ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೊದಲೇ ನಿಗದಿಯಾದಂತೆ ಇಂದು 4 ಗಂಟೆಗೆ ಮಾತನಾಡಿ, ದೇಶದ ಬಡ ಜನತೆಯ ಹಸಿವನ್ನು ನೀಗುವ ಸಲುವಾಗಿ ಜನತೆಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ ನೀಡಲಾಗಿದ್ದ ಉಚಿತ ರೇಷನ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಣೆ ಮಾಡುವ ನಿರ್ಧಾರವನ್ನು ಮುಂದಿಟ್ಟಿದ್ದಾರೆ.
ಈಗಾಗಲೇ ದೇಶದ 80 ಕೋಟಿಗೂ ಅಧಿಕ ಬಡವರಿಗೆ ಕೊರೊನಾ ಸಂಕಟದ ಸಮಯದಲ್ಲಿ ಗರೀಬ್ ಅನ್ನ ಯೋಜನೆಯ ಮೂಲಕ ಪ್ರತಿ ವ್ಯಕ್ತಿಗೆ 5 ಕೆ.ಜಿ.ಯಂತೆ ಅಕ್ಕಿ/ಗೋಧಿ ನೀಡಲಾಗಿತ್ತು. ಇದರೊಂದಿಗೆ ಪ್ರತಿ ಕುಟುಂಬಕ್ಕೂ 1 ಕೆ.ಜಿ.ಯಂತೆ ಬೆಳೆಯನ್ನು ವಿತರಿಸಲಾಗಿತ್ತು. ಸದ್ಯ ಸಂಕಟದ ಸಮಯ ಇನ್ನೂ ಮುಂದುವರೆದಿರುವುದರಿಂದ ಈ ಯೋಜನೆಯನ್ನು ನವೆಂಬರ್ ಅಂತ್ಯದ ವರೆಗೂ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ಸಂಕಟದ ಸಮಯದಲ್ಲಿ ಬಡವರು ಯಾವುದೇ ಕಾರಣಕ್ಕೂ ಹಸಿವಿನಿಂದ ಸಾಯಬಾರದು ಎನ್ನುವ ಕಾರಣದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮೋದಿಯವರು ತಿಳಿಸಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕೆ 90 ಸಾವಿರ ಕೋಟಿಯಷ್ಟು ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ.
ತಮ್ಮ ಭಾಷಣದ ಕೊನೆಯಲ್ಲಿ, ಸ್ವದೇಶಿ ವಸ್ತುಗಳನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸೋಣ ಮತ್ತು ಅತೀ ಚಿಕ್ಕ ಬ್ರಾಂಡನ್ನು ದೊಡ್ಡ ಬ್ರಾಂಡ್ ಆಗಿಸೋಣ ಎಂದು ಹೇಳಿದರು. ಪ್ರತಿಯೊಬ್ಬರೂ 2 ಅಡಿಗಳಷ್ಟು ಅಂತರವನ್ನು ಕಾಯ್ದುಕೊಂಡು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕಾರೋನಾ ಸೋಂಕಿನಿಂದ ದೂರವಿರೋಣ ಎನ್ನುವುದನ್ನು ಹೇಳಲು ಮರೆಯಲಿಲ್ಲ.