ಸ್ನೇಹಿತರೆ, ನಿಮಗೆ ಹಗಲಿನಲ್ಲಿ ನಿದ್ರೆ ಬರುವಂತೆ ಆಗುತ್ತಿದೆಯೇ? ಆಸಕ್ತಿ ಕಳೆದುಕೊಂಡು ಹಗಲಿನಲ್ಲಿ ಮಲಗುವ ಮನಸ್ಸಾಗುತ್ತಿದೆಯೇ? ಕಳೆದ ರಾತ್ರಿ ನೀವು ಚೆನ್ನಾಗಿ ನಿದ್ರಿಸಿದ ನಂತರವೂ ಈ ಅನುಭವವಾಗುತ್ತಿದ್ದರೆ ಇದು ಗಂಭೀರ ಸಮಸ್ಯೆಯಾಗಿದೆ. ಇದರಿಂದ ನೀವು ಬಳಲಿಕೆಯಿಂದ ಕೂಡಿರುತ್ತೀರಿ. ಹೀಗಾಗಿ ಇದರಿಂದ ಶೀಘ್ರ ಹೊರಬರುವುದು ತುಂಬಾ ಅವಶ್ಯವಾಗಿದೆ. ಇಲ್ಲದೇ ಹೋದಲ್ಲಿ ತಲೆನೋವು, ಮೈಕೈ ನೋವು, ಅಜೀರ್ಣ ಹಾಗೂ ಪ್ರತಿಯೊಂದರಲ್ಲೂ ನಿರಾಸಕ್ತಿ ಇಂತಹ ಸಮಸ್ಯೆಗಳು ಕಂಡುಬರುತ್ತವೆ.
ಹಾಗಾದರೆ ಹಗಲಿನಲ್ಲಿ ನಿದ್ರೆಯ ಈ ಸಮಸ್ಯೆಗೆ ಕಾರಣಗಳೇನು?
ಹಗಲಿನಲ್ಲಿ ನಿದ್ರೆ ಬರುವಂತೆ ಆಗಲು ಹಲವಾರು ಕಾರಣಗಳಿವೆ. ಅದು ನಮ್ಮ ದೈಹಿಕ ಅಥವಾ ಮಾನಸಿಕವಾದ ಒತ್ತಡದಿಂದಲೂ ಉಂಟಾಗುತ್ತಿರಬಹುದು. ಈ ಸಮಸ್ಯೆಗೆ ಹಲವಾರು ಕಾರಣಗಳಿದ್ದು ಅವುಗಳನ್ನು ಪತ್ತೆಹಚ್ಚಿ ಪರಿಹಾರವನ್ನು ಕಂಡುಕೊಳ್ಳುವುದು ಬಹುಮುಖ್ಯವಾಗಿದೆ.
ಒತ್ತಡ
ಸಾಮಾನ್ಯವಾಗಿ ಒತ್ತಡದಲ್ಲಿರುವಾಗ, ಡಿಪ್ರೆಷನ್ ಸಮಸ್ಯೆಯಿಂದ ಬಳಲುತ್ತಿರುವಾಗ ರಾತ್ರಿ ನಿದ್ರೆಯು ನಮ್ಮ ಹತ್ತಿರಕ್ಕೆ ಸುಳಿಯುವುದಿಲ್ಲಾ. ಅಲ್ಲದೇ ಕೋಪ ನಮ್ಮನ್ನು ಅಪ್ಪಿಕೊಂಡು ನಮ್ಮನ್ನು ಆಳುತ್ತಿರುವುದರಿಂದಲೂ ಹೀಗಾಗಬಹುದು. ಈ ಕಾರಣಗಳಿಂದಾಗಿ ರಾತ್ರಿ ನಿದ್ರೆಯ ಕೊರತೆ ಉಂಟಾಗಿ ಹಗಲಿನಲ್ಲಿ ಈ ಸಮಸ್ಯೆಗಳು ಕಾಡಬಹುದು.
ಇವುಗಳಿಂದ ಹೊರಬರಲು ಪ್ರಯತ್ನಿಸಿ, ಸಕಾರಾತ್ಮಕ ವಿಚಾರಗಳನ್ನು ಮಾಡಿ. ಅಲ್ಲದೇ ಡಿಪ್ರೆಷನ್ ನಂತಹ ತೊಂದರೆಗಳಿಂದ ಹೊರಬರಲು ಯೋಗ, ಧ್ಯಾನ, ಪ್ರಾಣಾಯಾಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಅಲ್ಲದೇ ಮಕ್ಕಳು, ಹಿರಿಯರು ಮತ್ತು ಮನೆಯವರೊಂದಿಗೆ ಬೆರೆಯಿರಿ. ಇದರಿಂದ ಒತ್ತಡವು ದೂರವಾಗಿ ರಾತ್ರಿ ಉತ್ತಮ ನಿದ್ರೆಯು ಬಂದು ಲವಲವಿಕೆಯಿಂದ ಕೂಡಿದದಿನವನ್ನು ಪಡೆಯಬಹುದಾಗಿದೆ.
ಮಲಗುವ ಸಮಯ
ಸಾಮಾನ್ಯವಾಗಿ 6 ರಿಂದ 7 ತಾಸುಗಳ ಉತ್ತಮ ನಿದ್ರೆಯು ನಮಗೆ ಅವಶ್ಯವಾಗಿದೆ. ಸರಿಯಾದ ಸಮಯಕ್ಕೆ ಮಲಗಿ ಅವಶ್ಯಕವಾದ ನಿದ್ರೆಯನ್ನು ಪದೆದಮೇಲೆ ನಮ್ಮ ದೇಹವು ಹಗುರವಾದ ಅನುಭವವನ್ನು ನೀಡುತ್ತದೆ.
ರಾತ್ರಿ ಮಲಗಲು ಬಹಳ ಸಮಯಮಾಡುವುದು ಅಥವಾ ಮಲಗುವ ಮುನ್ನ ಕಾಫಿ, ಚಹಾ ಕುಡಿಯುವುದು, ಮೊಬೈಲ್ ಅಥವಾ ಟಿವಿ ನೋಡುವುದರಿಂದ ನಿದ್ರೆಯು ಬರದೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಇದನ್ನೂ ಓದಿರಿ:ಕರೋನಾ ಬಗ್ಗೆ ಭಯ ಬೇಡ..! ಆದರೆ ಈ ವೈರಸ್ ಬಗ್ಗೆ ಜಾಗ್ರತಿಯಂತೂ ಅವಶ್ಯ..!
ಅನಾರೋಗ್ಯದ ಸಮಸ್ಯೆಗಳು
ಕೆಲವೊಂದು ರೋಗಗಳು ನಮ್ಮ ದೇಹವನ್ನು ಶಕ್ತಿ ಹೀನವಾಗಿಸಿ, ಸುಸ್ತು ಉಂಟಾಗುವಂತೆ ಮಾಡುತ್ತವೆ. ಇದರಿಂದಾಗಿ ಹಗಲಿನಲ್ಲಿ ನಿದ್ರೆಯ ಲಕ್ಷಣಗಳು ಕಂಡುಬರುತ್ತವೆ. ಉದಾಹರಣೆಗೆ ಹೇಳುವುದಾದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ದೇಹವು ಅತೀ ಬೇಗ ಸುಸ್ತಾಗಿ ಹಗಲಿನಲ್ಲಿಯೂ ನಿದ್ರೆ ಬರುವಂತೆ ಮಾಡುತ್ತದೆ. ಇವುಗಳಿಂದ ಹೊರಬರಲು ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯವಾಗಿದೆ.
ರಾತ್ರಿಯ ಸಮಯದಲ್ಲಿ ಅತಿಯಾಗಿ ಆಹಾರ ಸೇವಿಸುವುದು
ರಾತ್ರಿಯ ಸಮಯದಲ್ಲಿ ಅತಿಯಾದ ಆಹಾರ ಸೇವನೆಮಾಡುವುದು ಉತ್ತಮವಲ್ಲ. ಏಕೆಂದರೆ ನಾವು ಮಲಗಿರುವಾಗ ಜೀರ್ಣಕ್ರೀಯೆಯು ನಿದಾನವಾಗಿ ನಡೆಯುತ್ತಿರುತ್ತದೆ. ಅತಿಯಾಗಿ ಆಹಾರ ಸೇವಿಸುವುದರಿಂದ ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ರಾತ್ರಿ ನಿದ್ರೆ ಸರಿಯಾಗದೆ ಹಗಲಿನಲ್ಲಿ ನಿದ್ರೆ ಬರುವಂತೆ ಆಗುತ್ತದೆ.
ನಕಾರಾತ್ಮಕ ಯೋಚನೆಗಳು
ಕೆಲವರು ತಮ್ಮ ಜೀವನದಲ್ಲಿ ನಕಾರಾತ್ಮಕ ಯೋಚನೆಗಳನ್ನೇ ತುಂಬಿಕೊಂಡಿರುತ್ತಾರೆ. ಅವರು ಯಾವಾಗಲೂ ನಕಾರಾತ್ಮಕವಾಗಿ ಯೋಚಿಸಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಉತ್ತಮ ಆರೋಗ್ಯವನ್ನು ಪಡೆಯಲು ಇವುಗಳಿಂದ ದೂರವಾಗಿ ಸಕಾರಾತ್ಮಕ ಯೋಚನೆಗಳೆಡೆಗೆ ಮನಸ್ಸನ್ನು ಹರಿಸಬೇಕಾಗುತ್ತದೆ. ಅಲ್ಲದೇ ಯೋಗ, ಧ್ಯಾನ, ದೇವರ ಪೂಜೆಗಳಂತಹ ಕ್ರೀಯೆಯಲ್ಲಿ ತೊಡಗಿಕೊಳ್ಳುವುದರಿಂದ ಹೊರಬರಬಹುದಾಗಿದೆ.
ಇದನ್ನೂ ಓದಿರಿ: ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?
ನೀವು ದಿನದ ಸಮಯದಲ್ಲಿ ಪ್ರೆಶ್ ಮತ್ತು ಆಕ್ಟಿವ್ ಆಗಿರಲು ಇಲ್ಲಿವೆ ಕೆಲವು ಸಲಹೆಗಳು:
- ಅತೀಯಾದ ನಿದ್ರೆಯ ಅನುಭವ ಉಂಟಾಗುತ್ತಿದ್ದರೆ ಸ್ವಲ್ಪ ಸಮಯ ನಿದ್ರೆಯನ್ನು ಮಾಡಿ. ನಿದ್ರೆ ಬರುತ್ತದೆ ಎಂದು ಬಹಳ ಸಮಯ ಹಗಲಿನಲ್ಲಿ ಮಲಗುವುದು ಒಳ್ಳೆಯದಲ್ಲ. 15 ರಿಂದ 30 ನಿಮಿಷ ಆರಾಮ ಮಾಡುವುದರಿಂದ ಉತ್ತಮ ಪರಿಹಾರ ದೊರೆಯುತ್ತದೆ.
- ಅಜೀರ್ಣವು ಉಂಟಾಗುವುದರಿಂದ ಆಲಸ್ಯ ಮತ್ತು ನಿದ್ರೆಯ ಅನುಭವವು ಉಂಟಾಗುತ್ತದೆ. ಸರಿಯಾದ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಜೀರ್ಣಕ್ರೀಯೆಯನ್ನುಸುಧಾರಿಸಿಕೊಳ್ಳಿ. ಶುಂಟಿಯು ಉತ್ತಮ ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಶುಂಟಿಯ ಚಹವನ್ನು ಕುಡಿಯುವುದರಿಂದ ಸಹಕಾರಿಯಾಗಬಹುದು.
- ಅತಿಯಾದ ವ್ಯಾಯಾಮ ಮಾಡುವುದು ದೇಹದ ಬಳಲಿಕೆಗೆ ಕಾರಣವಾಗುತ್ತದೆ. ಹಾಗಾಗಿ ಸರಳವಾದ ಮತ್ತು ಅವಶ್ಯಕವಾದ ವ್ಯಾಯಾಮಗಳನ್ನು ಮಾಡುವುದರಿಂದ ಇಡೀ ದಿನ ಲವಲವಿಕೆಯಿಂದ ಇರಬಹುದಾಗಿದೆ.
- ನೀವು ಮಲಗುವ ಸ್ಥಳದಲ್ಲಿ ಉತ್ತಮವಾಗಿ ಗಾಳಿ ಮತ್ತು ಬೆಳಕು ಬರುವಂತೆ ಇದೆಯೇ ಪರೀಕ್ಷಿಸಿಕೊಳ್ಳಿ. ಗಾಳಿ, ಬೆಳಕು ನಮ್ಮನ್ನು ಚೈತನ್ಯಪೂರ್ಣರನಾಗಿ ಮಾಡುತ್ತದೆ.
- ದೇಹಕ್ಕೆ ಅಗತ್ಯವಿರುವ ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸಿ, ದಿನನಿತ್ಯದ ಆಹಾರದಲ್ಲಿ ಬಹಳಷ್ಟು ತರಕಾರಿಗಳು, ಹಣ್ಣುಗಳು ಮತ್ತು ಅವಶ್ಯಕವಾದ ನೀರನ್ನು ಸೇವಿಸಿ.
- ದೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ.
- ಪ್ರಾಣಾಯಾಮವನ್ನು ಪ್ರತಿದಿನ ಮಾಡಲು ರೂಡಿಸಿಕೊಳ್ಳಿ, ಇದು ದೇಹಕ್ಕೆ ಅವಶ್ಯವಿರುವ ಆಮ್ಲಜನಕವನ್ನು ಪೂರೈಸಿ ಸದೃಡ ದೇಹವನ್ನು ನೀಡುತ್ತದೆ.
ಈ ಮಾಹಿತಿಗಳಿಂದಾಗಿ ನೀವು ಹಗಲಿನಲ್ಲಿ ನಿದ್ರೆ ಬರುವಂತೆ ಆಗಲು ಕಾರಣ ಮತ್ತು ಇದು ಉಂಟಾಗದಂತೆ ನೋಡಿಕೊಳ್ಳಲು ಕೆಲವು ಸಲಹೆಗಳನ್ನು ತಿಳಿದುಕೊಂಡಿದ್ದೀರಿ. ಇವುಗಳು ನಿಮಗೆ ಉಪಯುಕ್ತವಾಗುತ್ತವೆ ಎಂದು ನಾವು ಭಾವಿಸುತ್ತೇವೆ.