Deepavali 2022: ದೀಪಗಳ ಹಬ್ಬದ ಆಚರಣೆ ಮತ್ತು ಅದರ ಮಹತ್ವ ಇಲ್ಲಿದೆ

deepavali-celebration-benefits-and-importance

ದೀಪಾವಳಿ ಹಬ್ಬ ಬಂತೆಂದರೆ ಎಲ್ಲರ ಮನಸ್ಸು ಮತ್ತು ಮನೆಯಲ್ಲಿ ಸಂಭ್ರಮ ಮನೆಮಾಡುತ್ತದೆ. ವಿಶೇಷವಾಗಿ ದೀಪಾವಳಿ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳು ಚಾಲ್ತಿಯಲ್ಲಿದ್ದರೂ ದೀಪಾವಳಿ ಎಂದರೆ ಪ್ರಕಾಶವನ್ನು ಹೊತ್ತು ತರುವ ಹಬ್ಬವಾಗಿದೆ.

ದೀಪಾವಳಿಯು ಕಾರ್ತಿಕ ಮಾಸದ 15 ನೇಯ ದಿನ ಆಚರಿಸಲಾಗುತ್ತದೆ. ಈ ದೀಪಾವಳಿಯು ವಿಶೇಷ ಆಚರಣೆಗಳಿಂದ ಕೂಡಿದ್ದು, ಜನರಲ್ಲಿ ಭರವಸೆ, ಶಾಂತಿ, ಪ್ರೀತಿ ಮತ್ತು ಚೈತನ್ಯವನ್ನು ತುಂಬುತ್ತದೆ. ಈ ಸಮಯದಲ್ಲಿ ಪ್ರತಿ ಮನೆಯಲ್ಲಿಯೂ ದೀಪಗಳನ್ನು ಬೆಳಗಿ, ಸಿಹಿಯನ್ನು ಹಂಚಿ, ಹೊಸಬಟ್ಟೆಗಳನ್ನು ತೊಟ್ಟು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.

ದೀಪಾವಳಿಯ ಇತಿಹಾಸ

ನರಕ ಚತುರ್ದಶಿಯನ್ನು, ಶ್ರೀಕೃಷ್ಣ ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ಪ್ರತೀಕವಾಗಿ ಆಚರಿಸಲಾಗುತ್ತದೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡಿದ ಎಂದು ಹೇಳಲಾಗುತ್ತದೆ.

ರಾಮಾಯಣದ ಮಾಹಾಕಾವ್ಯದಲ್ಲಿ ಶ್ರೀರಾಮಚಂದ್ರನು ತನ್ನ ಹದಿನಾಲ್ಕು ವರ್ಷದ ವನವಾಸವನ್ನು ಮುಗಿಸಿ ಈ ದಿನದಂದೇ ಅಯೋದ್ಯೆಗೆ ಹಿಂದಿರುಗಿದನೆಂದು ಹೇಳಲಾಗಿದೆ. ಶ್ರೀರಾಮಚಂದ್ರನ ಆಗಮನದ ಸಂತೋಷವನ್ನು ದೀಪ ಬೆಳಗಿಸುವ ಮೂಲಕ ಅಯೋದ್ಯೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಅದೇ ದಿನವನ್ನು ದೀಪಾವಳಿಯನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿರಿ : ನಿಮ್ಮ ಪ್ರೀತಿ ಪಾತ್ರರಿಗೆ ದೀಪಾವಳಿ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

ದೀಪಾವಳಿಯಲ್ಲಿ ಗೋಪೂಜೆಯ ಮಹತ್ವ

ದೀಪಗಳ ಹಬ್ಬ ದೀಪಾವಳಿ, ದೀಪಾವಳಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ನಡೆದು ಬಂದಿದೆ. ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಕ್ಕೂ ಒಂದೊಂದು ಹಿನ್ನೆಲೆ ಇರುವಂತೆ ದೀಪಾವಳಿಯ ಸಮಯದಲ್ಲಿನ ಗೋ ಆರಾಧನೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ.

ಈ ಹಿನ್ನೆಲೆಯ ಪ್ರಕಾರ, ಹಿಂದೆ ಬಲಿಚಕ್ರವರ್ತಿಯು ವಾಮನರೂಪಿ ವಿಷ್ಣುಗೆ ದಾನ ನೀಡುವಾಗ ವಾಮನನು ತನ್ನ ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆ ಮೇಲೆ ಇಟ್ಟನು. ಆ ಸಮಯದಲ್ಲಿ ಬಲಿ ಚಕ್ರವರ್ತಿಯಲ್ಲಿ ವಾಮನನು ಯಾವುದಾದರೊಂದು ವರವನ್ನು ಕೇಳೆಂದಾಗ ಬಲಿಚಕ್ರವರ್ತಿಯು ಪ್ರತಿವರ್ಷವು ಒಂದು ದಿನ ತಾನು ಭೂಮಿಗೆ ಆಗಮಿಸಿಬೇಕೆಂದು, ಭೂಮಿಯಲ್ಲಿ ತನ್ನ ನೆನಪಿಗಾಗಿ ಆ ದಿನವನ್ನು ಆಚರಿಸಬೇಕು ಎಂಬುದಾಗಿ ಕೇಳಿದನು. ಅಲ್ಲದೆ, ಆ ದಿನವು ತನ್ನ ಸಾಮ್ರಾಜ್ಯದಲ್ಲಿರುವಂತೆಯೇ, ಸರ್ವ ಸಮೃದ್ಧಿ ಪರಿಪಾಲನೆಯಿಂದ ಕೂಡಿರಬೇಕೆಂದು ಆಶಿಸಿದನು.

ಹೀಗೆ ವಾಮನರೂಪಿ ವಿಷ್ಣು ಬಲಿಚಕ್ರವರ್ತಿಗೆ ವರವನ್ನು ನೀಡಿ ಪಾತಾಳರಾಜ್ಯದಲ್ಲಿ ಇಂದ್ರಪ್ರಸ್ಥಕ್ಕಿಂತಲೂ ಸಾವಿರ ಪಟ್ಟು ಮಿಗಿಲಾದ ಅರಮನೆಯಲ್ಲಿ ಮಹಾಬಲಿಯನ್ನು ಪಟ್ಟಾಭಿಷೇಕ ಮಾಡುತ್ತಾನೆ. ಮಾತ್ರವಲ್ಲ ದೇವತೆಗಳ ಮಾತು ಕೇಳಿ ಪ್ರಜಾವತ್ಸಲನಾದ ಮಹಾಬಲಿಯನ್ನು ಅವನ ನಾಡಿನಿಂದ ಗಡೀಪಾರು ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಸ್ವತ: ಮಹಾವಿಷ್ಣುವೇ ಮಹಾಬಲಿಯ ಅರಮನೆಯ ದ್ವಾರಪಾಲಕನಾಗಿ ಸೇವೆ ಮಾಡುತ್ತಾನೆ.

health-benefits-of-abhyanga-snana-on-deepavali

ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ, ಇವುಗಳನ್ನು ಮಾಡಲಾಗುವುದು. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಹಬ್ಬದ ಆಚರಣೆಯಲ್ಲಿ ಶುಭ ಸೂಚಕಗಳು

ಹಿಂದೂಗಳ ಹಬ್ಬದಲ್ಲಿ ಯಾವಾಗಲೂ ಶುಭ ಸೂಚಕ ಆಚರಣೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ಹಬ್ಬದಲ್ಲಿ ವಿಶೇಷವಾಗಿ ಲಕ್ಷ್ಮಿ ಮತ್ತು ಗಣೇಶನನ್ನು ಸಹ ಪೂಜಿಸುತ್ತಾರೆ. ಶುಭ ಸೂಚಕವಾಗಿ ಸ್ವಸ್ತಿಕ್ , ಓಂ, ಕಳಶ ಹಾಗೂ ಕಮಲದ ಹೂವಿಗೆ ವಿಶೇಷ ಸ್ಥಾನಮಾನವಿದೆ.

ಓಂ ಉಚ್ಚಾರಣೆ ಮಾಡುತ್ತಾ ದೀಪಗಳನ್ನು ಹಚ್ಚಿ, ಕಳಶವನ್ನು ಸ್ಥಾಪನೆ ಮಾಡಿ ಪೂಜೆಯನ್ನು ಸಲ್ಲಿಸುವುದರಿಂದ ರೋಗ, ರುಜಿನಗಳು ದೂರವಾಗಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಲಭ್ಯವಾಗಿ ಜೀವನ ಆನಂದಮಯವಾಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ : ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

LEAVE A REPLY

Please enter your comment!
Please enter your name here