ಬೆಂಗಳೂರು: ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇಕಡಾ 5 ಕ್ಕಿಂತಲೂ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮ ಸಡಿಲಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಬರುವ ಸೋಮವಾರದಿಂದ ಎರಡನೆಯ ಹಂತದ ಅನ್ ಲಾಕ್ ಪ್ರಕ್ರೀಯೆ ಆರಂಭವಾಗಲಿದ್ದು, ಪಾಸಿಟಿವಿಟಿ ಪ್ರಮಾಣ ಶೇಕಡಾ 5 ಕ್ಕಿಂತ ಕಡಿಮೆಯಿರುವ ಒಟ್ಟು 16 ಜಿಲ್ಲೆಗಳು ಅಂದರೆ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಗಳಲ್ಲಿ ಸೋಮವಾರದಿಂದ ಲಾಕ್ ಡೌನ್ ಹೆಚ್ಚಿನ ಪ್ರಮಾಣದಲ್ಲಿ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.
ಇನ್ನುಳಿದಂತೆ ಶೇ.5 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜೂನ್ 11 ರಂದು ಹೊರಡಿಸಲಾದ ಆದೇಶದಂತೆ ಸಡಿಲಿಕೆ ಇರಲಿದೆ. ಇದಲ್ಲದೇ ಶೇ 10 ಕ್ಕಿಂತಲೂ ಹೆಚ್ಚಿನ ಪಾಸಿಟಿವಿಟಿ ದರ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಈಗಿರುವ ಲಾಕ್ ಡೌನ್ ಮುಂದುವರೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯಡಿಯೂರಪ್ಪನವರು ತಿಳಿಸಿದ್ದಾರೆ.
16 ಜಿಲ್ಲೆಗಳಲ್ಲಿನ ಮಾರ್ಗಸೂಚಿಗಳು :
ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರಹೊಂದಿರುವ 16 ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಎಸಿ ಚಾಲನೆಗೊಳಿಸದೆ ಹೋಟೆಲ್, ಕ್ಲಬ್, ರೆಸ್ಟೋರೆಂಟ್ ನಲ್ಲಿ ಕುಳಿತು ತಿನ್ನಲು ಸಂಜೆ 6 ರವರೆಗೆ ಶೇ.50 ಸಾಮರ್ಥ್ಯದೊಂದಿಗೆ ಅವಕಾಶ ಕಲಿಪಿಸಲಾಗಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶವಿದೆ. ಬಸ್, ಮೆಟ್ರೋ ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ ಎಂದರು.
ಸರಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50 ಕಾರ್ಯನಿರ್ವಹಣೆ, ಲಾಡ್ಜ್ ಶೇ.50 ಸಾಮರ್ಥ್ಯದೊಂದಿಗೆ, ಜಿಮ್ (ಎಸಿ ಇಲ್ಲದೆ) ಶೇ.50 ಸಾಮರ್ಥ್ಯದೊಂದಿಗೆ ತೆರೆಯಲು ಅವಕಾಶವಿದೆ. ಇದಲ್ಲದೇ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಕುಳಿತು ಆಹಾರ ಸೇವನೆಗೆ ಅವಕಾಶ ನೀಡಲಾಗಿದ್ದು, ಮದ್ಯಪೂರೈಕೆಗೆ ನಿರ್ಬಂಧ ಹೇರಲಾಗಿದೆ. ಇದರೊಂದಿಗೆ ಈ ಜಿಲ್ಲೆಗಳಲ್ಲಿ ಸಿನಿಮಾ ಮಂದಿರ, ದೇಗುಲ, ಮಾಲ್ ಗಳಲ್ಲಿನ ನಿರ್ಬಂಧ ಇದೇ ರೀತಿಯಲ್ಲಿ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರತಿನಿತ್ಯ ನೈಟ್ ಕರ್ಫ್ಯೂ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಮುಂದುವರಿಯಲಿದ್ದು, ವಾರಾಂತ್ಯ ಕರ್ಫ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ.
13 ಜಿಲ್ಲೆಗಳಲ್ಲಿನ ಮಾರ್ಗಸೂಚಿಗಳು:
ಇದಲ್ಲದೇ ಶೇ.5 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿರುವ ರಾಜ್ಯದ 13 ಜಿಲ್ಲೆಗಳಲ್ಲಿ ಜೂನ್ 11 ರಂದು ಹೊರಡಿಸಿದ ಮಾರ್ಗಸೂಚಿಗಳೇ ಮುಂದುವರಿಯಲಿದ್ದು, ಮುಂದಿನ ಪರಿಸ್ಥಿತಿಗಳನ್ನು ನೋಡಿಕೊಂಡು ಸಡಿಲಿಕೆಯನ್ನು ನೀಡಲಾಗುವುದು ಎಂದು ಇದೆ ಸಂದರ್ಭದಲ್ಲಿ ಹೇಳಿದ್ದಾರೆ.