Home Blog

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಶೇ 85.63 ಫಲಿತಾಂಶ, ವಿದ್ಯಾರ್ಥಿನಿಯರೇ ಮೇಲುಗೈ

sslc-results-announced-in-karnataka

ಬೆಂಗಳೂರು(ಮೇ.19): 2021-22ನೇ ಸಾಲಿನ ಎಸ್ ಎಸ್ ಎಲ್ ಸಿ(SSLC results) ಪರೀಕ್ಷೆ ಇಂದು ಪ್ರಕಟಗೊಂಡಿದ್ದು, ಈ ಕುರಿತಂತೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.85.63 ರಷ್ಟು ಫಲಿತಾಂಶ ಬಂದಿದೆ. ವಾಡಿಕೆಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 90.29 ರಷ್ಟು ಹೆಣ್ಣುಮಕ್ಕಳು ಉತ್ತೀರ್ಣರಾಗಿದ್ದಾರೆ. 8,20,900 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ನಗರಕ್ಕಿಂತ ಗ್ರಾಮೀಣ ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಎಂದಿನಂತೆ ಗ್ರಾಮೀಣ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದಾರೆ. ನಗರ ಭಾಗದಲ್ಲಿ ಶೇ.86.64 ಫಲಿತಾಂಶ ದಾಖಲಾದರೆ ಗ್ರಾಮೀಣ ಭಾಗದಲ್ಲಿ ಶೇ.91.32 ರಷ್ಟು ಫಲಿತಾಂಶ ಪ್ರಕಟವಾಗಿದೆ.

ಫಲಿತಾಂಶ ವೀಕ್ಷಣೆ:

ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್ https://karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

ಪೂರಕ ಪರೀಕ್ಷೆ:

ಜೂನ್ 27 ರಿಂದ ಜುಲೈ 4 ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಪಡೆಯಲು ಮೇ 30ರವರೆಗೆ ಅವಕಾಶವಿದೆ. ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನಾಂಕವಾಗಿದೆ.

South Eastern Railway Recruitment 2022: ಸ್ಪೋರ್ಟ್ಸ್​ ಕೋಟಾದಡಿ ಖಾಲಿ ಹುದ್ದೆಗಳ ಭರ್ತಿಗೆ ಮುಂದಾದ ಆಗ್ನೇಯ ರೈಲ್ವೆ

south-eastern-railway-recruitment-2022-apply-online-for-sports-quota

ಆಗ್ನೇಯ ರೈಲ್ವೆಯಲ್ಲಿ (South Eastern Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಪೋರ್ಟ್ಸ್​ ಕೋಟಾ ಆಧಾರದಲ್ಲಿ ಒಟ್ಟು 21 ಸ್ಪೋರ್ಟ್ಸ್​ ಪರ್ಸನ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿದ್ಯಾರ್ಹತೆ:

ಆಗ್ನೇಯ ರೈಲ್ವೆ ನೇಮಕಾತಿಯ ಸ್ಪೋರ್ಟ್ಸ್​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ, 12 ನೇ ತರಗತಿ, ಐಟಿಐ ಪೂರ್ಣಗೊಳಿಸಿರಬೇಕು. ಮತ್ತು ರಾಜ್ಯ ರಾಷ್ಟ್ರ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಪ್ರಮಾಣ ಪತ್ರ ಹೊಂದಿರಬೇಕು.

ವಯೋಮಿತಿ:

ಆಗ್ನೇಯ ರೈಲ್ವೆ ನೇಮಕಾತಿಯ ಸ್ಪೋರ್ಟ್ಸ್​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 1, 2022 ಕ್ಕೆ 18-25 ವರ್ಷದೊಳಗಿರಬೇಕು. ವರ್ಗಗಳ ಆಧಾರದಲ್ಲಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಅರ್ಜಿ ಶುಲ್ಕ:

ಆಗ್ನೇಯ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಎಸ್ ಸಿ /ಎಸ್ ಟಿ /ಮಹಿಳೆ/ಅಲ್ಪಸಂಖ್ಯಾತ ಅಭ್ಯರ್ಥಿಗಳ ಕುಟುಂಬದ ಆದಾಯವು ವಾರ್ಷಿಕ 50,000/- ಕ್ಕಿಂತ ಕಡಿಮೆ ಇದ್ದರೆ 250 ರೂ. ಹಾಗೂ ಇತರ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

ಆಗ್ನೇಯ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ವೀಕೃತ ಅರ್ಜಿಯ ಆಧಾರದಲ್ಲಿ ಶಾರ್ಟ್​​ಲಿಸ್ಟಿಂಗ್ ಮಾಡಿ, ಕ್ರೀಡಾ ಪ್ರಯೋಗಗಳು, ಕ್ರೀಡಾ ಸಾಧನೆ ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ:

ಆಗ್ನೇಯ ರೈಲ್ವೆ ನೇಮಕಾತಿಯ ಸ್ಪೋರ್ಟ್ಸ್​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://www.rrcser.co.in ಗೆ ಭೇಟಿ ನೀಡಬಹುದು. ಅರ್ಹ ಅಭ್ಯರ್ಥಿಗಳು ಫೆಬ್ರವರಿ 2, 2022 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ಆಗ್ನೇಯ ರೈಲ್ವೆ ಇಲಾಖೆಯ ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊರೊನಾ ಭೀತಿ: ನಾಳೆಯಿಂದ ಪಶ್ಚಿಮ ಬಂಗಾಳದಲ್ಲಿ ಶಾಲೆಗಳು ಬಂದ್ !

west-bengal-to-close-schools-from-tomorrow-on-wards

ಪಶ್ಚಿಮ ಬಂಗಾಳ: ಓಮೈಕ್ರಾನ್ ಸೇರಿದಂತೆ ಪ್ರತಿದಿನದ ಕೋವಿಡ್ ಸೋಂಕಿನ ಪ್ರಮಾಣದಲ್ಲಿನ ತೀವ್ರ ಹೆಚ್ಚಳದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರಕಾರವು ಮತ್ತೆ ಕೆಲವು ಕೋವಿಡ್ ನಿರ್ಬಂಧಗಳನ್ನು ಹೆಚ್ಚಿಸಿದೆ. ಹೊಸ ನಿಯಮಗಳ ಪ್ರಕಾರ ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ತಿಳಿಸಿದ್ದು, ಖಾಸಗಿ ಮತ್ತು ಸರಕಾರಿ ಕಚೇರಿಗಳಲ್ಲಿ ಶೇ 50 ರಷ್ಟು ಹಾಜರಾತಿಗೆ ಮಿತಿಗೊಳಿಸಿ ಆದೇಶ ಹೋಡಿಸಿದೆ.

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಜಾರಿಗೆ ತರಲಾಗುವುದು ಎಂದು ತಿಳಿಸಿದೆ. ಈ ಸಮಯದಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳು ಮಾತ್ರ ಲಭ್ಯವಿರಲಿದೆ.

ನಾಳೆಯಿಂದ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲಾಗುವುದು, ಹಾಗೆಯೇ ಈಜುಕೊಳಗಳು, ಜಿಮ್‌ಗಳು, ಸ್ಪಾಗಳು ಮತ್ತು ಬ್ಯೂಟಿ ಸಲೂನ್‌ಗಳನ್ನು ಮುಚ್ಚಲಾಗುವುದು ಎಂದು ಪಶ್ಚಿಮ ಬಂಗಾಳ ಸರಕಾರ ತಿಳಿಸಿದೆ. ಇದಲ್ಲದೇ ಖಾಸಗಿ ಮತ್ತು ಸರಕಾರಿ ಕಚೇರಿಗಳಲ್ಲಿ ಶೇ 50 ರಷ್ಟು ಹಾಜರಾತಿಗೆ ಅವಕಾಶ ನೀಡಿದ್ದು, ಸಾಧ್ಯವಾದಷ್ಟು ಮನೆಯಿಂದ ಕೆಲಸ ಮಾಡುವಂತೆ ತಿಳಿಸಲಾಗಿದೆ.

ಇದನ್ನೂ ಓದಿರಿ: 15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ; ವ್ಯಾಕ್ಸಿನ್ ಪಡೆದ ಮಕ್ಕಳಿಗೆ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನ

ಮೆಟ್ರೋ ಸೇವೆಯಲ್ಲಿ ಶೇ 50 ರಷ್ಟು ಸಾಮರ್ಥ್ಯಕ್ಕೆ ಮಿತಿಗೊಳಿಸಲಾಗಿದೆ. ಇದಲ್ಲದೇ ಸಿನಿಮಾ ಹಾಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಶಾಪಿಂಗ್ ಮಾಲ್‌ಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆಯಲು ಅವಕಾಶ ನೀಡಲಾಗಿದ್ದು, ಜನಸಂದಣಿಯು ಶೇಕಡಾ 50 ರಾಷ್ಟಕ್ಕೆ ಮಾತ್ರ ಅವಕಾಶವಿದೆ. ಇನ್ನು ಮದುವೆಗಳು ಮತ್ತು ಇತರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 50 ಜನರಿಗೆ ಭಾಗವಹಿಸಲು ಅನುಮತಿ ನೀಡಲಾಗಿದೆ. ಇದರಂತೆ ಅಂತ್ಯಕ್ರಿಯೆ ಅಥವಾ ಸಮಾಧಿಗಳಿಗೆ 20 ಜನರಿಗೆ ತೆರಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿರಿ: ಕೋವಿಡ್-19: ದೇಶಾದ್ಯಂತ ಕೊರೊನಾ ಆತಂಕ; ಕಳೆದ 24 ಗಂಟೆಗಳಲ್ಲಿ 27 ಸಾವಿರ ಹೊಸ ಸೋಂಕಿತರು ಪತ್ತೆ

15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ; ವ್ಯಾಕ್ಸಿನ್ ಪಡೆದ ಮಕ್ಕಳಿಗೆ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನ

corona-vaccine-for-children-state-government-grant-leave-to-the-children-who-received-the-vaccine

ಬೆಂಗಳೂರು: 15 ರಿಂದ 18 ವರ್ಷದ ಮಕ್ಕಳಿಗೆ ನಾಳೆಯಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆದ ಮಕ್ಕಳಿಗೆ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆಯನ್ನು ಜನವರಿ 3 ರಿಂದ ನೀಡಲು ತೀರ್ಮಾನಿಸಲಾಗಿದೆ. ಲಸಿಕೆ ಪಡೆದ ಮರುದಿನ ಸುಸ್ತು, ಮೈಕೈ ನೋವು ಕಾಣಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಮಕ್ಕಳಿಗೆ ರಜೆಯನ್ನೂ ನೀಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿರಿ: ಕೊರೊನಾ ಭೀತಿ: ನಾಳೆಯಿಂದ ಪಶ್ಚಿಮ ಬಂಗಾಳದಲ್ಲಿ ಶಾಲೆಗಳು ಬಂದ್ !

ಮೊದಲ ದಿನ 50 ವಿದ್ಯಾರ್ಥಿಗಳಿಗೆ ಮಾತ್ರ ಕೊವಿಡ್ ಲಸಿಕೆ ನೀಡಲಾಗುತ್ತಿದೆ. ಅಂದರೆ ಒಂದು ಶಾಲೆಯಲ್ಲಿ 50 ವಿದ್ಯಾರ್ಥಿಗಳಿಗೆ ಮಾತ್ರ ಕೊವಿಡ್ ಲಸಿಕೆ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ ನೀಡಲಾಗುತ್ತದೆ. ಕೊವಿಡ್ ಲಸಿಕೆ ನೀಡುವ ವೇಳೆ ಶಾಲೆ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಏನೇ ಆರೋಗ್ಯ ಸಮಸ್ಯೆ ಎದುರಾದರೂ ಆಸ್ಪತ್ರೆಗೆ ದಾಖಲಿಸಿ ಮಕ್ಕಳಿಗೆ ಚಿಕಿತ್ಸೆ ನೀಡಲು ಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆ. ಮೊದಲ ಬಾರಿ ಮಕ್ಕಳಿಗೆ ವ್ಯಾಕ್ಸಿನ್ ಹಾಕುವ ಹಿನ್ನೆಲೆ, 30 ನಿಮಿಷ ಕಾಯುವ ಕೋಣೆಗೆ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿರಿ: ಕೋವಿಡ್-19: ದೇಶಾದ್ಯಂತ ಕೊರೊನಾ ಆತಂಕ; ಕಳೆದ 24 ಗಂಟೆಗಳಲ್ಲಿ 27 ಸಾವಿರ ಹೊಸ ಸೋಂಕಿತರು ಪತ್ತೆ

ಕೋವಿಡ್-19: ದೇಶಾದ್ಯಂತ ಕೊರೊನಾ ಆತಂಕ; ಕಳೆದ 24 ಗಂಟೆಗಳಲ್ಲಿ 27 ಸಾವಿರ ಹೊಸ ಸೋಂಕಿತರು ಪತ್ತೆ

india-registered-27553-new-covid-19-cases-in-24-hours-on-sunday

ನವದೆಹಲಿ: ದೇಶಾದ್ಯಂತ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಶನಿವಾರ 27,553 ಮಂದಿ ಹೊಸ ಕೋವಿಡ್​​ ಸೋಂಕಿತರು ಪತ್ತೆಯಾಗಿದ್ದು, 284 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೇಶದಲ್ಲಿ ಭಾನುವಾರ 35,551 ಹೊಸ ಕೇಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟೂ ಸೋಂಕಿತರ ಸಂಖ್ಯೆ 95,34,965 ಕ್ಕೆ ಏರಿಕೆಯಾಗಿದೆ. ಇದಲ್ಲದೇ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 526 ಜನರು ಸಾವನ್ನಪ್ಪಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 1,38,648 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ಒಂದೂವರೆ ತಿಂಗಳಿನಿಂದ ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಮತ್ತೆ ಏರತೊಡಗಿದೆ. ದೇಶದಲ್ಲಿ ಪ್ರಸ್ತುತ 4,22,943 ಸಕ್ರಿಯ ಪ್ರಕರಣಗಳು ಇದ್ದು, ನಿನ್ನೆ ಒಂದೇ ದಿನದಲ್ಲಿ 40,726 ಜನರು ಗುಣಮುಖರಾಗಿದ್ದಾರೆ.

ಇದನ್ನೂ ಓದಿರಿ: ಹೊಸ ವರ್ಷದ ದಿನವೇ ದುರಂತ : ದೇಗುಲ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿ 53 ಮಂದಿ ಅಸ್ವಸ್ಥ !

ನಿನ್ನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2716, ಮಹಾರಾಷ್ಟ್ರ 9170, ಕೇರಳ 2435, ತಮಿಳುನಾಡು 1489 ಹಾಗೂ ಪಶ್ಚಿಮ ಬಂಗಾಳದಲ್ಲಿ 4512 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಡಿಸೆಂಬರ್ 2 ರಂದು ಕರ್ನಾಟಕದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿತ್ತು. ಭಾರತದಲ್ಲಿ ಸದ್ಯಕ್ಕೆ ಒಟ್ಟು 1,525 ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಒಟ್ಟು 560 ಮಂದಿ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಭಾರತದಲ್ಲಿ ನಿನ್ನೆ ಒಂದೇ ದಿನ 11,11,698 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 14,35,57,647 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಇದನ್ನೂ ಓದಿರಿ: 15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ; ವ್ಯಾಕ್ಸಿನ್ ಪಡೆದ ಮಕ್ಕಳಿಗೆ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನ

ಹೊಸ ವರ್ಷದ ದಿನವೇ ದುರಂತ : ದೇಗುಲ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿ 53 ಮಂದಿ ಅಸ್ವಸ್ಥ !

new-year-day-tragedy-53-sick-including-19-children-who-consumed-temple-prasad

ಕೋಲಾರ: ಹೊಸ ವರ್ಷದ ದಿನವೇ ದುರಂತವೊಂದು ನಡೆದಿದ್ದು, ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿದಂತೆ 53 ಭಕ್ತರು ಅಸ್ವಸ್ಥಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.

ಯಲ್ಲೂರು ಹೋಬಳಿಯ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಭಕ್ತಾಧಿಗಳಿಗೆ ಚಿತ್ರಾನ್ನ ಮತ್ತು ಕೇಸರಿಬಾತ್ ಪ್ರಸಾದ ವಿತರಿಸಲಾಗಿತ್ತು. ಇದನ್ನು ಸೇವಿಸಿದ ಬಳಿಕ ವಾಂತಿಯಾಗಿ ಹಲವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಗ್ರಾಮಸ್ಥರು ಆಯಂಬುಲೆನ್ಸ್ ಮತ್ತು ಇತರೆ ವಾಹನಗಳ ಮೂಲಕ ಅಸ್ವಸ್ಥರನ್ನು ರಾತ್ರಿ 10 ಗಂಟೆಗೆ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿರಿ: 2.5 ಅಡಿ ಎತ್ತರವಿದ್ದ ಪ್ರಪಂಚದ ಮಾಜಿ ಕುಬ್ಜ ಮಹಿಳೆ ನಿಧನ !

2.5 ಅಡಿ ಎತ್ತರವಿದ್ದ ಪ್ರಪಂಚದ ಮಾಜಿ ಕುಬ್ಜ ಮಹಿಳೆ ನಿಧನ !

worlds-shortest-woman-dies-72cm-tall-unexpectedly-aged-just-33

ಟರ್ಕಿ: ಕೇವಲ 72 ಸೆಂಟಿಮೀಟರ್ (2.5 ಅಡಿ) ಎತ್ತರವಿದ್ದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎಂದು ಗಿನ್ನಿಸ್ ದಾಖಲೆ ಹೊಂದಿದ್ದ, ಪ್ರಪಂಚದ ಮಾಜಿ ಕುಬ್ಜ ಮಹಿಳೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಟರ್ಕಿಯ ಕದರ್ಲಿ ಪಟ್ಟಣದಲ್ಲಿ ವಾಸವಾಗಿದ್ದ, ವಿಶ್ವದ ಮಾಜಿ ಕುಬ್ಜ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದ 33 ವರ್ಷದ ಎಲಿಫ್ ಕೊಕಾಮನ್ ಎಂಬ ಮಹಿಳೆ ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಕಳೆದ ಮಂಗಳವಾರ ಅನಾರೋಗ್ಯಕ್ಕೀಡಾಗಿದ್ದ ಕೊಕಾಮನ್ ಅವರನ್ನ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಸಾಗಿತ್ತು. ಜೊತೆಗೆ ನ್ಯುಮೋನಿಯಾದಿಂದ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು ಎಂದು ತಿಳಿದುಬಂದಿದೆ. ವಿಶ್ವದ ಅತಿ ಕುಬ್ಜ ಯುವತಿ ಎಂಬ ದಾಖಲೆಗೆ ಪಾತ್ರವಾಗಿದ್ದ ಕೊಕಾಮನ್​ 2010ರಲ್ಲಿ ಗಿನ್ನೆಸ್​ ದಾಖಲೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿರಿ: ಕೋವಿಡ್-19: ದೇಶಾದ್ಯಂತ ಕೊರೊನಾ ಆತಂಕ; ಕಳೆದ 24 ಗಂಟೆಗಳಲ್ಲಿ 27 ಸಾವಿರ ಹೊಸ ಸೋಂಕಿತರು ಪತ್ತೆ

ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ; ನಾಳೆ ಕರ್ನಾಟಕ ಬಂದ್ ಇಲ್ಲ ಎಂದ ವಾಟಾಳ್ ನಾಗರಾಜ್

vatal-nagaraj-withdraw-karnataka-bandh-after-meeting-with-cm

ಬೆಂಗಳೂರು: ಕನ್ನಡ ಬಾವುಟವನ್ನು ಸುಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಎಂಇಎಸ್ ಸಂಘಟನೆ ನಿಷೇದಕ್ಕೆ ಆಗ್ರಹಿಸಿ ನಾಳೆ (ಡಿ.31) ಕರೆ ನೀಡಲಾಗಿದ್ದ ಬಂದನ್ನು ವಾಟಾಳ್ ನಾಗರಾಜ್ ಅವರು ವಾಪಾಸ್ ಪಡೆದಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಕೊವಿಡ್ ಕೇಸುಗಳು ಹೆಚ್ಚಾಗುತ್ತಲಿದೆ, ಇದರಿಂದಾಗಿ ಬಂದ್​ ಮಾಡುವುದು ಸರಿಯಲ್ಲ ಕೂಡಲೇ ಹಿಂಪಡೆಯಬೇಕೆಂದು ಹಲವು ನಾಯಕರು ಮನವಿ ಮಾಡಿದರೂ ವಾಟಾಳ್ ನಾಗರಾಜ್ ಬಂದ್​ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಆದರೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿ, ಜನರಿಗೆ ತೊಂದರೆಯಾಗುವುದರಿಂದ ಕರ್ನಾಟಕ ಬಂದ್​ ಹಿಂಪಡೆಯಬೇಕೆಂದು ಮನವಿ ಮಾಡಿದ್ದರು.

ಇದನ್ನೂ ಓದಿರಿ: ಬಾಕ್ಸಿಂಗ್ ಡೇ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 113 ರನ್ ಗಳ ಐತಿಹಾಸಿಕ ಜಯ, ಸರಣಿಯಲ್ಲಿ 1-0 ಮುನ್ನಡೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಗೃಹ ಕಚೇರಿ ಕೃಷ್ಣಾಗೆ ಕರೆಸಿ, ಮಾತುಕತೆ ನಡೆಸಿದ್ದಾರೆ. ಅಲ್ಲದೇ ಎಂಇಎಸ್ ನಿಷೇಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಭರವಸೆ ನೀಡಿದ್ದಾರೆ. ಹೊಸ ವರ್ಷಾಚರಣೆಯ ಸಮಯದಲ್ಲಿ ಬಂದ್ ನಡೆಸುವುದರಿಂದ ತೊಂದರೆ ಆಗುತ್ತದೆ ಎಂದು ಹಿಂಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಈ ಕುರಿತಂತೆ ವಾಟಾಳ್ ನಾಗರಾಜ್ ಮಾತನಾಡಿ, ಸಿಎಂ ಮನವಿಗೆ ಗೌರವ ನೀಡಲು ನಿರ್ಧರಿಸಿದ್ದೇನೆ. ಇದಲ್ಲದೇ ಒಕ್ಕೂಟದ ಮುಖಂಡರೂ ಬಂದ್ ಕೈಬಿಡುವಂತೆ ಒತ್ತಡ ಹೇರಿದ್ದರು. ಈ ರೀತಿಯ ಒತ್ತಡ ನನ್ನ ಜೀವನದಲ್ಲಿ ಎಂದೂ ಬಂದಿರಲಿಲ್ಲ. ಅವರ ಮಾತಿಗೆ ಕೊಡಬೇಕಾಯಿತು. ಸಿಎಂ ಭರವಸೆಯ ಹಿನ್ನೆಲೆಯಲ್ಲಿ ಬಂದ್ ಕೈ ಬಿಟ್ಟಿದ್ದೇವೆ, ಆದರೆ ಪ್ರತಿಭಟನೆ ಇರುತ್ತದೆ ಎಂದು ಹೇಳಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 113 ರನ್ ಗಳ ಐತಿಹಾಸಿಕ ಜಯ, ಸರಣಿಯಲ್ಲಿ 1-0 ಮುನ್ನಡೆ

india-win-first-test-match-against-south-africa-by-113-runs

ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 113 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಸೆಂಚುರಿಯನ್ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 305ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 191ರನ್ ಗಳಿಗೆ ಆಲೌಟ್ ಆಗಿ ಭಾರತದ ಎದುರು 113ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಅಂತೆಯೇ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿರಿ: ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ; ನಾಳೆ ಕರ್ನಾಟಕ ಬಂದ್ ಇಲ್ಲ ಎಂದ ವಾಟಾಳ್ ನಾಗರಾಜ್

ದೇಗುಲಗಳ ನಿರ್ಬಂಧ ಮುಕ್ತಗೊಳಿಸಲು ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

good-news-for-farmers-further-scheme-implemented-to-double-farmers-income-cm-bommai

ಹುಬ್ಬಳ್ಳಿ: ರಾಜ್ಯ ಸರಕಾರ ಇದೀಗ ಪ್ರಸ್ತುತದಲ್ಲಿರುವ ದೇಗುಲಗಳ ನಿರ್ಬಂಧಕ್ಕೆ ಸಂಬಂಧಿಸಿದ ಕಾನೂನುಗಳನ್ನು ತೆರವುಗೊಳಿಸುವ ನಿರ್ಧಾರವನ್ನು ಸದ್ಯದಲ್ಲಿಯೇ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ರಾಜ್ಯ ಸರಕಾರ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ಪ್ರಯತ್ನಿಸಿದ ನಂತರ ಇದೀಗ ಮತ್ತೊಂದು ಧಾರ್ಮಿಕ ವಿಚಾರ ಹೊಂದಿರುವ ಮತ್ತೊಂದು ಕಾನೂನು ಜಾರಿಗೆ ತರಲು ಸಿದ್ಧತೆ ನಡೆಸುಯುತ್ತಿದೆ ಎಂದು ಇಂದು ಸಿ ಎಂ ತಿಳಿಸಿದ್ದಾರೆ. ಇಂದು ಕಾರ್ಯಕಾರಣಿ ಸಭೆಯಲ್ಲಿ  ಮಾತನಾಡಿ ತಮ್ಮ ಸರ್ಕಾರವು ಹಿಂದೂ ದೇವಾಲಯಗಳನ್ನು ಕಾನೂನುಗಳು ಮತ್ತು ನಿಯಮಗಳಿಂದ ಮುಕ್ತಗೊಳಿಸುತ್ತದೆ. ಅದು ದೇವಾಲಯದ ಆಡಳಿತ ಮಂಡಳಿಗಳು ತಮ್ಮ ಆದಾಯವನ್ನ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುಮತಿ ಪಡೆಯುವಂತೆ ಮಾಡುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಕಾರ್ಯಕಾರಣಿ ಸಭೆಯಲ್ಲಿ ತಮ್ಮ ಮಾತನ್ನು ಮುಂದುವರೆಸಿ, ಹಿಂದೂ ದೇಗುಲಗಳನ್ನು ಕಾನೂನಿನಿಂದ ಮುಕ್ತ ಮಾಡುತ್ತೇವೆ. ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ಬಿಟ್ಟರೆ ಹೆಚ್ಚಿನದೇನು ಇರುವುದಿಲ್ಲ. ಬೇರೆ ಸಮುದಾಯದ ಪ್ರಾರ್ಥನಾ ಮಂದಿರಗಳಿಗೆ  ಸ್ವತಂತ್ರವಿರುವಂತೆ ಹಿಂದೂ ದೇವಾಲಯಗಳಿಗೂ ನೀಡಲಾಗುವುದು.  ಇದರಿಂದಾಗಿ ದೇವಸ್ಥಾನದ ಹಣ ದೇವಾಲಯಗಳ ಅಭಿವೃದ್ಧಿಗೆ  ಬಳಕೆ ಮಾಡಿಕೊಳ್ಳಲು ಸಹಾಯಕವಾಗಲಿದೆ. ಬಜೆಟ್‌ ಅಧಿವೇಶನದೊಳಗೆ ಇದಕ್ಕೆ ಕಾನೂನು ಸ್ವರೂಪ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.