ಹಾಲು ಚಿಕ್ಕಮಕ್ಕಳಿಗೆ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿರುವ ಅನೇಕ ಪೋಷಕಾಂಶಗಳು ನಮ್ಮ ದೇಹಕ್ಕೆ ಬಹುಮುಖ್ಯವಾಗಿವೆ. ಮುಖ್ಯವಾಗಿ ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್-ಡಿ ಸೇರಿದಂತೆ ಹಲವು ಖನಿಜಗಳು ಮತ್ತು ಲವಣಗಳೂ ತುಂಬಿಕೊಂಡಿವೆ. ಹಾಗಾಗಿ ಇದನ್ನು ಪರಿಪೂರ್ಣ ಆಹಾರವೆಂದು ಕರೆಯಲಾಗುತ್ತದೆ. ಇದು ಚಿಕ್ಕ ಮಕ್ಕಳಿಂದ ಇಳಿವಯಸ್ಸಿನ ಮುದುಕರ ವರೆಗೂ ಉತ್ತಮವಾಗಿದ್ದು, ಪ್ರತಿದಿನವೂ ಕುಡಿಯುವುದರಿಂದ ಆರೋಗ್ಯವು ವೃದ್ಧಿಯಾಗುತ್ತದೆ. ಆದರೆ ಕೆಲವರು ಬಿಸಿಯಾದ ಹಾಲನ್ನು ಮತ್ತು ಕೆಲವರು ತಣ್ಣಗಿನ ಹಾಲನ್ನು ಕುಡಿಯುತ್ತಾರೆ. ಹಾಗಾದರೆ ಹಾಲನ್ನು ಕುಡಿಯುವ ಸರಿಯಾದ ವಿಧಾನ ಮತ್ತು ಸರಿಯಾದ ಸಮಯ ಯಾವುದು, ಅದರಿಂದಾಗುವ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ.
ಹಾಲಿನಲ್ಲಿರುವ ಆರೋಗ್ಯಕಾರಿ ಗುಣಗಳು
ಹಾಲಿನಲ್ಲಿ ಎಲ್ಲರಿಗೂ ತಿಳಿದಿರುವಂತೆ ಕ್ಯಾಲ್ಸಿಯಂ, ವಿಟಮಿನ್-ಡಿ, ಪ್ರೋಟೀನ್, ಪೊಸ್ಪರಸ್, ಒಮೇಗಾ-3 ಸೇರಿದಂತೆ ಇನ್ನೂ ಹಲವಾರು ಪೋಷಕಾಂಶಗಳು ತುಂಬಿಕೊಂಡಿವೆ. ಕ್ಯಾಲ್ಸಿಯಂ ಮತ್ತು ಪೊಸ್ಪರಸ್ ಎಲುಬು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿರುವ ಪ್ರೋಟೀನ್ ಸಹಾಯದಿಂದ ದೇಹದ ಸ್ನಾಯುಗಳು ಬಲಗೊಳ್ಳುತ್ತವೆ. ಅಲ್ಲದೇ ಒಮೇಗಾ-3 ಇರುವುದರಿಂದ ಹೃದಯ ಕಾಯಿಲೆಗಳಿಂದ ಬಳಲುವವರಿಗೆ ವೈದ್ಯರು ಇದನ್ನು ಬಳಸಲು ಸಲಹೆಯನ್ನೂ ನೀಡುತ್ತಾರೆ. ಇವೆಲ್ಲವುಗಳ ಜೊತೆಯಲ್ಲಿ ವಿಟಮಿನ್-ಡಿ ಸಹ ಇರುವುದರಿಂದ ಬೆಳೆಯುವ ಮಕ್ಕಳಿಗಂತೂ ಅಗತ್ಯವಾಗಿ ಹಾಲನ್ನು ನೀಡಲೇಬೇಕು.
ಇದನ್ನೂ ಓದಿರಿ: ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!
ಬೆಚ್ಚಗಿನ ಹಾಲಿನ ಪ್ರಯೋಜನ
ಬೆಚ್ಚಗಿನ ಹಾಲು ನಮ್ಮ ದೇಹದಲ್ಲಿ ಉತ್ತಮವಾಗಿ ಜೀರ್ಣವಾಗುತ್ತದೆ. ಜೀರ್ಣಕ್ರೀಯೆಯಲ್ಲಿನ ಸಮಸ್ಯೆಗಳಿಂದ ಉಂಟಾಗುವ ಅತಿಸಾರ ಮತ್ತು ಉರಿಯೂತದಿಂದ ನಮ್ಮನ್ನು ದೂರವಿರಿಸುತ್ತದೆ. ಇದಲ್ಲದೇ ಉತ್ತಮವಾದ ನಿದ್ರೆಗೆ ಬೆಚ್ಚಗಿನ ಹಾಲನ್ನು ಕುಡಿಯಲು ಆಯುರ್ವೇದವು ಶಿಪಾರಸ್ಸು ಮಾಡಿದೆ. ರಾತ್ರಿಯ ಮಲಗುವ ಸಮಯಕ್ಕೂಮುನ್ನ ಕುಡಿಯುವುದರಿಂದ ನರಮಂಡಲದಲ್ಲಿನ ಬಿಗಿತ ಕಡಿಮೆಯಾಗಿ ಮನಸ್ಸು ಶಾಂತವಾಗಿ ನಿದ್ರೆಯು ಆವರಿಸಿಕೊಳ್ಳುತ್ತದೆ. ಇದು ಟ್ರಿಪ್ಟೊಫೆನ್ (Tryptophan) ಎಂಬ ಅಮೈನೋ ಆಮ್ಲವನ್ನು ಹೊಂದಿದ್ದು, ಇದು ನಿದ್ರೆಯನ್ನು ತರಿಸುವ ಸಿರೊಟೋನಿನ್ ಮತ್ತು ಮೆಲಟೋನಿನ್ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ, ಇದು ನಮಗೆ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿರಿ: ಕರೋನಾ ಬಗ್ಗೆ ಭಯ ಬೇಡ..! ಆದರೆ ಈ ವೈರಸ್ ಬಗ್ಗೆ ಜಾಗ್ರತಿಯಂತೂ ಅವಶ್ಯ..!
ತಣ್ಣಗಿನ ಹಾಲಿನ ಪ್ರಯೋಜನ
ತಣ್ಣನೆಯ ಹಾಲು ಸಹ ನಮ್ಮ ದೇಹಕ್ಕೆ ಉತ್ತಮ ಆರೋಗ್ಯ ಪ್ರಯೋಜನಗಳನ್ನೇ ನೀಡುತ್ತದೆ. ಏಕೆಂದರೆ ಇದು ಒಂದು ಪರಿಪೂರ್ಣ ಆಹಾರವಾಗಿದೆ. ನಮ್ಮ ದೇಹದಲ್ಲಿ ಆಮ್ಲೀಯತೆಯು ಹೆಚ್ಚಿದ ಸಮಯದಲ್ಲಿ ತಣ್ಣನೆಯ ಹಾಲನ್ನು ಸೇವಿಸಿದರೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಲಭ್ಯವಾಗಿ ಆಮ್ಲ ರಚನೆಯನ್ನು ತಡೆದು ಆಮ್ಲೀಯತೆಯನ್ನು ದೂರಮಾಡುತ್ತದೆ. ತಣ್ಣನೆಯ ಹಾಲು ನಿರ್ಜಲೀಕರಣ ಸಮಸ್ಯೆಯಿಂದ ದೂರಮಾಡುತ್ತದೆ. ತಣ್ಣನೆಯ ಹಾಲನ್ನು ರಾತ್ರಿ ಮಲಗುವ ಸಮಯದಲ್ಲಿ ಕುಡಿಯುವುದನ್ನು ತಪ್ಪಿಸಿ, ಏಕೆಂದರೆ ಇದು ಜೀರ್ಣ ಕ್ರೀಯೆಯನ್ನು ನಿಧಾನಗೊಳಿಸುತ್ತದೆ. ಬೆಳಗಿನ ಸಮಯದಲ್ಲಿ ಹಾಲನ್ನು ಕುಡಿಯುವಾಗ ಅಥವಾ ಮಕ್ಕಳಿಗೆ ನೀಡುವಾಗ ತಣ್ಣನೆಯ ಹಾಲನ್ನು ನೀಡಿ.
ಇದನ್ನೂ ಓದಿರಿ: ಒಣಕೆಮ್ಮು ನಿಮ್ಮನ್ನು ಕಾಡುತ್ತಿದೆಯೇ ? ಹಾಗಾದರೆ ಇಲ್ಲಿದೆ ಸರಳ ಮನೆಮದ್ದುಗಳು..!
ಹಾಗಾದರೆ ಯಾವುದು ಉತ್ತಮ ?
ಹಾಲು ನಮ್ಮ ದೇಹಕ್ಕೆ ಅಗತ್ಯವಿರು ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೇ ಹಾಲನ್ನು ಬೇರೆ ಬೇರೆ ವಿಧಾನಗಳಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿ ಸೇವಿಸಬಹುದಾಗಿದ್ದರೂ, ಸಮಯ ಮತ್ತು ನಿಮ್ಮ ಆರೋಗ್ಯ ಸ್ಥಿತಿಯನ್ನು ಅದು ಅವಲಂಬಿಸಿರುತ್ತದೆ. ಉದಾಹರಣೆಗೆ ತಣ್ಣನೆಯ ಹಾಲು ಬೆಳಿಗ್ಗೆ ಉತ್ತಮವಾದದ್ದು, ಆದರೆ ಬಿಸಿ ಹಾಲನ್ನು ರಾತ್ರಿಯಲ್ಲಿ ಸೇವಿಸಬೇಕು. ಅಂತೆಯೇ, ಆಸಿಡ್ ಸಮಸ್ಯೆ ಕಾಡಿದ ಸಂದರ್ಭದಲ್ಲಿ ತಣ್ಣನೆಯ ಹಾಲು ಕುಡಿಯುವುದು ನಿಮಗೆ ಒಳ್ಳೆಯದು. ಅದೇ ರೀತಿಯಲ್ಲಿ ಅತಿಸಾರ ಮತ್ತು ಅಜೀರ್ಣ ಮುಂತಾದ ಪರಿಸ್ಥಿತಿಗಳಲ್ಲಿ ಬಿಸಿ ಹಾಲು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.