಳ್ಳುಳ್ಳಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಉತ್ತಮ ಪರಿಹಾರ ದೊರೆಯುತ್ತದೆ.
ತೈಲ ಮಸಾಜ್ ಅಥವಾ ಅಭ್ಯಂಗ
ಎಣ್ಣೆಯಿಂದ ತಲೆಗೆ ಮತ್ತು ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ನರಮಂಡಲವನ್ನು ಶಾಂತಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನೆತ್ತಿಗೆ ಅಥವಾ ಪಾದಗಳಿಗೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ಉತ್ತಮ ನಿದ್ರೆಯನ್ನು ಪಡೆದುಕೊಳ್ಳಬಹುದು. ಇಲ್ಲದಿದ್ದರೆ ಸಂಜೆಯ ಸಮಯದಲ್ಲಿ ಎಣ್ಣೆಯಿಂದ ಸಂಪೂರ್ಣ ದೇಹವನ್ನು ಮಸಾಜ್ ಮಾಡಿಕೊಳ್ಳಿ, ನಂತರ ಬಿಸಿ ನೀರಿನಿಂದ ಸ್ನಾನಮಾಡಿ ನಂತರ ಮಲಗುವುದರಿಂದ ಸಂಪೂರ್ಣ ದೇಹವು ಶಾಂತವಾಗಿ ನಿದ್ರೆಯನ್ನು ಉತ್ತಮ ಮಾಡಲು ಸಹಕರಿಸುತ್ತದೆ.
ಇದನ್ನೂ ಓದಿರಿ: ಗೋಡಂಬಿ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನಿಮಗೆ ಗೊತ್ತೇ ?
ನಿಮ್ಮ ಎಲೆಕ್ಟ್ರಾನಿಕ್ ಗ್ಯಾಡ್ಗೆಟ್ ಗಳಿಂದ ದೂರವಿರಿ
ಟಿವಿ, ಮೊಬೈಲ್ ಗಳು ನಮ್ಮ ನಿದ್ರೆಯನ್ನು ಹಾಳುಮಾಡಲು ಪ್ರಮುಖ ಕಾರಣಗಳಾಗಿವೆ. ನಿದ್ರೆಯ ಸಮಸ್ಯೆಯಿಂದ ಬಳಲುವವರು ಸಾಧ್ಯವಾದಷ್ಟು ರಾತ್ರಿಯ ಸಮಯದಲ್ಲಿ ಇವುಗಳಿಂದ ದೂರವಿರಬೇಕು. ಇವುಗಳಿಂದ ಹೊರಡುವ ಕಿರಣಗಳು ನಮ್ಮ ನರಮಂಡಲದ ಮೇಲೆ ಪ್ರಭಾವವನ್ನು ಬೀರುತ್ತವೆ. ಇದರಿಂದಲೂ ನಿದ್ರೆಯು ಬರದೇ ನಾವು ತೊಂದರೆ ಅನುಭವಿಸಬೇಕಾಗುತ್ತದೆ. ಕನಿಷ್ಠ ಒಂದು ಗಂಟೆಯ ಮೊದಲು ನಾವು ಇವುಗಳಿಂದ ದೂರವಿರುವುದು ಅವಶ್ಯಕವಾಗಿದೆ. ಇದರಿಂದ ನಮ್ಮ ನರಮಂಡಲ ಶಾಂತವಾಗಿ ನಿದ್ರೆ ಬರಲು ಸಹಾಯವಾಗುತ್ತದೆ.
ಧ್ಯಾನವನ್ನು ಅಭ್ಯಾಸ ಮಾಡಿ
ಯೋಗಾಸನ ನಮ್ಮ ದೇಹವನ್ನು ಆರೋಗ್ಯಪೂರ್ಣ ಮಾಡುವುದಲ್ಲದೆ, ಉತ್ತಮ ನಿದ್ರೆಯನ್ನು ಸಹ ಒದಗಿಸಲು ಸಹಕಾರಿಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಪ್ರಾಣಾಯಾಮ ನಮ್ಮ ನರಮಂಡಲವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಪ್ರೇರೇಪಣೆ ನೀಡುತ್ತದೆ. ಉಸಿರಾಟದ ವ್ಯಾಯಾಮವು ನಿದ್ರಾ ಕೊರತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಈ ಎಲ್ಲ ಕಾರಣಗಳಿಂದ ನಿದ್ರೆಯ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಅರ್ಧಗಂಟೆಗಳ ಕಾಲ ಲಘು ವ್ಯಾಯಾಮ ಮತ್ತು ಪ್ರಾಣಾಯಾಮವನ್ನು ಮಾಡುವುದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ.
ಇದನ್ನೂ ಓದಿರಿ: ನಿಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ ಇದನ್ನೊಮ್ಮೆ ಓದಿರಿ
ಆರೋಗ್ಯಕರ ಆಹಾರ ಸೇವನೆಮಾಡಿ
ನಿಮ್ಮ ದಿನನಿತ್ಯದ ಆಹಾರದಲ್ಲಿ ಹೆಚ್ಚಿನ ಏಕದಳ ಧಾನ್ಯಗಳನ್ನು ಬಳಕೆ ಮಾಡಿ. ಕ್ಯಾಲ್ಸಿಯಂ ಹೊಂದಿರುವ ಹಸಿರು ತರಕಾರಿಗಳನ್ನು ಹೆಚ್ಚು ಸೇವನೆ ಮಾಡುವುದು ಉತ್ತಮ. ಇದಲ್ಲದೆ ನಿಮ್ಮ ಆಹಾರದಲ್ಲಿ ಬಾಳೆಹಣ್ಣು, ಕಿವಿ ಹಣ್ಣುಗಳನ್ನು ಸೇರಿಸಿಕೊಳ್ಳಿ. ಇನ್ನು ವಾಲ್‍ನಟ್ ಸೇವನೆ ಮಾಡುವುದರಿಂದ ಅದರಲ್ಲಿರುವ ಟ್ರಿಫ್ಟೊಫಾನ್ ಅಂಶವು ನಿಮಗೆ ದೊರೆತು ನಿದ್ರೆಗೆ ಸಹಕಾರಿಯಾಗುತ್ತದೆ. ಹಾಗೆಯೇ ಡಾರ್ಕ್ ಚಾಕೊಲೇಟ್ ಸಹ ಉತ್ತಮ ನಿದ್ರೆಯನ್ನು ತರಿಸುತ್ತದೆ ಎಂದು ಹಲವಾರು ಸಂಶೋಧನೆಗಳಿಂದ ತಿಳಿದುಬಂದಿದೆ.
ಗಿಡಮೂಲಿಕೆಗಳ ಔಷಧ ತೆಗೆದುಕೊಳ್ಳಿ
ನಿದ್ರೆಯ ಸಮಸ್ಯೆಯಿಂದ ಬಳಲುವವರಿಗೆ ಆಯುರ್ವೇದದಲ್ಲಿ ಹಲವಾರು ಔಷಧಗಳು ಸಹಾಯಕ್ಕೆ ಬರುತ್ತವೆ. ಇವುಗಳ ದೀರ್ಘ ಬಳಕೆಯಿಂದಲೂ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಅಶ್ವಗಂಧ, ಶಂಕಪುಷ್ಠಿ ಹೀಗೆ ಹಲವಾರು ಗಿಡಮೂಲಿಕೆಗಳು ನಮ್ಮ ನಿದ್ರಾ ಸಮಸ್ಯೆಗಳನ್ನು ದೂರಮಾಡುತ್ತವೆ. ಇವುಗಳ ಸರಿಯಾದ ಬಳಕೆ ಮತ್ತು ಮಾಹಿತಿಗಳಿಗಾಗಿ ನೀವು ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ. ಇದರಿಂದ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮಗಳು ಉಂಟಾಗುವುದನ್ನು ತಡೆಗಟ್ಟಬಹುದು.
ಸರಿಯಾದ ನಿದ್ರೆಯ ದಿನಚರಿಯನ್ನು ಅಳವಡಿಸಿಕೊಳ್ಳಿ
ಪ್ರತಿದಿನ ನೀವು ಮಲಗುವ ಮತ್ತು ಏಳುವ ದಿನಚರಿಯನ್ನು ಸೆಟ್ ಮಾಡಿಕೊಳ್ಳಿ. ಸ್ವಲ್ಪ ದಿನಗಳ ಕಾಲ ಆ ಸಮಯಕ್ಕೆ ಮಲಗಲು ಮತ್ತು ಏಳಲು ಅಲಾರಾಂ ಸಹಾಯವನ್ನು ತೆಗೆದುಕೊಳ್ಳಿ. ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ ಮಲಗುವುದು ಮತ್ತು ಏಳುವುದು ಮಾಡುವುದರಿಂದ ನಮ್ಮ ದೇಹದ ಜೈವಿಕ ಗಡಿಯಾರವು ಜಾಗ್ರತಗೊಳ್ಳುತ್ತದೆ. ಇದರಿಂದ ನಿಮಗೆ ಮಲಗುವ ಸಮಯ ಬಂದಾಗ ತಕ್ಷಣ ನಿದ್ರೆಯು ಬರುತ್ತದೆ. ನಿಮ್ಮ ಜೈವಿಕ ಗಡಿಯಾರವನ್ನು ಜಾಗ್ರತಗೊಳಿಸಿಕೊಳ್ಳುವುದರಿಂದ ನಿಮಗೆ ನಿದ್ರೆಯ ಸಮಸ್ಯೆಯು ದೂರವಾಗುತ್ತದೆ.
ಇದನ್ನೂ ಓದಿರಿ: ನೀವು ಈ ಆಹಾರ ಪದ್ಧತಿ ಅನುಸರಿಸಿದರೆ ರಾತ್ರಿ ಒಳ್ಳೆಯ ನಿದ್ರೆ ಮಾಡಬಹುದು ನೋಡಿ..!
ನಿದ್ರಾಹೀನತೆಯ ಪರಿಹಾರಕ್ಕೆ ಆಯುರ್ವೇದದ ಸಲಹೆಗಳನ್ನು ಪಾಲಿಸುವುದು ಉತ್ತಮ. ಇದಲ್ಲದೇ ಮಲಗುವ ಕೋಣೆಯ ವಾತಾವರಣವೂ ಪ್ರಮುಖವಾಗಿರುತ್ತದೆ. ಈ ಮೇಲೆ ತಿಳಿಸಿದ ಎಲ್ಲ ಕ್ರಮಗಳನ್ನು ಬಳಸುವುದರಿಂದ ನಿಮ್ಮ ನಿದ್ರಾಹೀನತೆಯ ಸಮಸ್ಯೆಯು ಶೀಘ್ರವೇ ದೂರವಾಗುತ್ತದೆ. ನಮ್ಮ ಈ ಲೇಖನ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಇದಕ್ಕೂ ಮೀರಿದ ಕೆಲವು ಸಮಸ್ಯೆಗಳು ನಿಮ್ಮಲ್ಲಿ ಇದ್ದಲ್ಲಿ, ಅಥವಾ ಈ ಮೇಲಿನ ವಿಷಯಕ್ಕೆ ಸಂಬಂಧಿಸಿದ ಯಾವುದಾದರೂ ಪ್ರಶ್ನಗಳಿದ್ದಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.