minister-drsudhakar-comes-to-rescue-of-student-who-was-struggling-to-appear-for-neet-exam

ಶಿವಮೊಗ್ಗ: ಕೋವಿಡ್ -19 ರ ನಿರ್ಬಂಧ ಮತ್ತು ಕೆಲವು ಸಮಸ್ಯೆಗಳಿಂದ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದ ವಿದ್ಯಾರ್ಥಿನಿಗೆ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ಸಮಯೋಚಿತ ಸಹಾಯದಿಂದ ನಿರಾತಂಕದಿಂದ ಪರೀಕ್ಷೆ ಬರೆಯಲು ಸಾಧ್ಯವಾಯಿತು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತನುಜಾ ಕರ್ರೆಗೌಡ ಅವರು ಇದಕ್ಕೂ ಮೊದಲು ನಡೆದ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಇರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಚಿಕೊಂಡಿದ್ದರು. ಇವರ ಪೋಸ್ಟನ್ನು ನೋಡಿದ ಮುಖ್ಯಮಂತ್ರಿಗಳು ಮತ್ತು ಸುಧಾಕರ್ ಅಧಿಕಾರಿಗಳಿಗೆ ತಿಳಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಹೇಳಿದ್ದಾರೆ. ಇದರಿಂದಾಗಿ ಬೆಂಗಳೂರಿನ ಬಸವನಗುಡಿ ಪರೀಕ್ಷಾ ಕೇಂದ್ರದಲ್ಲಿ ತನುಜಾ ಅವರು ನೀಟ್ ಪರೀಕ್ಷೆಯನ್ನು ಬರೆದಿದ್ದಾರೆ.

ಶಿವಮೊಗ್ಗದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಸಿ ತನುಜಾ. ಇವಳ ತಂದೆ ನಾಗರಾಜ ಒಬ್ಬ ಕೃಷಿಕರಾಗಿದ್ದು, ತಮ್ಮ ಮಗಳನ್ನು ಕಷ್ಟಪಟ್ಟು ಓದಿಸಿದ್ದಾರೆ. ಸೆಪ್ಟೆಂಬರ್ 13 ರಂದು ಎನ್‍ಟಿಎ ನೀಟ್ ಪರೀಕ್ಷೆಯನ್ನು ಏರ್ಪಡಿಸಿತ್ತು. ಆದರೆ ತನುಜಾ ಅವರಿಗೆ ಜ್ವರ ಇದ್ದದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದಲ್ಲದೆ ಅವರ ಏರಿಯಾ ಕಂಟೈನ್ಮೆಂಟ್ ಏರಿಯಾ ಎಂದು ಘೋಷಣೆಯಾಗಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದರಿಂದ ತನ್ನ ಭವಿಷ್ಯದ ಬಗ್ಗೆ ತುಂಬಾನೇ ಬೇಸರಗೊಂಡಿದ್ದಳು. ಆದರೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದ್ದರಿಂದ ಎನ್‍ಟಿಎ ಏರ್ಪಡಿಸಬೇಕಾಯಿತು. ಈ ಬಾರಿ ಪರೀಕ್ಷೆ ಬರೆಯಲು ಕೋವಿಡ್ ಪರೀಕ್ಷಾ ವರಧಿ ಮತ್ತು ಕೆಲ ದಾಖಲೆಗಳನ್ನು ಇ-ಮೇಲ್ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಕೋವಿಡ್ ವರಧಿಯಲ್ಲಾದ ವಿಳಂಬ ಮತ್ತು ಗ್ರಾಮದಲ್ಲಿನ ನೆಟ್ವರ್ಕ್ ಸಮಸ್ಯೆಗಳಿಂದಾಗಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪರೀಕ್ಷೆ ಬರೆಯಲು ದೊರೆತ ಮತ್ತೊಂದು ಅವಕಾಶವೂ ಕೈಗೂಡುವಂತೆ ಕಾಣಲಿಲ್ಲ.

ಇದರಿಂದಾಗಿ ಆತಂಕಗೊಂಡ ತನುಜಾ ಅವರು ತಮ್ಮ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಮುಖ್ಯಮಂತ್ರಿಗಳು ಮತ್ತು ಸುಧಾಕರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.

ಈ ಕುರಿತು ಸಂತೋಷಗೊಂಡಿರುವ ತನುಜಾ ಅವರು ಮಾತನಾಡಿ, “ಸರ್ಜನ್ ಆಗಿ ಜನರ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಈಗ ನೀಟ್ ಪರೀಕ್ಷೆಯನ್ನು ಯಾವುದೇ ಆತಂಕ ಇಲ್ಲದೆ ಬರೆದಿದ್ದೇನೆ. ಪರೀಕ್ಷೆ ಬಹಳ ಚೆನ್ನಾಗಿತ್ತು ಎಂದೆನಿಸಿದೆ. ಸಿಎಂ ಹಾಗೂ ಸಚಿವರಿಗೆ ಧನ್ಯವಾದ” ಎಂದು ತಿಳಿಸಿದ್ದಾಳೆ.

ಇದನ್ನೂ ಓದಿರಿ: ಲಡಾಕ್ ಗಡಿಯಲ್ಲಿ ಚೀನಿ ಸೈನಿಕರಿಗೆ ಚಳಿಯ ಹೊಡೆತ : 5000 ಕ್ಕೂ ಹೆಚ್ಚು ಸೈನಿಕರು ಆಸ್ಪತ್ರೆಗೆ

LEAVE A REPLY

Please enter your comment!
Please enter your name here