ಬೆಂಗಳೂರು: ಚಿರಂಜೀವಿ ಸಾವಿನಿಂದ ದುಃಖ ದಲ್ಲಿದ್ದ ಕುಟುಂಬಕ್ಕೆ ಸಂತಸ ತುಂಬಲು ಇಂದು ಜೂನಿಯರ್ ಚಿರು ಎಂಟ್ರಿಕೊಟ್ಟಿದ್ದಾನೆ. ಮೇಘನಾ ರಾಜ್ ಅವರು ಇಂದು 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಿರಂಜೀವಿ ಅವರು ಹೃದಯಾಘಾತದಿಂದ ಮರಣ ಹೊಂದಿದ ನಂತರ ಚಿರು ಕುಟುಂಬ ದುಃಖದ ಸಾಗರದಲ್ಲಿ ಮುಳುಗಿ ಹೋಗಿತ್ತು. ನಂತರ ಕೆಲದಿನಗಳ ಹಿಂದೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನೂ ನಡೆಸಿತ್ತು. ಇಡೀ ಕುಟುಂಬ ಬರಲಿರುವ ಹೊಸ ಕುಟುಂಬ ಸದಸ್ಯನಿಗಾಗಿ ಕಾದಿತ್ತು.
ನಿನ್ನೆ ಮೇಘನಾ ಅವರು ಬೆಂಗಳೂರಿನ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಡೀ ಕುಟುಂಬ ಸಂಭ್ರಮದಲ್ಲಿ ತೇಲುವಂತೆ ಮಾಡಿದೆ.
ಇದೆ ಸಮಯದಲ್ಲಿ ಮಾತನಾಡಿದ ಮೇಘನಾ ರಾಜ್ ತಂದೆ ಸುಂದರ್ ರಾಜ್, ದುಃಖದ ಕಾರ್ಮೋಡ ಸರಿದು ನಮ್ಮ ಕುಟುಂಬಕ್ಕೆ ನವರಾತ್ರಿಯ ಸಂಭ್ರಮ ದೊರೆತಿದೆ. ಮಗು ಚಿರು ತರಾನೇ ಇದ್ದಾನೆ, ಇಡೀ ಕರ್ನಾಟಕದ, ಕನ್ನಡಿಗರ ಹಾರೈಕೆ ನಮ್ಮ ಮೇಲಿದೆ. ಕಷ್ಟದ ಸಮಯದಲ್ಲಿ ಎಲ್ಲರೂ ನಮ್ಮ ಜೊತೆಗಿದ್ದು ಹಾರೈಸಿದ್ದೀರಿ, ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.