ನವದೆಹಲಿ: ಗೂಗಲ್, ಫೇಸ್ ಬುಕ್ ನಂತಹ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು, ಡಿಜಿಟಲ್ ಮಾಧ್ಯಮದ ಸುದ್ದಿಗಳನ್ನು ಮತ್ತು ಸುದ್ದಿ ಲಿಂಕ್‌ಗಳನ್ನು ವೀಕ್ಷಕರಿಗೆ ಒದಗಿಸುವ ಮೂಲಕ ಪಡೆಯುವ ಲಾಭದಲ್ಲಿ ಇಂತಿಷ್ಟು ಪಾಲನ್ನು ನಿಗದಿತ ಮಾಧ್ಯಮ ಸಂಸ್ಥೆಗೆ ನೀಡಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಒತ್ತಾಯಿಸಿದ್ದಾರೆ.
ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನದಲ್ಲಿ ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್, ‘ಮೂಲ ವಿಷಯ ಮತ್ತು ವಸ್ತು ಸೃಷ್ಟಿಸುವ ಪ್ರಕಾಶಕರಿಗೆ ಆದಾಯದಲ್ಲಿ ನ್ಯಾಯಯೋಚಿತ ಪಾಲು ದೊರೆಯಬೇಕು. ಸುದ್ದಿ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಇದು ತುಂಬಾ ಅವಶ್ಯವಾಗಿದೆ. ಕೊರೋನಾ ಸಂಕಷ್ಟ ನಂತರದ ಕಾಲಘಟ್ಟದಲ್ಲಿ ಡಿಜಿಟಲ್ ಸುದ್ದಿ ಉದ್ಯಮವಷ್ಟೇ ಅಲ್ಲದೆ ಮುದ್ರಣ ಮಾಧ್ಯಮಗಳೂ ಅರ್ಥಿಕ ಸಮಸ್ಯೆಯನ್ನು ಎದುರಿಸಿವೆ. ಮುದ್ರಣ ಮಾಧ್ಯಮಗಳ ಮೇಲೆ ಕೆಟ್ಟ ಪರಿಣಾಮ ಉಂಟಾದರೆ ಪತ್ರಿಕೋದ್ಯಮದ ಭವಿಷ್ಯ ಮಸುಕಾಗುವುದಂತೂ ಸ್ಪಷ್ಟ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿರಿ: 50,000 ಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ನೀಡಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ
ಆಸ್ಪ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ಈ ಕುರಿತಂತೆ ಸ್ಪಷ್ಟ ಕಾನೂನು ಜಾರಿಗೆ ತರಲಾಗಿದೆ. ಸುದ್ದಿಯ ಮಾಹಿತಿ ರಚನೆಕಾರರು ಮತ್ತು ಸಂಗ್ರಹಕಾರರ ನಡುವೆ ಆದಾಯ ಹಂಚಿಕೆಗೆ ಸ್ಪಷ್ಟ ನೀತಿ ವಿದೇಶಗಳಲ್ಲಿದೆ. ಅದು ಭಾರತದಲ್ಲಿ ಶೀಘ್ರವೇ ಜಾರಿಗೆ ಬರಬೇಕು ಎಂದು ಸಚಿವ ರಾಜೀವ್ ಚಂದ್ರಶೇಖ ತಿಳಿಸಿದ್ದಾರೆ.