ಮಂಗಳೂರು (ನ.30): ಖ್ಯಾತ ಯಕ್ಷಗಾನ ಹಾಗೂ ತಾಳಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುದರ್ ರಾವ್ (Kumble Sundar Rao) ಅವರು ಇಂದು ವಿಧಿವಶರಾಗಿದ್ದಾರೆ.
ತಾಳಮದ್ದಳೆ ಮತ್ತು ಬಯಲಾಟ ಎಂಬ ಯಕ್ಷಗಾನದ ಎರಡೂ ವಿಭಾಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಅವರು 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಒಂದು ಅವಧಿಗೆ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934 ನೇ ಮಾರ್ಚ್ 20 ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಸುದರ್ ರಾವ್ ಜನಿಸಿದರು. ಇವರ ಕುಟುಂಬದ ವೃತ್ತಿ ಬಟ್ಟೆ ನೇಯುವುದು ಮತ್ತು ಬಟ್ಟೆ ವ್ಯಾಪಾರ ಮಾಡುವುದಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹಾಡಿದರು. ಕೆಲಸಕ್ಕೆ ಬಾರದ ಮಗ ಎಂಬ ಬಾವ ತಂದೆಯದಾದರೂ ತಾಯಿಯ ಪ್ರೀತಿ ಸದಾ ದೊರೆತಿತ್ತು.
ತಂದೆಯ ಬಟ್ಟೆ ಮಿಲ್ಲಿನ ಸಮೀಪದ ನಾಯ್ಕಾಪು ಎಂಬಲ್ಲಿ ನಡೆಯುತ್ತಿದ್ದ ತಾಳಮದ್ದಲೆಯನ್ನು ನೋಡಿ ಅರ್ಥ ಕೇಳುತ್ತಾ ಆಸಕ್ತಿ ಬೆಳೆಸಿಕೊಂಡ ಕುಂಬಳೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದ ಆಸಕ್ತಿ ಅತೀವವಾಗಿತ್ತು. ಶಂಭಟ್ಟರ ಒತ್ತಾಯದಿಂದ ಯಕ್ಷಗಾನದ ಅರ್ಥ ಹೇಳುವ ಅವಕಾಶವನ್ನು ಪಡೆದು ಈ ಕ್ಷೇತ್ರದಲ್ಲಿ ಪ್ರಸಿದ್ಧರಾದರು.
ನಂತರದಲ್ಲಿ ಯಕ್ಷಗಾನ ಕ್ಷೆತ್ರಕ್ಕೆ ಕಾಲಿಟ್ಟು, ವಿಶೇಷ ಪ್ರಾಸಬದ್ಧ ಮಾತುಗಳ ಮೂಲಕವೇ ಜನರ ಮೆಚ್ಚಿನ ಕಲಾವಿದರಾದರು. ಇವರ ಪ್ರಾಸಬದ್ಧ ಮಾತುಗಳು ಇವರೊಬ್ಬರ ಶೈಲಿಯಾಗಿರದೇ ಅದು ಮುಂದಿನ ಪರಂಪರೆಯಾಗಿ ಬೆಳೆದು ಬಂದಿರುವುದು ವಿಶೇಷ. ಇವರ ಭರತಾಗಮನದ ಭರತ, ವಿರಾಟ ಪರ್ವದ ಉತ್ತರ ಕುಮಾರ, ಕೃಷ್ಣ ಸಂಧಾನದ ಕರ್ಣ, ಸಮುದ್ರಮಥನದ ವಿಷ್ಣು ಹೀಗೆ ಹಲವಾರು ಪಾತ್ರಗಳಲ್ಲಿ ಮಿಂಚಿದ ಇವರು ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ.
ಇನ್ನು ಕುಂಬ್ಳೆಯವರಿಗೆ 1994 ರಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶವೂ ಒದಗಿ ಬಂದಿತು. ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ದಿಸಿ, ಸುರತ್ಕಲ್ ಕ್ಷೇತ್ರದಿಂದ ಆಯ್ಕೆಯಾದರು. ಅಲ್ಲದೇ ಒಂದು ಅವಧಿಗೆ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇಂತಹ ಮಹಾನ್ ಯಕ್ಷಗಾನ ಕಲಾವಿದರೊಬ್ಬರು ನಮ್ಮನ್ನಗಲಿರುವುದು ದುಃಖಕರ ಸಂಗತಿಯೇ ಸರಿ. ಆದರೆ ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಸದಾ ಚಿರಸ್ಥಾಯಿಯಾಗಿರಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೆ ಮತ್ತೆ ಇಂತಹ ಕಲಾವಿದರು ನಮ್ಮ ನೆಲದಲ್ಲಿ ಉದಯಿಸುವಂತಾಗಲಿ.
ಇದನ್ನೂ ಓದಿರಿ: ಅದಿತಿ ಪ್ರಭುದೇವ-ಯಶಸ್ವಿ ಅದ್ದೂರಿ ಮದುವೆ ಫೋಟೋ ಗ್ಯಾಲರಿ