ಬೆಂಗಳೂರು: ರಾಜ್ಯ ಸರ್ಕಾರದ ಭರವಸೆಯನ್ನು ನಂಬಿ ಪಂಚಮಸಾಲಿ ಮೀಸಲಾತಿ ಹೋರಾಟವನ್ನು 6 ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರ ಆರು ತಿಂಗಳ ಕಾಲಾವಕಾಶ ಕೇಳಿದೆ ಅದರಂತೆ ಮಾರ್ಚ್ 15 ರಂದು ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೆಪ್ಟೆಂಬರ್ 15 ರವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗುವುದು ಆ ಬಳಿಕವೂ ನಮ್ಮ ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ ಆರಂಭವಾಗಲಿದೆ” ಎಂದು ಹೇಳಿದರು.
ಸಂವಿಧಾನದ ಚೌಕಟ್ಟಿನಲ್ಲಿ ಕಾನೂನುಬದ್ಧವಾಗಿ ಮೀಸಲಾತಿ ಕಲ್ಪಿಸಬೇಕಾದರೆ ಆರು ತಿಂಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ಭರವಸೆ ನೀಡಿದ್ದರಿಂದ ಅದನ್ನು ನಂಬಿ ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿರಿ: ಮೂರೂ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ: ಹೆಚ್ಚಿನ ಮಾಹಿತಿಗಾಗಿ ಓದಿ
ಮಾರ್ಚ್ 23 ರಂದು ಮೀಸಲಾತಿ ಹೋರಾಟದ ಪಾದಯಾತ್ರೆ ಸಾಗಿಬಂದ ಮಾರ್ಗವಾಗಿಯೇ ಶರಣು ಶರಣಾರ್ಥಿ ಯಾತ್ರೆ ಮೂಲಕ ಬೆಂಗಳೂರಿನಿಂದ ವಾಪಸ್ ತೆರಳಲಾಗುವುದು. ಏಪ್ರಿಲ್ 11 ರಂದು ಕೂಡಲ ಸಂಗಮ ಪಂಚಮಸಾಲಿ ಪೀಠಕ್ಕೆ ತಲುಪಲಾಗುವುದು ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.