ಬೆಂಗಳೂರು: ಹೊಸ ವರ್ಷಕ್ಕೂ ಮುನ್ನ ರಾಜ್ಯಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ವಿದ್ಯುತ್ ದರವನ್ನು ಇಳಿಕೆ ಮಾಡುವ ಪ್ರಸ್ತಾಪವನ್ನು ಇಂಧನ ಇಲಾಖೆ ಸಿದ್ದಪಡಿಸಿದೆ. ಗೃಹ ಬಳಕೆಯೂ ಸೇರಿದಂತೆ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಇಂಧನ ದರ ಕಡಿತಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಗೃಹ ಬಳಕೆ ಸೇರಿದಂತೆ ಎಲ್ಲಾ ಬಗೆಯ ಗ್ರಾಹಕರಿಗೆ ಅನುಕೂಲ ನೀಡುವ ದೃಷ್ಟಿಯಿಂದ ವಿದ್ಯುತ್ ದರ ಕಡಿತಕ್ಕೆ ಚಿಂತನೆ ನಡೆದಿದೆ. ಪ್ರತಿ ಯುನಿಟ್ ಗೆ 70 ಪೈಸೆಯಿಂದ 2 ರೂಪಾಯಿ ವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸರಬರಾಜು ಕಂಪನಿಗಳಿಂದ ಕೆಇಆರ್ಸಿಗೆ ಸಲ್ಲಿಸುವ ಪ್ರಸ್ತಾವನೆಯಲ್ಲಿ “ಬಳಕೆದಾರರ ಶುಲ್ಕವನ್ನು” ವನ್ನು ಕಡಿಮೆ ಮಾಡಿ ದರಪಟ್ಟಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಸ್ತಾಪ ಕೇವಲ ಗೃಹ ಬಳಕೆ ಗ್ರಾಹಕರಿಗೆ ಮಾತ್ರವಲ್ಲ, ಎಚ್ ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್‌ಟಿ ಗ್ರಾಹಕರಿಗೂ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್ ಸಬ್ಸಿಡಿ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರು ಗ್ರಿಡ್ ತೊರೆಯುತ್ತಿದ್ದರು.
ಗ್ರಾಮೀಣ ಗ್ರಾಹಕರಿಗೆ ರಿಯಾಯಿತಿ ?
ಇಂಧನ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತುಸು ಹೆಚ್ಚಿನ ರಿಯಾಯಿತಿ ನೀಡುವ ಬಗ್ಗೆಯ ಪ್ರಸ್ತಾಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 50 ಯುನಿಟ್ ವರೆಗೆ ಲೈಫ್ ಲೈನ್ ಬಳಕೆಯ ಎಲ್ಟಿ 2 (ಎ1) ಹಾಗೂ ಎಲ್ಟಿ 2(ಎ2) ಗ್ರಾಹಕರಿಗೆ ಈಗ ಪ್ರತಿ ಯುನಿಟ್ ವಿಧಿಸುತ್ತಿದ್ದ 4.15 ರೂ ಹಾಗೂ 4.5 ರೂ. ಶುಲ್ಕವನ್ನು 3.7 ರೂ.ಗೆ ಇಳಿಸಲು ಚಿಂತನೆ ನಡೆಸಲಾಗಿದೆ.
50 ರಿಂದ 200 ಯುನಿಟ್ ವರೆಗೆ ಬಳಕೆಗೆ ಇಲ್ಲಿಯವರೆಗೆ ವಿಧಿಸುತ್ತಿದ್ದ ಎರಡು ಸ್ಲ್ಯಾಬ್‌ಗಳನ್ನು ಒಂದಕ್ಕೆ ಇಳಿಸಲು ನಿರ್ಧರಿಸಲಾಗಿದ್ದು, ಸರಾಸರಿ 5.4 ರೂ. ಪ್ರತಿ ಯುನಿಟ್ ಸರಾಸರಿ ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಪ್ರತಿ ಯುನಿಟ್ಗೆ ಸರಾಸರಿ 2 ರೂ. ವರೆಗೂ ಇಳಿಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. 200 ಯುನಿಟ್ ಹಾಗೂ ನಂತರದ ಬಳಕೆದಾರರಿಗೆ ಈಗಿರುವ 8.20 ಹಾಗೂ 7.70 ರೂ. ದರವನ್ನು ಏಕೀಕೃತಗೊಳಿಸಿ 7 ರೂ.ಗೆ ಇಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.