ಕೊರೋನಾ ಸೋಂಕು ದೇಶವನ್ನು ಬಿಡದೇ ಕಾಡಿದ ದಿನಗಳನ್ನು ಮೆಟ್ಟಿ ನಿಂತು, ಅದರ ವಿರುದ್ಧ ಹೋರಾಡಿ, 100 ಕೋಟಿ ಡೋಸ್ ಕೋವಿಡ್-19 ಲಸಿಕೆ ವಿತರಣೆ ಮಾಡುವ ಮೂಲಕ ಭಾರತ ದೊಡ್ಡ ಸಾಧನೆಯನ್ನು ಮಾಡಿದೆ. ಕಳೆದ ಜನವರಿ 16 ರಂದು ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. 9 ತಿಂಗಳ ಬಳಿಕ ಲಸಿಕೆ ವಿತರಣೆ ಪ್ರಮಾಣ ಇಂದು 100 ಕೋಟಿ ಗಡಿಯನ್ನ ದಾಟಿದೆ.
ಕೋವಿನ್ ಪೋರ್ಟಲ್ನಲ್ಲಿ ಬುಧವಾರ ರಾತ್ರಿಯ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 99.7 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿತ್ತು. ಇಂದು ಬೆಳಗ್ಗೆ 10 ರ ವೇಳೆಗೆ 100 ಕೋಟಿ ಡೋಸ್ ವ್ಯಾಕ್ಸಿನ್ ವಿತರಣೆ ಸಂಪೂರ್ಣವಾಗಿದ್ದು, ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದ ಅರ್ಹ ಫಲಾನುಭವಿಗಳ ಪೈಕಿ ಶೇ. 75ರಷ್ಟು ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಶೇ.31ರಷ್ಟು ಜನರು ಎರಡೂ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಶಾರೂಖ್ ಪುತ್ರನಿಗೆ ಜೈಲೇ ಗತಿ: ಜಾಮೀನು ಅರ್ಜಿ ವಜಾಗೊಳಿಸಿದ ಎನ್ಡಿಪಿಎಸ್ ವಿಶೇಷ ಕೋರ್ಟ್!
ಇಡೀ ವಿಶ್ವಕ್ಕೆ ಕೊರೋನಾ ಹಂಚಿದ್ದ ಚೀನಾದಲ್ಲಿ ಈಗಾಗಲೇ 100 ಕೋಟಿ ಡೋಸ್ ಲಸಿಕೆಯನ್ನ ವಿತರಿಸಲಾಗಿದೆ. 100 ಕೋಟಿ ಡೋಸ್ ಲಸಿಕೆ ವಿತರಿಸಿದ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಗೆ ಭಾರತಕ್ಕೆ ಸೇರಿದೆ. ಕಳೆದ ತಿಂಗಳು ಮೋದಿ ಜನ್ಮದಿನದಂದು ಒಂದೇ ದಿನ 2.5 ಕೋಟಿ ಡೋಸ್ ಲಸಿಕೆಗಳನ್ನ ನೀಡಲಾಗಿತ್ತು. ಕೋವಿಡ್ ವ್ಯಾಕ್ಸಿನ್ ಡ್ರೈವ್ಗೆ ಚಾಲನೆ ನೀಡುವ ಮುನ್ನ ಪ್ರಧಾನಿ ಮೋದಿ ಡಿಸೆಂಬರ್ ವೇಳೆಗೆ 100 ಕೋಟಿ ಡೋಸ್ ವ್ಯಾಕ್ಸಿನ್ ನೀಡುವ ಭರವಸೆಯನ್ನು ನೀಡಿದ್ದರು. ಅದರಂತೆ ಅಕ್ಟೋಬರ್ ವೇಳೆಗೆ 100 ಕೋಟಿ ವ್ಯಾಕ್ಸಿನ್ ವಿತರಣೆಯಾಗಿದೆ. ಆದಷ್ಟು ಬೇಗ ಉಳಿದವರಿಗೂ ವ್ಯಾಕ್ಸಿನ್ ಒದಗಿಸುವ ಕೆಲಸಗಳು ನಡೆಯುತ್ತಿವೆ. ಮಕ್ಕಳಿಗೆ ಹಾಕುವ ವ್ಯಾಕ್ಸಿನ್ ಬಗ್ಗೆ ಅಂತಿಮ ಹಂತದ ಸಂಶೋಧನೆಗಳು ನಡೆಯುತ್ತಿವೆ. ಇದಾದ ಬಳಿಕ ಮಕ್ಕಳಿಗೂ ಆದಷ್ಟು ಬೇಗ ವ್ಯಾಕ್ಸಿನ್ ಸಿಗಲಿದೆ.
Follow us on:![]()