ತುಮಕೂರು: ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಜೆಡಿಎಸ್ ಭರ್ಜರಿ ತಯಾರಿ ನಡೆಸಿದೆ. ಪಂಚರತ್ನ ರಥಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆಗೆ ಪ್ರಚಾರ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, “ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ಯಾವುದೇ ತಕರಾರು ಇಲ್ಲ” ಎಂದು ಹೇಳಿದ್ದಾರೆ.
ಗುರುವಾರ ‘ಪಂಚರತ್ನ ರಥಯಾತ್ರೆ’ ತುಮಕೂರು ನಗರಕ್ಕೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್‌ಡಿಕೆ ಅವರು, ದಲಿತರ ಕುರಿತು ಮಾತನಾಡುವ ಸಿದ್ದರಾಮಯ್ಯ ದಲಿತರಿಗೆ ಏನು ಮಾಡಿದ್ದಾರೆ. ಎಷ್ಟೆಷ್ಟು ಕೀಳಾಗಿ ಮಾತನಾಡಿದ್ದಾರೆ ? ದಾಖಲೆ ಕೊಡ್ಲಾ ಎಂದು ಕೇಳಿದರು. ಮುಖ್ಯಮಂತ್ರಿಯಿದ್ದಾಗ ದಲಿತ ಮಹಿಳೆಗೆ ಚಿಕಿತ್ಸೆ ಕೊಡಿಸಿ, ನಮ್ಮ ಮನೆಯಲ್ಲಿಯೇ ಆರೈಕೆ ಮಾಡಿದ್ದೆವು ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದಲಿತ ಸಿಎಂ ಏಕೆ ಮಾಡಬಾರದು? ದಲಿತ ಮುಖ್ಯಮಂತ್ರಿ ಮಾಡಲು ನಾವು ತಯಾರಿದ್ದೇವೆ. ದೇವೆಗೌಡರು ಮೀಸಲಾತಿ ಇಲ್ಲದ ಸಮಯದಲ್ಲಿ ದಲಿತರನ್ನ ಮುಖಂಡರನ್ನಾಗಿ ಮಾಡಿದ್ದನ್ನ ನಾವು ಮರೆಯಬಾರದು ಎಂದು ಹೇಳಿದರು.
ಇದನ್ನೂ ಓದಿರಿ: JNU Controversy: ಜೆಎನ್‌ಯು ಗೋಡೆಗಳಲ್ಲಿ ಬ್ರಾಹ್ಮಣ, ಬನಿಯಾ ವಿರೋಧಿ ಬರಹಗಳು