ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಪೊಲೀಸರು ತೆಗೆದುಕೊಂಡ ಕ್ರಮಗಳಿಂದಾಗಿ ರೈತರು ಸಾವನ್ನಪ್ಪಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅಧಿವೇಶನದಲ್ಲಿ ಹೇಳಿದ್ದಾರೆ.
ಶುಕ್ರವಾರ ರಾಜ್ಯಸಭೆಗೆ ಉತ್ತರ ನೀಡಿದ ನರೇಂದ್ರ ಸಿಂಗ್ ತೋಮರ್ ಅವರು “ರೈತ ಚಳವಳಿಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ವಿಷಯವು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದೆ. ರೈತರ ಧರಣಿ ವೇಳೆ ಪೊಲೀಸರ ಕ್ರಮದಿಂದ ಯಾವುದೇ ರೈತ ಸಾವನ್ನಪ್ಪಿಲ್ಲ” ಎಂದು ಹೇಳಿದರು.
ಸುದೀರ್ಘ ರೈತರ ಪ್ರತಿಭಟನೆ ವೇಳೆಯಲ್ಲಿ ಸಾವನ್ನಪ್ಪಿದ ರೈತರ ಜೀವನೋಪಾಯಕ್ಕೆ ಸರಕಾರ ಪರಿಹಾರ ನೀಡುವ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬ ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರ ಪ್ರಶ್ನೆಗೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಉತ್ತರ ನೀಡಿದ್ದಾರೆ.
ರೈತರ ಸುದೀರ್ಘ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಕಳೆದ ನವೆಂಬರ್ 29 ರಂದು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ. ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಅವರ ಪ್ರಮುಖ ಬಾಕಿ ಇರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ ನಂತರ ದೆಹಲಿ ಗಡಿಯಲ್ಲಿ ವರ್ಷವಿಡೀ ನಡೆದ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಸ್ಥಗಿತಗೊಳಿಸಿದೆ.