ಚಾಮರಾಜನಗರ: ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸಂತ್ರಸ್ಥರ ಮನೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ನೀಡಿ ಕಾಂಗ್ರೆಸ್ ವತಿಯಿಂದ 1 ಲಕ್ಷ ರೂಪಾಯಿಯ ಪರಿಹಾರ ಚೆಕ್ ವಿತರಿಸಿದರು.
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಹೇಳಲು ಇಂದು ಕಾಂಗ್ರೆಸ್ ಪರಿವಾರವೇ ತೆರಳಿತ್ತು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದರು. ಇದೆ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇದು ಸರಕಾರವೇ ಮಾಡಿರುವ ಕೊಲೆ, ನ್ಯಾಯಾಲಯವೇ ಇದು ಆಕ್ಸಿಜನ್ ಕೊರತೆಯಿಂದಾದ ಸಾವು ಎಂದು ಹೇಳಿದೆ. ಇಷ್ಟಾದರೂ ಸರಕಾರ ಯಾವೊಬ್ಬ ಅಧಿಕಾರಿಯ ಮೇಲಾಗಲಿ, ಸಚಿವರ ಮೇಲಾಗಲಿ ಕ್ರಮ ಕೈಗೊಂಡಿಲ್ಲ. ಸರಕಾರ ಸತ್ತಿದೆಯಾ, ಬದುಕಿದೆಯಾ ಎಂದು ಜನ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿರಿ: ರಾಜ್ಯದಲ್ಲಿ ಕೊರೋನಾ ಇಳಿಮುಖ: ಇಂದು 3,604 ಪ್ರಕರಣ ಪತ್ತೆ, 89 ಮಂದಿ ಸಾವು !
ಯಡಿಯೂರಪ್ಪನವರು ಕೇವಲ ಶಿವಮೊಗ್ಗಕ್ಕೆ ಮುಖ್ಯಮಂತ್ರಿಯಲ್ಲ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ಚಾಮರಾಜನಗರ ಜಿಲ್ಲೆಯಲ್ಲಿ ಇಂತಹ ದುರ್ಘಟನೆ ನಡೆದರೂ ಇಲ್ಲಿಯವರೆಗೂ ಭೇಟಿ ನೀಡಿಲ್ಲ. ಮುಖ್ಯಮಂತ್ರಿಗಳು ಇಲ್ಲಿಗೆ ಬಂದರೆ ಜನ ಹೊಡೆಯುತ್ತಾರೆ ಎನ್ನುವ ಭಯ.. ಹಾಗಾಗಿ ಇಲ್ಲಿಗೆ ಭೇಟಿನೀಡಿಲ್ಲ. ಅಧಿಕಾರದಲ್ಲಿದ್ದವರು ತಪ್ಪು ಮಾಡಿದರೆ ಜನ ಬೈಯುವುದು ಸಹಜ. ಅದನ್ನೂ ಸ್ವೀಕರಿಸಬೇಕು ಎಂದು ಸರಕಾರದ ವಿರುದ್ಧ ಡಿಕೆ ಶಿವಕುಮಾರ್ ಅವರು ಕಿಡಿ ಕಾರಿದ್ದಾರೆ.