ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ “ಗಂಗಾ ವಿಲಾಸ್”ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಗಂಗಾ ವಿಲಾಸ್ ಹಡಗು ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದ್ದು, ಇದು 51 ದಿನಗಳಲ್ಲಿ 3,200 ಕಿ.ಮೀ ಸಂಚಾರವನ್ನು ಮಾಡಲಿದೆ. ಈ ಪಂಚತಾರಾ ಗಂಗಾ ವಿಲಾಸ್ ಹಡಗು 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನು ಮತ್ತು 40 ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನು ಹೊಂದಿದೆ.
ಇಂದು ಆರಂಭವಾದ ಈ ಪ್ರವಾಸಿ ಹಡಗಿನಲ್ಲಿ 32 ಸ್ವಿಸ್ ಪ್ರವಾಸಿಗರು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪಲು ಮೊದಲ ಪ್ರಯಾಣವನ್ನು ಇದರ ಮೂಲಕ ಕೈಗೊಂಡಿದ್ದಾರೆ. ಮೊದಲಬಾರಿಗೆ ಪ್ರಯಾಣಿಸುತ್ತಿರುವ ಪ್ರವಾಸಿಗರನ್ನು ವಾರಣಾಸಿ ಬಂದರಿನಲ್ಲಿ ಹೂಮಾಲೆ ಮತ್ತು ಶೆಹನಾಯಿ ನಾದದೊಂದಿಗೆ ಸ್ವಾಗತಿಸಲಾಯಿತು.
ಈ ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಇದು 27 ನದಿಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರಕಾರ ಈ ಒಳನಾಡು ಹಡಗಿನ ಯೋಜನೆಯನ್ನು ಆರಂಭಿಸಿದೆ. ಅಲ್ಲದೇ ಒಳನಾಡು ಜಲಮಾರ್ಗ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 1000 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ.
ಇದನ್ನೂ ಓದಿರಿ: ಕುಖ್ಯಾತ ವಂಚಕ, ಹೈಟೆಕ್ ವೇಶ್ಯಾವಾಟಿಕೆ ಆರೋಪಿ ಸ್ಯಾಂಟ್ರೋ ರವಿ ಅರೆಸ್ಟ್ !