ನವದೆಹಲಿ: ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಬಿಜೆಪಿಯ ಕಿರೋಡಿ ಲಾಲ್ ಮೀನಾ (Kirodi Lal Meena) ಏಕರೂಪ ನಾಗರಿಕ ಸಂಹಿತೆ ಮಸೂದೆ-2020 ಅನ್ನು ಖಾಸಗಿ ಸದಸ್ಯ ವಿಧೇಯಕವಾಗಿ ಮಂಡಿಸಿದ್ದರಿಂದ ಇಂದು ರಾಜ್ಯಸಭೆಯಲ್ಲಿ ಭಾರೀ ಕೋಲಾಹಲ ಉಂಟಾಯಿತು.
ರಾಜ್ಯಸಭೆಯಲ್ಲಿ ಕಿರೋಡಿ ಲಾಲ್ ಮೀನಾ ಏಕರೂಪ ನಾಗರಿಕ ಸಂಹಿತೆ ಮಸೂದೆ-2020 ನ್ನು ಮಂಡಿಸಲು ಸಿದ್ಧರಾಗುತ್ತಿದ್ದಂತೆ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಟಿಎಂಸಿ ಪಕ್ಷಗಳ ಸದಸ್ಯರು ವಿರೋಧಿಸಿ, ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಮಸೂದೆಯನ್ನು ಜಾರಿಗೆ ತರುವುದರಿಂದ ಭಾರತದ ಸಾಮಾಜಿಕ ರಚನೆ ಮತ್ತು ವಿವಿಧತೆಯಲ್ಲಿ ಏಕತೆ ನಾಶವಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳಿದವು. ಆದರೆ ಮಸೂದೆಯ ಪರವಾಗಿ 63 ಮತಗಳು ಹಾಗೂ ಈ ಮಸೂದೆಯ ವಿರುದ್ಧ 23 ಮತಗಳನ್ನು ಚಲಾಯಿಸಲಾಯಿತು.
ಏಕರೂಪ ನಾಗರಿಕ ಸಂಹಿತೆ ಮಸೂದೆ-2020 ರ ವಿರುದ್ಧ ವಿರೋಧವನ್ನು ದಾಖಲಿಸಲು ಮೂರು ನಿರ್ಣಯಗಳನ್ನು ದಾಖಲಿಸಲಾಯಿತು. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಸಂವಿಧಾನದ ನಿರ್ದೇಶನ ತತ್ವಗಳ ಅಡಿಯಲ್ಲಿ ಸಮಸ್ಯೆಯನ್ನು ಎತ್ತುವುದು ಸದಸ್ಯರ ಕಾನೂನುಬದ್ಧ ಹಕ್ಕು ಎಂದು ಹೇಳಿದರು. ಈ ಮಸೂದೆಯ ಕುರಿತು ವಿಸ್ತಾರವಾಗಿ ಸದನದಲ್ಲಿ ಚರ್ಚೆಯಾಗಲಿ. ಈ ಹಂತದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವುದು, ಮಸೂದೆಯನ್ನು ಟೀಕಿಸಲು ಪ್ರಯತ್ನಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಇದನ್ನೂ ಓದಿರಿ: ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಅರವಿಂದ್ ಕೇಜ್ರಿವಾಲ್ ಘೋಷಣೆ