ನವದೆಹಲಿ: ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಬಾರಿ ದೀಪಾವಳಿಯ ಖರೀದಿಗೆ ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಎಂದು ಕರೆ ನೀಡಿದ್ದಾರೆ. ಇದರಿಂದಾಗಿ ಆರ್ಥಿಕತೆಗೆ ಉತ್ತೇಜನ ದೊರೆತಂತಾಗುತ್ತದೆ, ಅಲ್ಲದೇ ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹವೂ ದೊರೆಯುತ್ತದೆ ಎಂದು ಹೇಳಿದರು.
ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿನ ವಿವಿಧ 614 ಕೋಟಿ ರೂಪಾಯಿಯ ಯೋಜನೆಗಳ ಉದ್ಘಾಟನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಿ ಮಾತನಾಡುತ್ತ, ಪ್ರತಿಯೊಬ್ಬ ವ್ಯಕ್ತಿ ಸ್ಥಳೀಯ ಉತ್ಪನ್ನಗಳನ್ನು ಹೆಮ್ಮೆಯಿಂದ ಖರೀದಿಸಿದಾಗ ಮತ್ತು ಅದರ ಕುರಿತು ಉತ್ತಮ ಮಾತುಗಳನ್ನು ಆಡಿದಾಗ ಮಾತ್ರ ಸ್ಥಳೀಯ ಉತ್ಪಾದನೆ ಅಭಿವೃದ್ಧಿಯಾಗುತ್ತದೆ. ಈ ರೀತಿಯ ಉತ್ತೇಜನ ದೊರೆತರೆ ಮಾತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದರು.
ಸ್ಥಳೀಯ ವಸ್ತುಗಳು ಎಂದರೆ ದೀಪಾವಳಿಯ ದೀಪಗಳು ಮಾತ್ರವಲ್ಲ, ದೀಪಾವಳಿಗೆ ಅಗತ್ಯವಿರುವ ಪ್ರತಿಯೊಂದು ವಸ್ತುವನ್ನೂ ಖರೀದಿಸಬೇಕು. ಹೀಗಾದಾಗ ಮಾತ್ರ ಸ್ಥಳೀಯ ಉತ್ಪಾದಕರು ಬೆಳೆಯಲು ಸಾಧ್ಯ ಎಂದು ಹೇಳಿದರು.
ಇದಕ್ಕೂ ಮೊದಲು 614 ಕೋಟಿ ರೂ.ಗಳ ಮೌಲ್ಯದ ಕೃಷಿ, ಪ್ರವಾಸೋದ್ಯಮ ಮತ್ತು ಮೂಲ ಸೌಕರ್ಯಗಳಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿಗಳು ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ಪ್ರಧಾನಿ ಸ್ಥಳೀಯರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.