ಮಳೆಗಾಲದಲ್ಲಿ ಅನುಸರಿಸಬೇಕಾದ ಆಹಾರ ಕ್ರಮಗಳು ಮತ್ತು ಜೀವನ ಶೈಲಿಯ ಕುರಿತು ಆಯುರ್ವೇದದ ಸಲಹೆಗಳು

ಬದಲಾಗುವ ಋತುಗಳಿಗೆ ಅನುಸಾರವಾಗಿ, ಹೇಗೆ ಹೊಂದಿಕೊಂಡು ನಮ್ಮ ನಿತ್ಯದ ಜೀವನದಲ್ಲಿನ ಆಹಾರ, ವಿಹಾರದಲ್ಲಿ ಪ್ರಕ್ರೃತಿಗೆ ತಕ್ಕಂತೆ ಯಾವೆಲ್ಲ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕೆಂಬುದನ್ನು ತಿಳಿಸುವ ಸಣ್ಣ ಪ್ರಯತ್ನವೇ ಈ ಲೇಖನ.

ayurvedic-diet-and-lifestyle-tips-to-stay-fit-during-monsoon

“ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ, ಆತುರಸ್ಯ ರೋಗನುತ್” ಅಂದರೆ ಆರೋಗ್ಯವಂತ ವ್ಯಕ್ತಿಯ ಆರೋಗ್ಯವನ್ನು ಕಾಪಾಡುವುದು ಮತ್ತು ರೋಗದಿಂದ ಬಳಲುತ್ತಿರುವವರನ್ನು ರೋಗದಿಂದ ಪಾರು ಮಾಡುವುದು ಇದುವೇ ಆಯುರ್ವೇದದ ಮೂಲ ಉದ್ದೇಶವಾಗಿದೆ. ಆದರೆ ಈ ಮೂಲ ಉದ್ದೇಶವು ಈಡೇರಬೇಕಾದರೆ ಅದಕ್ಕೆ ತಕ್ಕಂತೆ ಕೆಲವೊಂದು ಕಟ್ಟುಪಾಡುಗಳನ್ನು ಅವಶ್ಯವಾಗಿ ನಿತ್ಯ ಜೀವನದಲ್ಲಿ ಆಚರಿಸಬೇಕಾಗಿದ್ದು, ಅವುಗಳ ಬಗ್ಗೆ ಆಯುರ್ವೇದ ಗ್ರಂಥಗಳಲ್ಲಿ ಸವಿಸ್ತಾರವಾಗಿ ವಿವರಿಸಲ್ಪಟ್ಟಿದೆ.

ಅದಕ್ಕೆ ದಿನಂಪ್ರತಿ ಬೆಳಗಿನ ಜಾವ ಏಳುವಾಗಿನಿಂದ ರಾತ್ರಿ ಮಲಗುವ ತನಕ ನಮ್ಮ ನಿತ್ಯದ ಬದುಕಿನಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಬೇಕು ಯಾವುದನ್ನು ಮಾಡಬಾರದು ಎನ್ನುವ ಅಂಶಗಳನ್ನು ಸಂಪೂರ್ಣವಾಗಿ ‘ದಿನಚರ್ಯೆ’ ಎನ್ನುವಲ್ಲಿ  ಆಯುರ್ವೇದದಲ್ಲಿ ತಿಳಿಸಿರುತ್ತಾರೆ.

ಇದನ್ನೂ ಓದಿರಿ: ವ್ಯಾಧಿ ಕ್ಷಮತ್ವ ಅಥವಾ ರೋಗ ನಿರೋಧಕ ಶಕ್ತಿ ಅಂದರೆ ಏನು ಮತ್ತು ಅದು ಏಕೆ ಅಗತ್ಯ?

ಅಂತೆಯೇ ಪ್ರತಿ ವರ್ಷವು ಬದಲಾಗುವ ಋತುಗಳಿಗೆ ಅನುಸಾರವಾಗಿ, ಹೇಗೆ ಹೊಂದಿಕೊಂಡು ನಮ್ಮ ನಿತ್ಯದ ಜೀವನದಲ್ಲಿ, ಆಹಾರದಲ್ಲಾಗಲೀ, ವಿಹಾರದಲ್ಲಾಗಲೀ ಪ್ರಕ್ರೃತಿಗೆ ತಕ್ಕಂತೆ ಯಾವೆಲ್ಲ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕೆಂಬುದನ್ನು ವಿಶದವಾಗಿ ಋತುಚರ್ಯೆಯ ವಿಷಯದಲ್ಲಿ ವಿವರಿಸಿರುತ್ತಾರೆ.

Akshara aayurveda

ರೋಗ ಬರೆದಿರುವಂತೆ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿಯೇ ದಿನಚರ್ಯೆ ಮತ್ತು ಋತುಚರ್ಯೆಗಳನ್ನು ಆಯುರ್ವೇದದಲ್ಲಿ ಸವಿವರವಾಗಿ ಹೇಳಿರುವುದನ್ನು ಕಾಣಬಹುದಾಗಿದೆ.

ಹಾಗಾಗಿ ಇದೀಗ, ಉತ್ತರಾಯಣದ ಕಾಲದಲ್ಲಿ ಬರುವ ವರ್ಷ ಋತು, ಅಂತ ಹೇಳಿದರೆ ಮಳೆಗಾಲದಲ್ಲಿ ಆಹಾರದಲ್ಲಾಗಲೀ, ಜೀವನ ಶೈಲಿಯಲ್ಲಾಗಲೀ ಯಾವೆಲ್ಲ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂಬುದನ್ನು ಕೂಲಂಕಷವಾಗಿ ನೋಡೋಣ…..

ಇದನ್ನೂ ಓದಿರಿ: ಅಸಿಡಿಟಿಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಅಗತ್ಯ ಮಾಹಿತಿ

ಮಳೆಗಾಲದ ದಿನಚರ್ಯೆ ಹೀಗಿರಲಿ

  • ಮಳೆಗಾಲದಲ್ಲಿ ಶೀತ ಕೆಮ್ಮು ಮತ್ತು ಜ್ವರದ ಬಾಧೆಗಳು ಬರುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಆದಷ್ಟು ಒಣಗಿದ ಬಟ್ಟೆಗಳನ್ನು ಧರಿಸಬೇಕು.
  • ಹತ್ತಿ ಬಟ್ಟೆಗಿಂತ ನೈಲಾನ್ ಬಟ್ಟೆ ಧರಿಸಿದರೆ ಉತ್ತಮ. ಒದ್ದೆ ಬಟ್ಟೆ ಬೇಗ ಒಣಗುತ್ತದೆ.
  • ಚರ್ಮದ ಖಾಯಿಲೆಗಳಾದ ಕಜ್ಜಿ, ತುರಿಕೆ, ಗಜಕರ್ಣ ಮತ್ತಿತರ ಫಂಗಲ್ ಸೋಂಕು ಮಳೆಗಾಲದ ತೇವಕ್ಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ದೇಹದ ಮೇಲೆ ನೀರು ಇದ್ದರೆ ಕೂಡಲೇ ಒಣಗಿದ ಬಟ್ಟೆಯಿಂದ ಒರೆಸಿ ಕೊಳ್ಳಬೇಕು ಮತ್ತು ಒಳ ಉಡುಪುಗಳನ್ನು ಒದ್ದೆಯಾದ ಕೂಡಲೇ ಬದಲಿಸಬೇಕು.
  • ದೇಹದ ಜೀರ್ಣಕ್ರಿಯೆಯನ್ನು ಸರಿಯಾಗಿಟ್ಟುಕೊಳ್ಳುವುದು ಅತೀ ಅವಶ್ಯಕವಾಗಿದ್ದು, ಅದಕ್ಕಾಗಿ ಮಧ್ಯಾಹ್ನ ಅಥವಾ ದಿನದ ಇತರೆ ಸಮಯದಲ್ಲಾಗಲೀ ಮಲಗದಿರುವುದು ಉತ್ತಮ. ಅದರಿಂದ ಹಸಿವೆ ಕಡಿಮೆಯಾಗಿ, ಅಜೀರ್ಣತೆ ಉಂಟಾಗುತ್ತದೆ.
  • ವ್ಯಾಯಮವನ್ನು ಕೂಡ ಮಳೆಗಾಲದಲ್ಲಿ ಮಿತವಾಗಿ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದು.
  • ಹವಾ ನಿಯಂತ್ರಿತ ಕೊಠಡಿಗಳನ್ನು ಪ್ರವೇಶಿಸುವಾಗ ತಲೆ ಮತ್ತು ಬಟ್ಟೆ ಒದ್ದೆಯಾಗಿರದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಜ್ವರ, ಶೀತ, ಕೆಮ್ಮಿನೊಂದಿಗೆ ಚರ್ಮದ ತೊಂದರೆಗಳೂ ಬರಬಹುದು.
  • ಕಾಲಿನ ಮತ್ತು ಪಾದದ ಆರೋಗ್ಯದ ರಕ್ಷಣೆಯೂ ಮಳೆಗಾಲದಲ್ಲಿ ಅತೀ ಮುಖ್ಯವಾಗಿದ್ದು, ಪದೇ ಪದೇ ನೀರಿನಲ್ಲಿ ಕಾಲುಗಳು ಒದ್ದೆಯಾಗುತ್ತಿದ್ದಲ್ಲಿ ಬೆರಳುಗಳ ಸಂಧಿಗಳಲ್ಲಿ ನಂಜಾಗುವ ಸಾಧ್ಯತೆಯಿರುತ್ತದೆ. ಅದರಲ್ಲೂ ಮಧುಮೇಹಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸುವುದು ಅಗತ್ಯ. ಕೆಸರಿನಲ್ಲಿ ಆಗಾಗ ನಡೆದಾಡುತ್ತಿದ್ದರೆ ಉಗುರುಗಳ ಸಂಧಿಗಳಲ್ಲಿ ಮಣ್ಣಿನ ಅಂಶ ಶೇಖರಣೆಯಾಗಿ ಉಗುರು ಸುತ್ತು ಮುಂತಾದ ತೊಂದರೆಗಳು ಉಂಟಾಗಬಹುದು.
  • ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮಳೆ ಕಡಿಮೆಯಾದ ನಂತರ ಆ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾದಂತ ಖಾಯಿಲೆಗಳಿಗೆ ಕಾರಣವಾಗಬಹುದು.
  • ಆಗಾಗ ಲೋಭಾನ, ಧೂಪಗಳನ್ನು ಹಾಕುತ್ತಿದ್ದರೆ ಮನೆಯೊಳಗಿನ ವಾತಾವರಣದ ತೇವಾಂಶವು ಕಡಿಮೆಯಾಗಿ ಸೂಕ್ಷ್ಮಾಣು ಜೀವಿಗಳು ನಾಶವಾಗುವುದಲ್ಲದೆ ಸುಗಂಧವು ತುಂಬಿರುತ್ತದೆ.

ಇನ್ನು ಮಳೆಗಾಲದ ಆಹಾರ ಕ್ರಮಗಳ ಬಗ್ಗೆ ತಿಳಿಯೋಣ

  • ಈಗಾಗಲೇ ತಿಳಿಸಿರುವಂತೆ ಮಳೆಗಾಲದಲ್ಲಿ ಜೀರ್ಣಕ್ರಿಯೆಯ ಬಗ್ಗೆ ವಿಶೇಷ ಮುತುವರ್ಜಿವಹಿಸಬೇಕು. ಹಾಗಾಗಿ ಜೀರ್ಣಕ್ಕೆ ಸುಲಭವಾಗುವ ಲಘು ಆಹಾರ, ಆಗ ತಾನೇ ಮಾಡಿದ ಬಿಸಿ ಅಡುಗೆಯನ್ನು ಉಣ್ಣುವುದು ಉತ್ತಮ.
  • ಬಾರ್ಲಿ, ಅಕ್ಕಿ, ಗೋಧಿ, ತುಪ್ಪ ಮುಂತಾದವನ್ನು ಉಣ್ಣಬಹುದು.
  • ಊಟದ ಮೊದಲು ಒಂದು ತುಂಡು ಶುಂಠಿ ಮತ್ತು ಒಂದು ಚಿಟಿಕೆ ಉಪ್ಪನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆಯ ಆರೋಗ್ಯ ಸರಿಇರುತ್ತದೆ.
  • ಆದಷ್ಟು ಕಾದಾರಿದ ನೀರನ್ನೇ ಕುಡಿಯುವುದು ಒಳ್ಳೆಯದು.
  • ಮಳೆಗಾಲದಲ್ಲಿ ಬೆವರುವುದು ಕಡಿಮೆಯಾದ ಕಾರಣ ಮೂತ್ರದ ಉತ್ಪತ್ತಿ ಜಾಸ್ತಿಯಾಗುತ್ತದೆ. ಹಾಗಾಗಿ ದ್ರವಾಹಾರ ಬಳಕೆ ಮಿತವಾಗಿರಲಿ.
  • ಕೆಂಪು ಮಾಂಸ, ಮೊಸರು ಮುಂತಾದವು ಜೀರ್ಣಿಸಲು ಸಮಯ ತೆಗೆದುಕೊಳ್ಳುತ್ತದೆ. ಬಳಕೆ ಮಿತವಾಗಿರಲಿ.
  • ಸೊಪ್ಪಿನ ತರಕಾರಿಗಳಲ್ಲಿ ಮಳೆ ಸಮಯದಲ್ಲಿ ಹುಳಗಳಾಗುವ ಸಂಭವವಿರುವ ಕಾರಣ ಚೆನ್ನಾಗಿ ಪರೀಕ್ಷಿಸಿ ಬಳಕೆ ಮಾಡಬೇಕು.
  • ಹೀಗೆ ಈ ಸಮಯದಲ್ಲಿ ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಕೊಂಡಲ್ಲಿ ಮಳೆಗಾಲವನ್ನು ಉತ್ತಮವಾಗಿ ಕಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

(ತಮಗೆ ಈ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಮತ್ತು ಆರೋಗ್ಯ ಸಲಹೆಗಳಿಗಾಗಿ ಆಯುರ್ವೇಧ ವೈದ್ಯರನ್ನು ಸಂಪರ್ಕಿಸಿ)

– ಡಾ. ಬಾಲಸುಬ್ರಹ್ಮಣ್ಯ ಕೆ. ಆಚಾರ್ಯ
ಆಕ್ಯು ಪಂಕ್ಚರ್, ಆಯುರ್ವೇದ ಮತ್ತು ಪಂಚಕರ್ಮ ತಜ್ಞರು
9483819033

LEAVE A REPLY

Please enter your comment!
Please enter your name here