ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನಲ್ಲಿ ಮೀರಾಬಾಯಿ ಚಾನು ಅವರು ಪದಕ ಗೆದ್ದ ಬಳಿಕ ಮತ್ತಾವುದೇ ಪದಕಗಳು ಬಂದಿರಲಿಲ್ಲ, ಆದರೆ ಇದೀಗ ಬಾಕ್ಸರ್ ಲೋವ್ಲಿನಾ ಬೊಗ್ರೋಹೈನ್ ಅವರು ಮಹಿಳೆಯರ 69 ಕೆ ಜಿ ವಿಭಾಗದಲ್ಲಿ ಸೆಮಿಫೈನಲ್ ಗೆ ತಲುಪಿದ್ದಾರೆ.
ಭಾರತದ 23 ವರ್ಷದ ಬಾಕ್ಸರ್ ಲೋವ್ಲಿನಾ ಬೊಗ್ರೋಹೈನ್ ಮಹಿಳೆಯರ 69 ಕೆ ಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿರುವುದರಿಂದ ಒಂದು ಪದಕ ಲಭಿಸುವುದು ಖಚಿತವಾಗಿದೆ. ಇಂದು ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಲೋವ್ಲಿನಾ, ಚೀನಾದ ತೈಪೆಯ 24 ವರ್ಷದ ನಿಯಾನ್ ಚಿನ್ ಚೆನ್ ಅವರನ್ನು ಸೋಲಿಸಿದರು. ಇದರೊಂದಿಗೆ ಭಾರತದ ಎರಡನೆಯ ಪದಕ ಗೆಲ್ಲುವ ಕನಸು ನನಸಾದಂತಾಗಿದೆ.
ಕ್ವಾರ್ಟರ್ ಫೈನಲ್ ಕ್ವ ಗೆ ಲಗ್ಗೆಯಿಟ್ಟ ಬಿಲ್ಗಾರ್ತಿ ದೀಪಿಕಾ ಕುಮಾರಿ
ಇನ್ನು ಭಾರತದ ಖ್ಯಾತ ಬಿಲ್ಗಾರ್ತಿ ದೀಪಿಕಾ ಕುಮಾರಿ ವೈಯಕ್ತಿಕ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ರಷ್ಯಾದ ಕ್ಸೇನಿಯಾ ಪೆರೋವಾ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ರಷ್ಯನ್ ಸ್ಪರ್ಧಿ ವಿರುದ್ಧ 6-5 ಸೆಟ್ಗಳಿಂದ ದೀಪಿಕಾ ಜಯ ಸಾಧಿಸಿದರು. ದೀಪಿಕಾ ಹಾಗೂ ಪೆರೋವಾ ತಲಾ ಐದು ಸೆಟ್ ಗೆದ್ದ ಹಿನ್ನೆಲೆಯಲ್ಲಿ ಶೂಟ್ ಆಫ್ ಮೂಲಕ ವಿಜೇತರನ್ನು ನಿರ್ಣಯಿಸಲಾಯಿತು. ಮುಂದಿನ ಸುತ್ತಿನಲ್ಲಿ ಅವರು ಕೊರಿಯಾದ ಆನ್ ಸಾನ್ ವಿರುದ್ಧ ಸೆಣೆಸಲಿದ್ದಾರೆ.