ಬೆಂಗಳೂರು: ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ರಾಗಿಣಿ ಸೇರಿದಂತೆ ಐವರಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ.
ಆರೋಪಿಗಳ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ ಮುಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದನೆಯ ಎಸಿಎಂಎಂ ನ್ಯಾಯಾಧೀಶರ ಎದುರಿಗೆ ಹಾಜರುಪಡಿಸಲಾಯಿತು. ಸಿಸಿಬಿ ಮತ್ತು ಆರೋಪಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸೆಪ್ಟೆಂಬರ್ 27 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಇದೆ ವೇಳೆ ರಾಗಿಣಿ ಬೆನ್ನುನೋವು ಮತ್ತು ಅಸ್ತಮಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಜೈಲಿನಲ್ಲಿರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲು ಸಲಹೆಯನ್ನು ನೀಡಿದರು ಎನ್ನಲಾಗಿದೆ.
ಈ ಮಧ್ಯೆ, ಜಾಮೀನು ಕೋರಿ ರಾಗಿಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಸೆಪ್ಟೆಂಬರ್ 16 ಕ್ಕೆ ಮುದೂಡಲಾಗಿದೆ. ಇಂದು ನಡೆದ ವಿಚಾರಣೆಯ ಬಳಿಕ ನಟಿ ರಾಗಿಣಿ ದ್ವಿವೇದಿ, ಪ್ರಶಾಂತ್ ರಂಕಾ, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ, ನಿಯಾಜ್ ಸೇರಿ ಐವರಿಗೆ 14 ದಿನಗಳ ನ್ಯಾಯಾಂಗ ಬಂಧನದ ಅವಧಿಯು ವಿಸ್ತರಣೆಯಾಗಿದ್ದು, ಇವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸಾಗಿಸಲಾಗಿದೆ.