ರಿಷಬ್ ಶೆಟ್ಟಿ ಹೇಳಿರುವ ಕರಾವಳಿ ಮಣ್ಣಿನ ಕಥೆ “ಕಾಂತಾರ” ವನ್ನು ಜನಸಾಮಾನ್ಯರು ಮೆಚ್ಚಿಕೊಂಡಿದ್ದು, ದಾಖಲೆ ಬರೆಯುತ್ತಿದೆ. ಚಿತ್ರ ಬಿಡುಗಡೆಯಾಗಿ ಕೇವಲ 18 ದಿನಕ್ಕೆ 150 ಕೋಟಿ ಬಾಚಿಕೊಳ್ಳುವ ಮೂಲಕ ದೊಡ್ಡ ಯಶಸ್ಸನ್ನು ಗಳಿಸಿದೆ. ಆ ಮೂಲಕ 150 ಕೋಟಿ ಗಳಿಸಿದ ಕನ್ನಡದ 5ನೇ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಆರಂಭದಲ್ಲಿ ‘ಕಾಂತಾರ’ ಸಿನಿಮಾ ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಯಿತು, ಆದರೆ ಜನರ ಉತ್ತಮ ಪ್ರತಿಕ್ರಿಯೆ ಮತ್ತು ಸಿನಿಮಾಕ್ಕೆ ಸಿಕ್ಕ ವಿಮರ್ಶೆಗಳಿಂದ ಸೂಪರ್ ಹಿಟ್ ಆಯಿತು. ಇದೀಗ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಿ ಉತ್ತಮ ಬಾಕ್ಸ್ ಆಫಿಸ್ ಕಲೆಕ್ಷನ್ ಮಾಡುತ್ತಿದೆ.
‘ಕೆಜಿಎಫ್-1’ ಮೊದಲ ಬಾರಿಗೆ ₹150 ಕೋಟಿ ಸೇರಿದ ಕನ್ನಡ ಸಿನಿಮಾ ಆಗಿ ಹೊರಹೊಮ್ಮಿದ್ದರೆ, 4 ವರ್ಷದ ಹಿಂದೆ ‘ಕೆಜಿಎಫ್’ ಚಾಪ್ಟರ್-1 ₹250 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ನಂತರ ಅಪ್ಪು ಅಭಿನಯದ ಜೇಮ್ಸ್ ಚಿತ್ರ ₹150 ಕೋಟಿ ಕ್ಲಬ್ ಸೇರಿತ್ತು. ಇದಾದ ಬಳಿಕ ಬಂದ ‘ಕೆಜಿಎಫ್-2’ ₹1250 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅತಿ ಹೆಚ್ಚು ಗಳಿಸಿದ ಭಾರತದ 3ನೇ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯಿತು. ನಂತರ ವಿಕ್ರಾಂತ್ ರೋಣ ₹210 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರ ₹150 ಕೋಟಿ ಕ್ಲಬ್ ಸೇರ್ಪಡೆಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.