ಮೈಸೂರು: ದಸರಾ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿರುವ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಂತಿಮ ಹಂತದ ಅಗತ್ಯ ಸಿದ್ಧತೆಗಳನ್ನು ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲನೆ ನಡೆಸಿದರು.
ಶನಿವಾರದಿಂದ ಪ್ರಾರಂಭವಾಗಲಿರುವ ಅದ್ದೂರಿ ಮೈಸೂರು ದಸರಾ ಉತ್ಸವಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಸಚಿವರು, ಉದ್ಘಾಟನಾ ವೇದಿಕೆ, ಬೆಳ್ಳಿ ಪಲ್ಲಕ್ಕಿ ಸೇರಿದಂತೆ ಹಲವು ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಲನೆ ಮಾಡಿದರು. ಇದಲ್ಲದೆ ಈ ಸಮಯದಲ್ಲಿ ಅಗತ್ಯವಿರುವ ಭದ್ರತೆಗೆ ಕೈಗೊಂಡ ಕ್ರಮಗಳ ಕುರಿತಾಗಿ ಮಾಹಿತಿಯನ್ನು ಪಡೆದರು.
ಈ ಬಾರಿಯ ಕೋವಿಡ್ ಸಂಕಷ್ಟದಿಂದಾಗಿ ತಜ್ಞರ ತಂಡ ನೀಡಿರುವ ಸೂಚನೆಗಳಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಈ ಬಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವರ ೨೦೦ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಕಾರ್ಯಕ್ರಮದ ಮುಂಬಾಗದಲ್ಲಿ ಕೇವಲ ೩೫ ವಿವಿಐಪಿ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಜೆನಡೆಯಲಿರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಭಾಗವಹಿಸಲಿದ್ದಾರೆ. ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರನ್ನು ಹೊರತುಪಡಿಸಿದರೆ ಉಳಿದ ಸಚಿವರು ಕೋವಿಡ್ ಹಿನ್ನೆಲೆಯಲ್ಲಿ ಬರುತ್ತಿಲ್ಲ ಎಂದು ಎಸ್ ಟಿ ಸೋಮಶೇಖರ್ ಮಾಹಿತಿ ನೀಡಿದರು.
ಈ ಸುದ್ದಿಯನ್ನು ಓದಿ: ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರಿಂದ ಈ ಬಾರಿಯ ದಸರಾ ಉದ್ಘಾಟನೆ
ಮನೆಯಲ್ಲೇ ಕಾರ್ಯಕ್ರಮ ವೀಕ್ಷಣೆಗೆ ಸಚಿವರ ಮನವಿ
ಸಾರ್ವಜನಿಕರ ಸಹಕಾರವನ್ನು ನಾವು ಈ ಕೋವಿಡ್ ಸಂದರ್ಭದಲ್ಲಿ ಕೋರುತ್ತಿದ್ದೇವೆ. ಕಾರ್ಯಕ್ರಮವನ್ನು ಲೈವ್ ಮುಖಾಂತರ ನೀಡಲಾಗುತ್ತಿರುವುದರಿಂದ ಸಾರ್ವಜನಿಕರು ಮನೆಯಲ್ಲಿಯೇ ವೀಕ್ಷಣೆ ಮಾಡಬೇಕು. ಯಾವುದೇ ಕಾರಣಕ್ಕೂ ಹೊರಗಡೆ ಗುಂಪು ಗುಂಪಾಗಿ ಕಾಣಿಸಿಕೊಳ್ಳಬಾರದು. ಒಟ್ಟಾಗಿ ನಿಂತು ಸೆಲ್ಫೀ ತೆಗೆದುಕೊಳ್ಳುದಕ್ಕೂ ಬ್ರೇಕ್ ಹಾಕಲಾಗಿದೆ ಎಂದು ಸಚಿವರು ತಿಳಿಸಿದರು.