ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮುಖ್ಯವಾಗಿ ಕರೋನಾ ಲಸಿಕೆ ನೀಡುವ ಕುರಿತಾದ ಮಾರ್ಗಸೂಚಿ, ಉಚಿತ ಲಸಿಕೆ, ನವೆಂಬರ್ ವರೆಗೆ ಉಚಿತ ಆಹಾರಧಾನ್ಯ ಸೇರಿದಂತೆ ಕೆಲವು ಪ್ರಮುಖ ವಿಚಾರಗಳ ಕುರಿತಾಗಿ ಇಂದು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರವನ್ನು ಇಲ್ಲಿ ನೋಡಿ….

ಮೆಡಿಕಲ್ ಆಮ್ಲಜನಕ ಇಷ್ಟೊಂದು ಪ್ರಮಾಣದಲ್ಲಿ ಬೇಕಾಗಬಹುದೆಂಬ ಊಹೆ ನಮಗಿರಲಿಲ್ಲ

ಕೊರೋನಾ ಸಂಕಷ್ಟದಿಂದಾಗಿ ವಿಶ್ವದ ವಿವಿಧ ದೇಶಗಳು ಸಂಕಷ್ಟಕ್ಕೆ ಸಿಲುಕಿದಂತೆ ಭಾರತವೂ ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದೆ. ಇಂತಹ ಮಹಾ ಮಾರಿಯನ್ನು ಈ ಜಗತ್ತು ಕಂಡು ಕೇಳರಿತಿರಲಿಲ್ಲ. ಕೋವಿಡ್ ಹೋರಾಟಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ತುರ್ತಾಗಿ ಹೊಂದಿಸಿಕೊಳ್ಳಬೇಕಾದ ಸಮಯದಲ್ಲಿ ಅವೆಲ್ಲವನ್ನು ಮಾಡಿಕೊಂಡೆವು ಆದರೆ ಮೆಡಿಕಲ್ ಆಮ್ಲಜನಕ ಇಷ್ಟೊಂದು ಪ್ರಮಾಣದಲ್ಲಿ ಬೇಕಾಗಬಹುದೆಂಬ ಊಹೆ ನಮಗಿರಲಿಲ್ಲ. ಆಕ್ಸಿಜನ್ ಪೂರೈಕೆಗಾಗಿ, ರೈಲು, ವಿಮಾನ, ಸೇನೆಯನ್ನು ಬಳಸಿಕೊಂಡು ಎಲ್ಲಿ ಸಿಕ್ಕರೂ ಅವುಗಳನ್ನು ತರಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆವು ಎಂದು ಭಾರತ ಕೊರೋನಾ ವಿರುದ್ಧ ಹೋರಾಡಿದ ಪರಿಯನ್ನು ನರೇಂದ್ರ ಮೋದಿಯವರು ನೆನೆದಿದ್ದಾರೆ.

ಲಸಿಕೆಯ ವಿಚಾರದಲ್ಲಿ ಭಾರತ ವಿಜ್ಞಾನಿಗಳ ಸಾಧನೆ 

ಆತ್ಮ ನಿರ್ಭರ ಯೋಜನೆಯ ಅಡಿಯಲ್ಲಿ ಕೋವಿಡ್ ಪ್ಯಾಕೇಜ್ ಮೂಲಕ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಯಿತು. ನಮ್ಮ ವಿಜ್ಞಾನಿಗಳು ವಿಶ್ವವೇ ನಿಬ್ಬೆರಗಾಗುವಂತೆ ಎರಡೆರಡು ಲಸಿಕೆಗಳನ್ನು ತಯಾರಿಸಿದರು. ಕೋವಿಡ್ ಲಸಿಕೆಯನ್ನು ತಯಾರಿಸುವ ಕಂಪನಿಗಳಿಗೆ ಅನುದಾನ, ಸಹಕಾರ ಮತ್ತು ಟ್ರಯಲ್ ಮುಗಿಸಲು ಸಹಾಯವನ್ನು ಸರಕಾರ ಮಾಡಿತು ಎಂದು ಲಸಿಕಾ ಉತ್ಪಾದನೆಯ ಕುರಿತು ಮಾತನಾಡಿದರು.

ಇದನ್ನೂ  ಓದಿರಿ: ಹೈಕಮಾಂಡ್ ಬಯಸಿದರೆ ತಕ್ಷಣ ರಾಜೀನಾಮೆ ನೀಡಲು ನಾನು ಸಿದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಲಿದೆ 

ದೇಶದಲ್ಲಿ ಇನ್ನು ಮುಂದೆ ಲಸಿಕೆಯ ಲಭ್ಯತೆಯನ್ನು ಹೆಚ್ಚಿಸಲಾಗುವುದು, ದೇಶದಲ್ಲಿ 7 ಕಂಪನಿಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಇನ್ನೂ 3 ಲಸಿಕೆಗಳ ಟ್ರಯಲ್ ನಡೆಯುತ್ತಿದೆ. ಅಲ್ಲದೇ ಮೂಗಿನ ಮೂಲಕ ನೀಡುವ ಲಸಿಕೆಯ ಟ್ರಯಲ್ ಸಹ ನಡೆಯುತ್ತಿದೆ. ಮಕ್ಕಳ ಸುರಕ್ಷತೆಗಾಗಿ ಚಿಂತನೆ ನಡೆಸಿ, ಲಸಿಕೆಗಳನ್ನು ಟ್ರಯಲ್ ಮಾಡಲಾಗುತ್ತಿದೆ. ಈ ಮೂಲಕ ದೇಶದಲ್ಲಿ ಲಸಿಕಾ ಹಂಚಿಕೆಯನ್ನು ಸರಕಾರ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ 

ದೇಶದಲ್ಲಿ ಮೊದಲಿದ್ದ ಲಸಿಕಾ ಹಂಚಿಕೆಯ ವ್ಯವಸ್ಥೆಗಳೇ ಉತ್ತಮ ಎನ್ನುವ ಅಭಿಪ್ರಾಯವನ್ನು ರಾಜ್ಯಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಜನೇವರಿಯಲ್ಲಿ ಇದ್ದ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಅಲ್ಲದೇ ಜೂನ್ 21 ರಂದು ಯೋಗದಿನಾಚರಣೆ ಇದ್ದು, ಅಂದಿನಿಂದ ದೇಶದ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಿದರು.

ನವೆಂಬರ್​ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ

ಕೊರೋನಾ ಸಂಕಷ್ಟದಿಂದಾಗಿ ಬಡವರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಈ ಕಾರಣದಿಂದಾಗಿ ನವೆಂಬರ್ ವರೆಗೂ ಉಚಿತ ಆಹಾರಧಾನ್ಯ ನೀಡಲು ಸರಕಾರ ನಿರ್ಧರಿಸಿದೆ. ಈ ಯೋಜನೆಯಿಂದಾಗಿ ದೇಶದ 80 ಕೋಟಿ ಜನರಿಗೆ ಆಹಾರ ಧಾನ್ಯ ದೊರೆಯಲಿದೆ. ಭಾರತದಲ್ಲಿ ಲಸಿಕಾ ಅಭಿಯಾನ ಆರಂಭಕ್ಕೂ ಮುನ್ನ ಬಡವರಿಗೆ ಲಭ್ಯವಾಗುವುದೋ ಇಲ್ಲವೋ ಎನ್ನುವ ಆತಂಕಗಳು ಇದ್ದವು. ಸದ್ಯ ಈ ಅನುಮಾನಗಳೆಲ್ಲವೂ ದೂರವಾಗಿವೆ. ಲಸಿಕೆಯ ಕುರಿತಾದ ಊಹಾಪೋಹ ಹಬ್ಬಿಸುವವರನ್ನು ದೇಶದ ಜನ ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ  ಓದಿರಿ: ಭಾರತದಿಂದ ಕೋವ್ಯಾಕ್ಸಿನ್ ಆಮದುಮಾಡಿಕೊಳ್ಳಲು ಬ್ರೆಜಿಲ್ ಗ್ರೀನ್ ಸಿಗ್ನಲ್

ಲಸಿಕೆಯ ವಿಚಾರದಲ್ಲಿ ಭಾರತವು ಹಲವಾರು ದೇಶಗಳಿಗಿಂತ ಮುಂದಿದೆ

ಲಸಿಕೆಯ ವಿಚಾರದಲ್ಲಿ ಭಾರತವು ಹಲವಾರು ದೇಶಗಳಿಗಿಂತ ಮುಂದಿದೆ. ಲಸಿಕೆಯು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲಿದೆ. ಅದನ್ನು ತಲುಪಿಸುವುದು ಜನನಾಯಕರ ಕರ್ತವ್ಯವಾಗಿದೆ. ಈ ಪಿಡುಗಿನ ಸಮಯದಲ್ಲಿ ನಾವೆಲ್ಲರೂ ಜೊತೆಯಾಗಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸೋಣ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here