ರಾಷ್ಟ್ರೀಯ ಗಣಿತ ದಿನದ ಸಮಯದಲ್ಲಿ ಪ್ರಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ನೆನಪು

national-mathematics-day-2021-know-about-srinivasa-ramanujan

ರಾಷ್ಟೀಯ ಗಣಿತ ದಿನವನ್ನಾಗಿ ಡಿಸೆಂಬರ್ 22 ನ್ನು ಆಚರಿಸಲಾಗುತ್ತದೆ. ಭಾರತೀಯ ಗಣಿತಶಾಸ್ತ್ರಜ್ಞರ ಸಾಧನೆ ಮತ್ತು ಜೀವನವನ್ನು ಗೌರವಿಸಲು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನವೆಂದು 2012 ರಲ್ಲಿ ಘೋಷಿಸಿದರು.

ಜನನ ಹಾಗೂ ಶಿಕ್ಷಣ

ಶ್ರೀನಿವಾಸ ರಾಮಾನುಜನ್ ತಮಿಳುನಾಡಿನ ಈರೋಡ್‌ನಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಡಿಸೆಂಬರ್ 22, 1887ರಂದು ಜನಿಸಿದರು. 1903ರಲ್ಲಿ ಕುಂಭಕೋಣಂ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಇವರು ಗಣಿತವಲ್ಲದ ವಿಷಯಗಳಿಗೆ ತೋರುತ್ತಿದ್ದ ನಿರ್ಲಕ್ಷ್ಯದಿಂದಾಗಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದರು.

ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಜೀವನದ ದಾರಿ ಬದಲಾಗಲಿ ಎಂದು ವಿವಾಹ ಏರ್ಪಡಿಸಿದರು

ಹೊಟ್ಟೆಪಾಡಿಗಾಗಿ ಅಲೆದಾಟ

ಮದುವೆ ಒಂದು ಬದಲಾವಣೆಯನ್ನು ತಂದಿತು. ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು. ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು. ಸ್ವಲ್ಪ ದಿನ ಮನೆಯ ಪಾಠಮಾಡಿದರು. ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. 1910 ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂದು ಹೋಗುವಷ್ಟರಮಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್. ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು. ಆದರೆ ರಾಮಾನುಜನ್ ಅವರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು.

ಇದನ್ನೂ ಓದಿರಿ: ಬೆನ್ನಿಗೆ ನಿಂತ ಕಿಚ್ಚನಿಗೆ ಧನ್ಯವಾದ ಹೇಳಿದ ದಚ್ಚು, ಫ್ಯಾನ್ಸ್ ಫುಲ್ ಖುಷ್

ಗಣಿತದ ಪ್ರತಿಭೆಯ ಅನಾವರಣ

1912 ರಲ್ಲಿ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಗುಮಾಸ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ರಾಮಾನುಜನ್ ಗಣಿತದ ಪ್ರತಿಭೆಯನ್ನು ಗಣಿತ ತಜ್ಞರಾಗಿದ್ದ ಅವರ ಸಹೋದ್ಯೋಗಿಯೊಬ್ಬರು ಗುರುತಿಸಿದರು. ಈ ಸಹೋದ್ಯೋಗಿಯು ರಾಮಾನುಜನ್‌ರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನ ಪ್ರೊಫೆಸರ್ ಜಿಎಚ್ ಹಾರ್ಡಿ ಬಳಿ ಶಿಫಾರಸು ಮಾಡಿದರು.

ಮೊದಲ ಮಹಾಯುದ್ಧ ಆರಂಭಗೊಳ್ಳುವ ಕೆಲವು ತಿಂಗಳುಗಳ ಮೊದಲು ರಾಮಾನುಜನ್ ಟ್ರಿನಿಟಿ ಕಾಲೇಜಿಗೆ ಸೇರ್ಪಡೆಗೊಂಡರು. 1916 ರಲ್ಲಿ ಅವರು ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದರು. ಅವರು 1917ರಲ್ಲಿ ಲಂಡನ್ ಮ್ಯಾಥಮೆಟಿಕಲ್ ಸೊಸೈಟಿಗೆ ಆಯ್ಕೆಯಾದರು. ದೀರ್ಘವೃತ್ತಿಯ ಕಾರ್ಯಗಳು ಹಾಗೂ ಸಂಖ್ಯೆಗಳ ಸಿದ್ಧಾಂತದ ಸಂಶೋಧನೆಗಾಗಿ ಪ್ರತಿಷ್ಠಿತ ರಾಯಲ್ ಸೊಸೈಟಿಯ ಫೆಲೋ ಆಗಿ ರಾಮಾನುಜನ್ ಆಯ್ಕೆಯಾದರು.

ಅದೇ ವರ್ಷದಲ್ಲಿ, ಅಕ್ಟೋಬರ್‌ನಲ್ಲಿ, ಅವರು ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯರಾದರು. 1919ರಲ್ಲಿ ಭಾರತಕ್ಕೆ ಮರಳಿದ ರಾಮಾನುಜನ್, 1 ವರ್ಷದ ಬಳಿಕ ಅಂದರೆ ತಮ್ಮ 32ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

1729 ಹಾರ್ಡಿ-ರಾಮಾನುಜನ್ ಸಂಖ್ಯೆ

ಅನಾರೋಗ್ಯದಲ್ಲಿದ್ದ ರಾಮಾನುಜನ್ ಅವರನ್ನು ನೋಡಲು ಹಾರ್ಡಿ ಟ್ಯಾಕ್ಸಿಯಲ್ಲಿ ಬಂದಿದ್ದರು. ಟ್ಯಾಕ್ಸಿ ಸಂಖ್ಯೆ 1729 ಯನ್ನು ನೋಡಿ ಇದು ಸಾಮಾನ್ಯ ಸಂಖ್ಯೆಯಲ್ಲ, ಎರಡು ವಿಭಿನ್ನ ಘನಗಳ ಮೊತ್ತವನ್ನು 2 ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಬಹುದಾದ ಚಿಕ್ಕ ಸಂಖ್ಯೆಯಾಗಿದೆ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here