ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಸಿತಕ್ಕೊಳಗಾದ ಆರ್ಥಿಕ ವ್ಯವಸ್ಥೆಗೆ ಜೀವತುಂಬಲು ನರೇಂದ್ರ ಮೋದಿಯವರು ಪ್ರಕಟಿಸಿದ ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾದ 20 ಲಕ್ಷ ಕೋಟಿ ಪ್ಯಾಕೇಜ್ ನ 5ನೇಯ ಕಂತನ್ನು ಇಂದು (ರವಿವಾರ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಈ ಕುರಿತಂತೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉಧ್ಯಮ ಕ್ಷೇತ್ರ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯ ಆರ್ಥಿಕ ನೆರವನ್ನು ಪ್ರಕಟಿಸಿದರು. ಅವರು ಪ್ರಕಟಿಸಿದ ಘೋಷಣೆಗಳು ಯಾವವು ಎನ್ನುವುದನ್ನು ನೋಡೋಣ ಬನ್ನಿ.
ಶಿಕ್ಷಣ ಕ್ಷೇತ್ರ:
ಆನ್ಲೈನ್ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಅಲ್ಲದೇ ಶಿಕ್ಷಣ ನೀಡುವ ಸಲುವಾಗಿ 12 ಹೊಸ ಚಾನಲ್ ಗಳ ಘೋಷಣೆಯನ್ನು ಮಾಡಲಾಗಿದೆ. ಆನ್ಲೈನ್ ಶಿಕ್ಷಣಕ್ಕಾಗಿ 200 ಹೊಸ ಪಠ್ಯಪುಸ್ತಕ ಪರಿಚಯಿಸಲು ಸರಕಾರ ಮುಂದಾಗಲಿದೆ.
ಆರೋಗ್ಯ ಕ್ಷೇತ್ರ:
ಕೊರೊನಾ ಟೆಸ್ಟಿಂಗ್ ಕಿಟ್ ಗಳಿಗಾಗಿ 550 ಕೋಟಿ ರೂಪಾಯಿಗಳನ್ನು ವೆಚ್ಚಮಾಡಲಾಗುವುದು. ಅಲ್ಲದೇ ಕೊರೊನಾ ವಿರುದ್ಧ ಹೋರಾಡಲು ರಾಜ್ಯಗಳಿಗೆ 4113 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಹೋರಾಡಲು 330 ಕ್ಕೂ ಅಧಿಕ ಕಂಪನಿಗಳಿಂದ 51 ಲಕ್ಷ ಪಿಪಿಇ ಕಿಟ್ ಗಳ ಸರಬರಾಜು ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ:
ಮನ್ರೆಗಾ ಯೋಜನೆಗಾಗಿ 40 ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚುವರಿ ಅನುಧಾನವಾಗಿ ನೀಡಲಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಅಲ್ಲದೇ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಾಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನರೇಗಾ ಯೋಜನೆಯ ಅನುಷ್ಠಾನಕ್ಕೆ 61 ಸಾವಿರ ಕೋಟಿ ರೂಪಾಯಿಗಳನ್ನು ಎತ್ತಿಡಲಾಗಿದೆ.
ಉದ್ಧಿಮೆ ಕ್ಷೇತ್ರ:
ಕಾರ್ಪೋರೇಟ್ ಕಂಪನಿಗಳ ಉಧ್ಯಮಕ್ಕೆ ಸಂಭಂಧಿಸಿದಂತೆ ಇರುವ ಕಾನೂನುಗಳನ್ನು ಸರಳೀಕರಣಗೊಳಿಸಲಾಗಿದೆ. ಇದರೊಂದಿಗೆ ಎಲ್ಲ ವಲಯಗಳಲ್ಲಿ ಖಾಸಗಿ ಕಂಪನಿಗಳು ಹೂಡಿಕೆಯನ್ನು ಮಾಡುವಂತೆ ಅವಕಾಶವನ್ನು ಮಾಡಿಕೊಟ್ಟಿದೆ. ಲಾಕ್ ಡೌನ್ ಸಮಯದಲ್ಲಿ ಸಾಲಮರುಪಾವತಿ ಸಾಧ್ಯವಾಗದಿರುವ ಕಂಪನಿಗಳಿಗೆ ಯಾವುದೇ ರೀತಿಯಿಂದ ಸಾಲಬಾಕಿ ಎಂದು ಪರಿಗಣನೆಗೆ ತೆಗೆದುಕೊಳ್ಳದಿರಲು ನಿರ್ಧರಿಸಲಾಗಿದೆ. ಎಂ.ಎಸ್.ಎಂ.ಇ. ಕಂಪನಿಗಳು ದಿವಾಳಿಯಾಗಿವೆ ಎಂದು ಘೋಷಿಸಲು ಇದ್ದ ಮಿತಿಯನ್ನು ಹೆಚ್ಚಿಸಲಾಗಿದೆ.
ಪಿ.ಎಂ. ಇ-ವಿಧ್ಯಾ ಯೋಜನೆ:
ಪಿ.ಎಂ. ಇ-ವಿಧ್ಯಾ ಯೋಜನೆ ತಕ್ಷಣದಿಂದಲೇ ಜಾರಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಆನ್ಲೈನ್ ತರಗತಿಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ 100 ವಿಶ್ವವಿಧ್ಯಾನಿಲಯಗಳಿಗೆ ಆನ್ಲೈನ್ ಕೋರ್ಸ್ ಆರಂಭಿಸಲು ಅನುಮತಿಯನ್ನು ನೀಡಲಾಗಿದೆ.