ನವದೆಹಲಿ: ಮೇಲ್ವರ್ಗದ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರೀಯ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 103 ನೇ ತಿದ್ದುಪಡಿಯನ್ನು (Economically Weaker Sections – EWS) ಸುಪ್ರೀಂಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.
2019 ರಲ್ಲಿ ಕೇಂದ್ರ ಸರಕಾರ 103 ನೇ ಸಂವಿಧಾನಿಕ ತಿದ್ದುಪಡಿಯ ಮೂಲಕ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರೀಯ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸಿ ಕೊಡಲಾಗಿತ್ತು. ಈ ತೀರ್ಮಾನ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ 40 ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿತ್ತು.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿಗಳಾದ ಬೇಲಾ ಎಮ್ ತ್ರಿವೇದಿ, ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಇದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ತಿದ್ದುಪಡಿಯ ಪರವಾಗಿ ತೀರ್ಪು ನೀಡಿದ್ದಾರೆ. ಅಲ್ಪ ಸಂಖ್ಯಾತರ ದೃಷ್ಟಿಯಿಂದ EWS ಮೀಸಲಾತಿಯಿಂದ ತೊಂದರೆಯಾಗಲಿದೆ ಎಂದು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ತೀರ್ಪು ನೀಡಿದರು. ಈ ಮೂಲಕ ಕೇಂದ್ರ ಸರಕಾರದ ನಿರ್ಧಾರವನ್ನು ಸಾಂವಿಧಾನಿಕ ಪೀಠ ಮೂರನೇ ಎರಡರಷ್ಟು ಬಹುಮತದೊಂದಿಗೆ ಎತ್ತಿ ಹಿಡಿದಿದೆ.
ಇದನ್ನೂ ಓದಿರಿ: ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಆಲಿಯಾ ಭಟ್ !
ಸಂವಿಧಾನದ 15 (6) ಮತ್ತು 16 (6) 103 ನೇ ತಿದ್ದುಪಡಿಯ ಅನ್ವಯ ಉದ್ಯೋಗ ಮತ್ತು ಶಿಕ್ಷಣದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರ ಮೀಸಲಾತಿ ನೀಡಲು ಅವಕಾಶ ಮಾಡಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಕ್ಕೆ ಸೇರದ ವ್ಯಕ್ತಿಗಳ ಕುಟುಂಬದ ವಾರ್ಷಿಕ ಆದಾಯವು ₹ 8 ಲಕ್ಷಕ್ಕೂ ಕಡಿಮೆಯಿದ್ದರೆ ಈ ಕಾನೂನಿನ ಅನ್ವಯ ಮೀಸಲಾತಿ ನೀಡಲು ಅವಕಾಶ ಸಿಗುತ್ತದೆ.