ಬೆಂಗಳೂರು: ಕೊರೊನಾ ತಡೆಗಟ್ಟಲು ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ನಡೆಸಬೇಕಿದ್ದ ಪರೀಕ್ಷೆಗಳೂ ಮುಂದೂಡಲ್ಪಟ್ಟಿದ್ದವು. ಆದರೆ ಈಗ ಲಾಕ್ ಡೌನ್ ಸಡಿಲಿಕೆ ಘೋಷಣೆಯಾಗಿರುವುದರಿಂದ ಜೂನ್ 25 ರಿಂದ ಜುಲೈ4 ರ ವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಇನ್ನು ಪಿ.ಯು.ಸಿ. ಪರೀಕ್ಷೆಗಳು ನಡೆದು ಕೊನೆಯಲ್ಲಿ ಒಂದು ಪರೀಕ್ಷೆ ಉಳಿದುಕೊಂಡಿತ್ತು, ಅದನ್ನು ಜೂನ್ 18 ರಂದು ಮಾಡಲಾಗುವುದು ಎಂದು ಹೇಳಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬರನ್ನು ತರ್ಮಲ್ ಸ್ಕಾನಿಂಗ್ ಮೂಲಕ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ. ಈ ಸಮಯದಲ್ಲಿ ಜ್ವರ ಕಂಡುಬಂದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದರು.