mysore-dasara-final-preparation

ಮೈಸೂರು: ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಕ್ಟೋಬರ್ 26 ರಂದು ಜಂಬೂ ಸವಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ಮೆರವಣಿಗೆಯ ಅಂತಿಮ ತಾಲೀಮು ನಡೆಸಲಾಯಿತು.

ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ಗಜಪಡೆ, ಕಲಾತಂಡಗಳು, ಅಶ್ವಾರೋಹಿ ಪಡೆ ತಾಲೀಮಿನಲ್ಲಿ ಭಾಗವಹಿಸಿದ್ದವು. ಈ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯು ಅಷ್ಟೇ ತೂಕದ ಮರದ ಅಂಬಾರಿ ಹೊತ್ತು ಯಶಸ್ವಿಯಾಗಿ ಸಾಗಿತು. ಇನ್ನು ನಾಳೆ ಆಯುಧ ಪೂಜೆಯ ಹಿನ್ನೆಲೆಯಲ್ಲಿ ತಾಲೀಮು ಇರುವುದಿಲ್ಲ.

ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಕೇವಲ 300 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಜಂಬೂ ಸವಾರಿಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಆದರೆ ನೇರ ವೀಕ್ಷಣೆಯನ್ನು ಮಾಧ್ಯಮಗಳಲ್ಲಿ ನೋಡುವಂತೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಬಲರಾಮ ಗೇಟ್ ನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಗಲಿದೆ. ಆಹ್ವಾನಿತರಿಗೆ ಮಾತ್ರ ಅರಮನೆ ಒಳಗಡೆ ಪ್ರವೇಶವಿದ್ದು, ಸಾರ್ವಜನಿಕರಿಗೆ ಅರಮನೆ ಪ್ರವೇಶ ಇರುವುದಿಲ್ಲ.

ಈ ಬಾರಿಯ ದಸರಾ ಮೆರವಣಿಗೆಯಲ್ಲಿ ವೀರಗಾಸೆ, ನಾದಸ್ವರ, ಸಾಂಸ್ಕೃತಿಕ ತಂಡ, ಅಶ್ವಪಡೆ, ಪೊಲೀಸ್ ಬ್ಯಾಂಡ್, ಸ್ತಬ್ಧಚಿತ್ರಗಳು, ಆನೆ ಬಂಡಿಯಲ್ಲಿ ಕರ್ನಾಟಕ ಪೋಲಿಸ್ ಬ್ಯಾಂಡ್, ಪೊಲೀಸ್ ಅಶ್ವದಳ, ಪಟ್ಟದ ನಾದಸ್ವರ, ಫಿರಂಗಿ ಗಾಡಿ, ಅಗ್ನಿಶಾಮಕ ತಂಡದ ತುರ್ತು ಚಿಕಿತ್ಸಾ ವಾಹನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.

LEAVE A REPLY

Please enter your comment!
Please enter your name here