ಬೆಂಗಳೂರು: ಸಂಕಷ್ಟದಲ್ಲಿರುವ ನಟಿ ವಿಜಯಲಕ್ಷ್ಮಿ ಅವರಿಗೆ ಲಕ್ಷಾಂತರ ರೂಪಾಯಿ ಸಹಾಯಧನ ಹರಿದು ಬಂದಿದೆ. ಜನಸ್ನೇಹಿ ಅನಾಥಾಶ್ರಮ ಮಾಡಿಕೊಂಡಿದ್ದ ಮನವಿಗೆ 3 ಲಕ್ಷದ 2 ಸಾವಿರದ 900 ರೂ. ಸಂಗ್ರಹಗೊಂಡಿದ್ದು,ಈ ಹಣವನ್ನು ವಾಣಿಜ್ಯ ಮಂಡಳಿ ಮುಖೇನ ವಿಜಯಲಕ್ಷ್ಮೀಯವರಿಗೆ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ನಟಿ, ಸಹಾಯದ ರೂಪದಲ್ಲಿ ಬಂದಿರುವ ಹಣವನ್ನು ವಾಪಸ್ ಅನಾಥಾಶ್ರಮಕ್ಕೇ ಕೊಡಬೇಕೆಂದು ಆಲೋಚಿಸಿದ್ದೆ. ಆದರೆ, ಈ ಸಮಯದಲ್ಲಿ ಸಹೋದರಿಯ ಚಿಕಿತ್ಸೆಗೆ ಹಾಗೂ ವಾಸಿಸಲು ಸೂಕ್ತ ಮನೆಗಾಗಿ ಹಣದ ಅವಶ್ಯಕತೆಯಿರುವುದರಿಂದ ಅದನ್ನು ಯಾವ ರೀತಿ ಬಳಸಬೇಕೆಂದು ವಾಣಿಜ್ಯ ಮಂಡಳಿಯ ಹಿರಿಯರು ಸೂಚಿಸಿದ್ದಾರೆ ಎಂದರು.
ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಹಾಗೂ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿರುವ ನಟಿ ವಿಜಯಲಕ್ಷ್ಮಿ, ‘ಪ್ರಸ್ತುತ ನನ್ನ ಸುತ್ತ ಸ್ಟ್ರಾಂಗ್ ಫ್ಯಾಮಿಲಿ ಇದೆ. ಕರ್ನಾಟಕ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ನನ್ನ ಬೆನ್ನ ಹಿಂದಿದೆ’ ಎಂದು ಹೇಳಿಕೊಂಡಿದ್ದಾರೆ.