ಬೆಂಗಳೂರು: ರಾಜ್ಯಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬೀದಿಬದಿ ವ್ಯಾಪಾರಿಗಳು, ಬಡವರು ಮತ್ತು ಕೂಲಿಕಾರ್ಮಿಕರಿಗೆ ಸಹಾಯವಾಗಲಿ ಎಂದು ಇಂದಿನಿಂದ ಲಾಕ್ ಡೌನ್ ಮುಕ್ತಾಯವಾಗುವ ವರೆಗೆ ಉಚಿತ ಆಹಾರ ವಿತರಣೆ ಮಾಡಲಾಗುತ್ತದೆ.
ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾಗಿರುವವರ ಸಹಾಯಕ್ಕಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಉಚಿತವಾಗಿ ನೀಡಲು ಪೌರಾಡಳಿತ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜು ಮಾತನಾಡಿ, ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಮೇ ೨೪ ರ ವರೆಗೆ ಉಚಿತವಾಗಿ ಆಹಾರ ಪೂರೈಕೆ ಮಾಡಲಾಗುತ್ತದೆ. ಕೋವಿಡ್ ಮಾರ್ಗಸೂಚಿ ಪಾಲಿಸಿ, ಈ ಸೌಲಭ್ಯ ಬಳಸಿಕೊಂಡು, ಕರೋನಾ ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.