ದಕ್ಷಿಣ ಕನ್ನಡ: ನಿನ್ನೆ ಸುರಿದ ವಿಪರೀತ ಮಳೆಗೆ ಜಿಲ್ಲೆಯ ಗುರುಪುರದ ಬಂಗ್ಲಗುಡ್ಡೆ ಬಳಿಯಲ್ಲಿ ಗುಡ್ಡ ಕುಸಿದು ನಾಲ್ಕು ಮನೆಗಳು ನೆಲಸಮವಾಗಿರುವ ಘಟನೆ ಇಂದು ನಡೆದಿದೆ. ಈ ಮಣ್ಣಿನಡಿಯಲ್ಲಿ ಇಬ್ಬರು ಮಕ್ಕಳು ಸಿಲುಕಿದ್ದು, ರಕ್ಷಣಾ ಕಾರ್ಯ ಭರದಿಂದಸಾಗಿದೆ.
ಜಿಲ್ಲೆಯಲ್ಲಿ ನಿನ್ನೆಯವರೆಗೆ ವಿಪರೀತವಾಗಿ ಮಳೆ ಆಗುತ್ತಿದ್ದು, ಇಂದು ಸ್ವಲ್ಪ ಬಿಡುವು ನೀಡಿದೆ. ಆದರೆ ಮಳೆಗೆ ನೆನೆದಿದ್ದ ಗುಡ್ಡ ಇಂದು ಕುಸಿದಿದೆ. ರಜೆ ಇರುವ ಕಾರಣಗಳಿಂದ ಇಬ್ಬರು ಮಕ್ಕಳು ತಮ್ಮ ದೊಡ್ಡಪ್ಪನ ಮನೆಗೆ ಬಂದಿದ್ದು, ಈ ದುರಂತದಲ್ಲಿ ಸಿಲುಕಿದ್ದಾರೆ. ಸ್ಥಳದಲ್ಲಿ ಪೊಲೀಸರು, ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಗಳು ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಗುಡ್ಡ ಕುಸಿತ ಪ್ರಾರಂಭವಾಗುತ್ತಿದ್ದಂತೆ ಮನೆಯಲ್ಲಿರು ಜನರು ಓಡಿ ಹೊರಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಅಲ್ಲಿಯೇ ಉಳಿದರು ಎಂದು ತಿಳಿದು ಬಂದಿದೆ. ನೀರಿನ ಸೆಲೆ ಹೆಚ್ಚಾಗಿ ಮಣ್ಣು ಸಡಿಲಗೊಂಡಿದೆ, ಇದರಿಂದಾಗಿ ಸುಮಾರು 50 ಅಡಿಗಳಷ್ಟು ಮಣ್ಣು ಕುಸಿದಿದೆ ಎಂದು ಹೇಳಲಾಗುತ್ತಿದೆ. ಜೆಸಿಬಿಗಳ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿವೆ.