ಕುಂದಾಪುರ: ಇಲ್ಲಿನ ಬಹದ್ದೂರ್ ಷಾ ರಸ್ತೆಯಿಂದ ಚಿಕನ್ ಸಾಲ್ (ಜೈ ಹಿಂದ್ ಹೋಟೆಲ್) ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಪುರಸಭೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಜನರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.
ಪುರಸಭೆ ವ್ಯಾಪ್ತಿಯ ಈ ರಸ್ತೆಯು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ರಸ್ತೆಯ ಕೊನೆಯಲ್ಲಿ ದಟ್ಟವಾದ ಪೊದೆ ಮತ್ತು ಗುಂಡಿಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿಯು ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಕಾಡುತ್ತಿದೆ. ಸಂಪರ್ಕ ರಸ್ತೆಯಾಗಿರುವುದರಿಂದ ಸಾರ್ವಜನಿಕರಿಗೆ ಅತ್ಯವಶ್ಯವಾಗಿದ್ದು, ವಾಹನ ಸಂಚಾರ ತುಂಬಾ ಕಷ್ಟಕರವಾಗಿದೆ.
ಈ ರಸ್ತೆಯು ಖಾರ್ವಿಕೇರಿ, ಚಿಕನ್ ಸಾಲ್ ಮತ್ತು ಕುಂದಾಪುರ ಸಂತೆ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಜೊತೆಗೆ, ರಾಷ್ಟ್ರೀಯ ಹೆದ್ದಾರಿಗೂ ಅತೀ ಹತ್ತಿರದ ಮಾರ್ಗವಾಗಿದೆ. ರಸ್ತೆಯು ದುರಸ್ತಿಗೊಂಡಲ್ಲಿ ಸ್ಥಳೀಯರು ಸೇರಿದಂತೆ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದೆ. ಇಲ್ಲಿನ ಸಾರ್ವಜನಿಕರ ಸಮಸ್ಯೆಗೆ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.