ಲಡಾಖ್: ಭಾರತ ಮತ್ತು ಚೀನಾ ಗಡಿಯಲ್ಲಿ ಉಭಯ ದೇಶಗಳ ಸೇನಾಪಡೆಯ ಸಂಘರ್ಷದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಲಡಾಖ್ ಪ್ರದೇಶಕ್ಕೆ ದಿಡೀರ್ ಬೇಟಿ ನೀಡಿದ್ದಾರೆ.
ಕಳೆದ ತಿಂಗಳು ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು, ಈ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಚೀನಾದ 43 ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇಂತಹ ಉದ್ವಿಗ್ನ ಪರಿಸ್ಥಿತಿಯಿರುವ ಸ್ಥಳಕ್ಕೆ ದಿಡೀರ್ ಪ್ರಧಾನಿ ಮೋದಿ ಬೇಟಿ ನೀಡಿದ್ದು, ಚೀನಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆ ಬೆಳಿಗ್ಗೆ 7 ಗಂಟೆಗೆ ಲೇಹ್ ತಲುಪಿದರು. ನಂತರ ಹೆಲಿಕಾಪ್ಟರ್ ಮೂಲಕ ನಿಗದಿಯಾಗಿದ್ದ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಇಂದು ದೇಶದ ಗಡಿ ಪ್ರದೇಶದಲ್ಲಿನ ಭದ್ರತೆ ಅವಶ್ಯ ಸಮಯದಲ್ಲಿ ಬೇಕಾಗುವ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸೇನಾ ಮುಖ್ಯಸ್ಥರ ಜೊತೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಈ ಸಮಯದಲ್ಲಿ ಸೇನೆ, ಐಟಿಬಿಪಿ ಮತ್ತು ವಾಯುಪಡೆಯ ಯೋಧರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇತ್ತೀಚಿನ ಪರಿಸ್ಥಿತಿ ಮತ್ತು ಸಿದ್ಧತೆಗಳ ಕುರಿತು ಚರ್ಚೆಯಾಗಲಿದೆ. ಇದೆ ಸಮಯದಲ್ಲಿ ಘರ್ಷಣೆಯಲ್ಲಿ ಗಾಯಗೊಂಡ ಸೈನಿಕರನ್ನು ಪ್ರಧಾನಿಗಳು ಬೇಟಿಯಾಗಲಿದ್ದಾರೆ.
ಈ ಹಿಂದೆ ರಕ್ಷಣಾ ಸಚಿವರು ಸೇನಾ ಮುಖ್ಯಸ್ಥರೊಂದಿಗೆ ಲೇಹ್ ಗೆ ತೆರಳಿ 14 ಕಾರ್ಫ್ಸ್ ಅಧಿಕಾರಿಗಳನ್ನು ಬೇಟಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಗುರುವಾರ ರಾಜನಾಥ್ ಸಿಂಗ್ ಬೇಟಿಯನ್ನು ಮುಂದೂಡಲಾಗಿತ್ತು. ಆದರೆ ಇಂದು ನರೇಂದ್ರ ಮೋದಿಯವರು ದಿಡೀರ್ ಬೇಟಿ ನೀಡಿದ್ದಾರೆ.