ಕರೋನಾ ವೈರಸ್ ನಿಂದ ಇಡೀ ದೇಶವೇ ಲಾಕ್ ಡೌನ್ ಆದ ಬಳಿಕ ಇಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದೊಡನೆ ಅವರ ಮಾತನ್ನು ಕೇಳಲು ಜನತೆ ಕಾತುರದಿಂದ ಕಾದಿದ್ದರು. ಹಲವರಲ್ಲಿ ಇನ್ನೆಂತಹ ಆದೇಶ ಹೊರಬೀಳಬಹುದು ಎಂಬ ಸಣ್ಣ ಆತಂಕವಂತು ಇದ್ದದ್ದು ಸುಳ್ಳಲ್ಲ. ಆದರೆ ಇಂದು ಪ್ರಧಾನಿ ದೇಶದ ಜನರಲ್ಲಿ ಒಂದು ಮನವಿಯನ್ನು ಮಾಡುತ್ತಾ, ಮನೋಬಲ ಹೆಚ್ಚಿಸಿ ಧೈರ್ಯದಿಂದ ಕರೋನಾ ವಿರುದ್ಧ ಹೋರಾಡುವ ಒಂದು ಚಿಕ್ಕ ಸಲಹೆಯೊಂದಿಗೆ ಹಾಜರಾಗಿದ್ದರು. ಅಷ್ಟಕ್ಕೂ ನರೇಂದ್ರ ಮೋದಿಯವರು ಈ ವಿಡಿಯೋದಲ್ಲಿ ಏನೆಂದಿದ್ದಾರೆ ತಿಳಿಯೋಣ ಬನ್ನಿ..
ದೇಶವಾಸಿಗಳ ಎದುರಲ್ಲಿ ಒಂದು ಪುಟ್ಟ ವಿಡಿಯೋ ಸಂದೇಶವನ್ನು ಹಂಚಿಕೊಂಡ ಮೋದಿಯವರು, ಕರೊನಾ ತಡೆಗಟ್ಟಲು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲಿಸಬೇಕು. ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ, ಕರೊನಾವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಪ್ರಪಂಚಕ್ಕೆ ನಾವೇನು ಎನ್ನುವುದನ್ನು ಮತ್ತೊಮ್ಮೆ ತಿಳಿಸಬೇಕಾಗಿದೆ ಎಂದರು. ಅಲ್ಲದೆ ಎಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ನಿಮ್ಮ ಮನೆಯ ಎಲ್ಲ ಲೈಟ್ಗಳನ್ನೂ ಆಫ್ ಮಾಡಿ ನಿಮ್ಮ ಮನೆಯ ಬಾಲ್ಕನಿ ಅಥವಾ ಬಾಗಿಲ ಬಳಿಯಲ್ಲಿ ನಿಂತು ದೀಪ, ಮೇಣದಬತ್ತಿ, ಟಾರ್ಚ್ ಅಥವಾ ಮೊಬೈಲ್ ಪ್ಲಾಶ್ ಲೈಟ್ ಬೆಳಗಿಸುವಂತೆ ಕರೆ ನೀಡಿದರು.
ಸಧ್ಯ ಲಾಕ್ ಡೌನ್ ಇರೋದ್ರಿಂದ ನಿಮಗೆ ಇನ್ನೆಷ್ಟುದಿನ ಈ ರೀತಿ ಇರುವುದು ಎಂದು ಅನ್ನಿಸುತ್ತಿರಬಹುದು, ಈ ಸಮಯದಲ್ಲಿ ನಾವೆಲ್ಲರೂ ಮನೆಯಲ್ಲಿಯೇ ಇರುವುದು ನೀಜ ಆದರೆ ನಾವ್ಯಾರು ಒಂಟಿಯಲ್ಲ ಎಂದು ಹೇಳಿದರು. ಇಡಿ ದೇಶದ 130 ಕೋಟಿ ಭಾರತೀಯರ ಬೆಂಬಲ, ಸಾಮೂಹಿಕ ಶಕ್ತಿ ಪ್ರತಿಯೊಬ್ಬರ ಜೊತೆಯೂ ಇದೆ. ನಾವೆಲ್ಲಾ ಈ ದೇಶದ ಶಕ್ತಿ, ಭವ್ಯತೆ ಮತ್ತು ಒಗ್ಗಟ್ಟಿನ ಅನುಭವವನ್ನು ಪಡೆದುಕೊಳ್ಳುವುದು ಅವಶ್ಯವಾಗಿದೆ. ಈ ಮೂಲಕ ನಾವು ಮನೋಬಲ, ಲಕ್ಷ್ಯ ಮತ್ತು ಧ್ಯರ್ಯದಿಂದ ಮುನ್ನುಗ್ಗುವ ಶಕ್ತಿಯನ್ನು ಪಡೆಯುತ್ತೇವೆ. ಆ ಮೂಲಕ ನಾವು ಸಾಗುವ ದಾರಿ ಇನ್ನಷ್ಟು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಕೊರೊನಾ ಪೀಡಿತ ವ್ಯಕ್ತಿಗಳು ಹತ್ತಿರದಲ್ಲಿದ್ದರೆ ಕೂಡಲೆ ನಿಮಗೆ ಎಚ್ಚರಿಕೆ ನೀಡುವ ಆಪ್ ಬಿಡುಗಡೆ..!
ಈ ಕರೋನಾ ಸಂಕಷ್ಟದ ಸಮಯದಲ್ಲಿ ಇದರಿಂದ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದವರನ್ನು, ಬಡವರನ್ನು ಮತ್ತು ದೀನ ದಲಿತರನ್ನು ಆಶಾಭಾವನೆಯಿಂದ ಬೆಳಕಿನಡೆಗೆ ಕರೆದೊಯ್ಯಾಬೇಕು. ಅಂತೆಯೇ ಈ ಬೆಳಕಿನಲ್ಲಿ ಕರೋನಾ ಸೋಲಿಸಲು ಇನ್ನೂ ಹೆಚ್ಚಿನ ತೀಕ್ಷ್ಣವಾಗಿ ನಾಲ್ಕೂ ದಿಕ್ಕಿನಲ್ಲಿ ನಮ್ಮ ಹೋರಾಟ ಸಾಗಬೇಕು ಎಂದು ಈ ಸಮಯದಲ್ಲಿ ಉಲ್ಲೇಖಿಸಿದರು.
ಕರೊನಾ ವಿರುದ್ಧ ಹೋರಾಡುವ ಭರದಲ್ಲಿ ಸಾಮಾಜಿಕ ಅಂತರ ಎಂಬ ಲಕ್ಷ್ಮಣ ರೇಖೆಯನ್ನು ದಾಟಬಾರದು ಎನ್ನುವ ಲಕ್ಷ್ಯ ಇರಲಿ ಎಂದು ಎಚ್ಚರಿಸಿದ್ದಾರೆ. ಕಳೆದ ಮಾರ್ಚ್ 22 ರಂದು ಜನತಾ ಕರ್ಪ್ಯೂಗೆ ಕರೆ ನೀಡಲಾಗಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿ ವಿಶ್ವಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. ಅಲ್ಲದೇ ಹಲವು ದೇಶಗಳು ಈ ರೀತಿಯ ಬಂದ್ ಗೆ ಘೋಷಣೆಯನ್ನು ಮಾಡಿರುವುದನ್ನು ಗಮನಿಸಿದ್ದೇವೆ.
ಮಾರ್ಚ್ 22 ರಂದು ಜನತಾ ಕರ್ಪ್ಯೂ ಕೈಗೊಂಡ ಬಳಿಕ ಸಂಜೆ 5 ಗಂಟೆಗೆ ಚಪ್ಪಾಳೆಗಳ ಮೂಲಕ ಧನ್ಯವಾದ ಸೂಚಿಸಲು ಕೇಳಿಕೊಂಡಿದ್ದರು. ಈ ಕರೊನಾ ಪೀಡಿಸುತ್ತಿರುವ ಸಮಯದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಅದರ ವಿರುದ್ಧ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮತ್ತು ಮಾಧ್ಯಮದವರಿಗೆ ಪ್ರಶಂಸಿಸೋಣ ಎಂದು ಹೇಳಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರವನ್ನು ಮರೆತ ಜನತೆ ಶಂಕ, ಜಾಗಟೆಗಳನ್ನು ಬಾರಿಸುತ್ತ ಬೀದಿ ಬೀದಿಗಳಲ್ಲಿ ಹಬ್ಬದ ರೀತಿಯಲ್ಲಿ ವರ್ತಿಸಿದ್ದರು. ಇದು ಹಲವು ಟೀಕೆಗಳು ಮತ್ತು ಅಸಮದಾನ ವ್ಯಕ್ತವಾಗಿತ್ತು.
ಈ ಕುರಿತಾಗಿ ಪ್ರಧಾನಿ ಮೋದಿಯವರೇ ಅಸಮದಾನ ಹೊರಹಾಕಿದ್ದನ್ನು ನಾವಿಲ್ಲಿ ನೆನೆಯಬಹುದು. ಹಾಗಾಗಿ ಸಾಮಾಜಿಕ ಅಂತರದೊಂದಿಗೆ ತಮ್ಮ ತಮ್ಮ ಮನೆಯಲ್ಲಿ ದೀಪಗಳನ್ನು ಆರಿಸಿ, ಬಾಲ್ಕನಿ ಮತ್ತು ಬಾಗಿಲ ಬಳಿಯಲ್ಲಿ ನಿಂತು ದೀಪ, ಮೇಣದಬತ್ತಿ, ಟಾರ್ಚ್ ಅಥವಾ ಮೊಬೈಲ್ ಪ್ಲಾಶ್ ಲೈಟ್ ಬೆಳಗಿಸುವಂತೆ ಕೇಳಿಕೊಂಡಿದ್ದಾರೆ. ಈ ಮೂಲಕ ಮನೆಯಲ್ಲಿ ಬಂದಿಯಾಗಿರುವ ನಾವೆಲ್ಲರೂ ಬೀದಿಗೆ ಇಳಿಯದೇ ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ಸರಪಳಿಯನ್ನು ಮುರಿಯಲು ಸಂನದ್ದರಾಗೋಣ ಎಂದು ಹೇಳಿದ್ದಾರೆ.