ಕೈಗಾ, (ಅಕ್ಟೊಬರ್ 12) : ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು (ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕಗಳಿಗೆ ನೀಡಿರುವ ಪರಿಸರ ಅನುಮೋದನೆಯನ್ನು ಅಮಾನತುಗೊಳಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠ ಆದೇಶ ಹೊರಡಿಸಿದೆ.
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳು ನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದೆ. ಅದರ ಹಿನ್ನೆಲೆಯಲ್ಲಿ ಸೂಕ್ಷ್ಮ ಪರಿಸರದಲ್ಲಿ ವಲಯದಲ್ಲಿ ಯೋಜನೆಯ ಅನುಷ್ಠಾನ ಸಲ್ಲದು ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕ ವಿರೋಧಿ ಹೋರಾಟ ಸಮಿತಿಯು ಎನ್‌ಜಿಟಿ ಮೆಟ್ಟಿಲೇರಿತ್ತು.
ನ್ಯಾಯಮೂರ್ತಿ ಕೆ. ರಾಮಕೃಷ್ಣನ್ ಮತ್ತು ಪರಿಸರ ಸದಸ್ಯ ಸತ್ಯಗೋಪಾಲ್ ಕೊರ್ಲಪಾಟಿ ಅವರನ್ನೊಳಗೊಂಡ ಎನ್‌ಜಿಟಿಯ ದಕ್ಷಿಣ ಪೀಠವು ತನ್ನ ಆದೇಶದಲ್ಲಿ ಕೈಗಾ ಘಟಕ ಐದು ಮತ್ತು ಆರರ ವಿಸ್ತರಣಾ ಯೋಜನೆಗಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 235 ಮೆಗಾ ವ್ಯಾಟ್‌ನಿಂದ 700 ಮೆಗಾವ್ಯಾಟ್‌ಗೆ ಹೆಚ್ಚಿಸುವ ಮೂಲಕ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೀಡಲಾದ ಪರಿಸರ ಅನುಮತಿಯನ್ನು ಅಮಾನತುಗೊಳಿಸಿದೆ.
ಕರ್ನಾಟಕದಲ್ಲಿನ 20,668 ಚದರ ಕಿ.ಮೀ. ವಿಸ್ತೀರ್ಣದ ಪರಿಸರವನ್ನು ಸೂಕ್ಷ್ಮವೆಂದು ಗುರುತಿಸಲಾಗಿದ್ದು, ಯೋಜನಾ ಪ್ರದೇಶವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದೊಳಗೆ ಬರುತ್ತದೆಯೇ ಮತ್ತು ಕೈಗಾ ಗ್ರಾಮದ ಮೇಲೆ ಯೋಜನೆಯು ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಕುರಿತು ಯೋಜನಾ ಪ್ರತಿಪಾದಕರಿಗೆ ಹೆಚ್ಚುವರಿ ಉಲ್ಲೇಖಗಳನ್ನು ನೀಡಬೇಕು ಎಂದು ಎನ್‌ಜಿಟಿ ಹೇಳಿದೆ.
ಐದು ಹಾಗೂ ಆರನೇ ಘಟಕ ಸ್ಥಾಪನೆಯಿಂದ ಕಾಳಿ ನದಿಯ ನೀರಿನ ಮೇಲೆ ಮತ್ತು ಅಲ್ಲಿನ ಸ್ಥಳೀಯ ಜನರ ಮೇಲೆ ಉಂಟಾಗುವ ಪರಿಣಾಮಗಳ ಕುರಿತ ಅಧ್ಯಯನ ವರದಿಯನ್ನು ಸಲ್ಲಿಸಬೇಕು. ಈ ಯೋಜನೆಯಿಂದ ಪರಿಸರ ಸೂಕ್ಷ್ಮ ಪ್ರದೇಶದ ಮೇಲಾಗುವ ತೊಂದರೆ, ಘಟಕಗಳಿಂದ ಬರುವ ಅಣು ವಿಕಿರಣಗಳಿಂದ ಜನರ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆಯೂ ಅಧ್ಯಯನ ವರದಿ ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಬಳಿಕ ಒಂದು ತಿಂಗಳಲ್ಲಿ ಪರಿಸರ ಅನುಮೋದನೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಕೇಂದ್ರ ಪರಿಸರ ಸಚಿವಾಲಯ ತೀರ್ಮಾನಿಸಬೇಕು ಎಂದೂ ಪೀಠ ತಿಳಿಸಿದೆ.