ಮಂಗಳೂರು ಮೂಲದ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಗೆ ಕೊರೊನಾ ಸೋಂಕು ತಗುಲಿರುವುದು ದೃಡ ಪಟ್ಟಿದೆ. ಈ ಕುರಿತು ತಮ್ಮ ಫೆಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಕನ್ನಡ ಸಿನಿಮಾರಂಗದ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ಧ್ರುವ ಸರ್ಜಾ ಮತ್ತು ಹಲವಾರು ಕಿರುತೆರೆ ನಟ ನಟಿಯರಿಗೆ ಸೋಂಕು ಕಾಣಿಸಿಕೊಂಡಿತ್ತು. ಅವರೆಲ್ಲರೂ ಅಗತ್ಯ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದು, ಸಧ್ಯ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರಿಗೆ ಸೋಂಕು ತಗಲಿರುವ ವಿಚಾರ ಹೊರಬಿದ್ದಿದೆ.
ಇವರು ತಮ್ಮ ಫೆಸ್ ಬುಕ್ ಖಾತೆಯಲ್ಲಿ ಸೋಂಕು ದೃಡ ಪಟ್ಟ ಹಿನ್ನೆಲೆಯಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ನನಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಗುಣಮುಖನಾಗುತ್ತಿದ್ದೇನೆ. ಕೊರೊನಾ ಪರೀಕ್ಷೆ ಮತ್ತು ತಪಾಸಣೆಯ ಬಗ್ಗೆ ಸರಕಾರ ನೀಡಿರುವ ಸೌಲಭ್ಯವನ್ನು ಪ್ರಶಂಸಿಸಬೇಕು !! ಸುಲಭ, ಸ್ನೇಹಪರ, ಸ್ವಚ್ಚ ಮತ್ತು ಕಾಳಜಿ !! ಎಂದು ಬರೆದುಕೊಂಡಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಅಭಿಮಾನಿಗಳಿಗೆ ಒಂದು ಸಲಹೆಯನ್ನೂ ನೀಡಿದ್ದಾರೆ. ಕೊರೊನಾ ಸೋಂಕಿನ ಕುರಿತು ಯಾವುದೇ ಚಿಂತೆಯಾಗಲಿ, ಭಯವಾಗಲಿ ಅಗತ್ಯವಿಲ್ಲ. ಆದರೆ ನಿರ್ಲಕ್ಷ್ಯ ಬೇಡ. ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಇವರು ಕನ್ನಡ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಾತ್ರೆ, ರನ್ ಅಂಟೋನಿ, ವರ್ಜಿನ್ ಮುಂತಾದ ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ಇದಲ್ಲದೆ ತಮಿಳು, ತುಳು, ತೆಲಗು, ಮಲೆಯಾಳಂ ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.