ಟೋಕಿಯೋ: ಕೊರೋನಾ ಭಯದ ನಡುವೆ 32 ನೇ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಶುಕ್ರವಾರ ವರ್ಣರಂಜಿತ ಸಮಾರಂಭದೊಂದಿಗೆ ಚಾಲನೆ ದೊರೆಯಿತು. ಉದ್ಘಾಟನಾ ಪರೇಡ್ ನಲ್ಲಿ ಭಾರತೀಯ ದಳವನ್ನು ವಿಶ್ವಚಾಂಪಿಯನ್ ಮೇರಿ ಕೋಮ್ ಹಾಗೂ ಪುರುಷರ ಹಾಕಿ ವಿಭಾಗದ ನಾಯಕ ಮನ್ಪ್ರೀತ್ ಸಿಂಗ್ ದ್ವಜ ಹಿಡಿದು ಮುನ್ನಡೆಸಿದ್ದಾರೆ.
ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಒಂದು ವರ್ಷಗಳ ಕಾಲ ಮುಂದೂಡಲ್ಪಟ್ಟ ಒಲಂಪಿಕ್ಸ್ ಕ್ರೀಡಾಕೂಟ ಶುಕ್ರವಾರ ವಿಜೃಂಭಣೆಯಿಂದ ಆರಂಭಗೊಂಡಿತು. 1000 ಕ್ಕೂ ಅಧಿಕ ಗಣ್ಯರು ಭಾಗಿಯಾಗಿದ್ದ ಈ ಸಮಾರಂಭದಲ್ಲಿ ಕೋವಿಡ್ ಕಾರಣದಿಂದಾಗಿ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ.
ಇನ್ನು ಸಮಾರಂಭದ ಮೆರವಣಿಗೆಯಲ್ಲಿ 25 ಸದಸ್ಯರ ತಂಡ ಭಾಗಿಯಾಗಿತ್ತು. ಪರೇಡ್ ನಲ್ಲಿ ಭಾರತೀಯ ದಳವನ್ನು ವಿಶ್ವಚಾಂಪಿಯನ್ ಮೇರಿ ಕೋಮ್ ಹಾಗೂ ಪುರುಷರ ಹಾಕಿ ವಿಭಾಗದ ನಾಯಕ ಮನ್ಪ್ರೀತ್ ಸಿಂಗ್ ದ್ವಜ ಹಿಡಿದು ಮುನ್ನಡೆಸಿದರು. ಭಾರತೀಯ ಪರೇಡ್ ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾರತದ ಧ್ವಜವನ್ನು ಪ್ರದರ್ಶಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು.