ಅರುಣಾಚಲ ಪ್ರದೇಶದ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ. ಈ ವಿಮಾನ ನಿಲ್ದಾಣವು ಅರುಣಾಚಲ ಪ್ರದೇಶದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ವಿಮಾನ ನಿಲ್ದಾಣವು 640 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 690 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ವಿಮಾನ ನಿಲ್ದಾಣಕ್ಕೆ ದೋನಿ ಪೋಲೋ ಎಂದು ಹೆಸರಿಡಲಾಗಿದ್ದು, ಇದು ಅರುಣಾಚಲ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸಲಿದೆ. 2300 ಮೀಟರ್ ಉದ್ದದ ರನ್ವೇ ಹೊಂದಿದ್ದು, ಎಲ್ಲ ಹವಾಮಾನಗಳಲ್ಲಿಯೂ ಕಾರ್ಯಾಚರಣೆಗೆ ಸೂಕ್ತವಾಗಿದೆ. ಈ ವಿಮಾನ ನಿಲ್ದಾಣದಿಂದ ಇಲ್ಲಿನ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಇದನ್ನೂ ನೋಡಿ: ಷೇರು ಮಾರುಕಟ್ಟೆಯಲ್ಲಿ ಉಪಯೋಗಕ್ಕೆ ಬರುವ ಸಪ್ತ ಸೂತ್ರಗಳು!
ಉದ್ಘಾಟನಾ ಸಮಾರಂಭದಲ್ಲಿ ನರೇಂದ್ರ ಮೋದಿಯವರು ಮಾತನಾಡುತ್ತ, ನಾನು 2019 ರಲ್ಲಿ ಈ ವಿಮಾನ ನಿಲ್ದಾಣದ ಅಡಿಗಲ್ಲು ಹಾಕಿದಾಗ ರಾಜಕೀಯ ಟೀಕಾಕಾರರು ಚುನಾವಣೆಗಳು ನಡೆಯುತ್ತಿರುವುದರಿಂದಲೇ ಪ್ರಧಾನಿ ಮೋದಿ ಅರುಣಾಚಲ ಪ್ರದೇಶಕ್ಕೆ ಹೋಗುತ್ತಿದ್ದಾರೆ. ಅವರು ವಿಮಾನ ನಿಲ್ದಾಣವನ್ನು ನಿರ್ಮಿಸಲು ಹೋಗುತ್ತಿಲ್ಲ, ಕೇವಲ ಅಡಿಗಲ್ಲು ಹಾಕಲು ಹೋಗುತ್ತಿದ್ದಾರೆ ಎಂದು ಗಲಾಟೆ ಮಾಡಿದ್ದರು. ಇದೀಗ ಈ ವಿಮಾನ ನಿಲ್ದಾಣದ ಉದ್ಘಾಟನೆಯಿಂದ ಅವರಿಗೆ ಕಪಾಳಮೋಕ್ಷವಾಗಿದೆ ಎಂದು ಹೇಳಿದ್ದಾರೆ.